ಕುಸ್ತಿ; ಸಲ್ಮಾನ್ ಅರಬ್ ಮಿಂಚು

ಮಂಗಳವಾರ, ಜೂಲೈ 16, 2019
23 °C
ಶ್ರೀ ಶಾಂತೇಶ್ವರ ಪ್ರೌಢಶಾಲೆಯ ವಿದ್ಯಾರ್ಥಿ ಸಾಧನೆ

ಕುಸ್ತಿ; ಸಲ್ಮಾನ್ ಅರಬ್ ಮಿಂಚು

Published:
Updated:
Prajavani

ಇಂಡಿ: ದೇಸಿ ಕ್ರೀಡೆಗಳು ನಶಿಸುತ್ತಿರುವ ಇಂದಿನ ದಿನಗಳಲ್ಲಿ ಇಂಡಿ ಪಟ್ಟಣದ ಶ್ರೀ ಶಾಂತೇಶ್ವರ ಪ್ರೌಢಶಾಲೆಯ ವಿದ್ಯಾರ್ಥಿ ಸಲ್ಮಾನ್ ಬಂದೇನವಾಜ್ ಅರಬ್ ಕುಸ್ತಿಯಲ್ಲಿ ಉತ್ತಮ ಸಾಧನೆ ಮಾಡಿದ್ದಾನೆ.

10ನೇ ವರ್ಷದಿಂದಲೇ ಕುಸ್ತಿ ಕ್ರೀಡೆಯಲ್ಲಿ ಹೆಚ್ಚಿನ ಆಸಕ್ತಿ ತೋರಿಸಿ, 16ನೇ ವಯಸ್ಸಿನಲ್ಲಿ ರಾಜ್ಯಮಟ್ಟದ ಪ್ರೌಢಶಾಲೆಗಳ ಕುಸ್ತಿ ಸ್ಪರ್ಧೆಯಲ್ಲಿ ಭಾಗವಹಿಸಿರುವ ಅರಬ್ ಕುಸ್ತಿಯಲ್ಲಿ ಗಮನ ಸೆಳೆಯುತ್ತಿದ್ದಾನೆ.

2016–17ನೇ ಸಾಲಿನಿಂದ ಇಲ್ಲಿಯವರೆಗೆ ಸತತ ಮೂರು ಸಲ ತಾಲ್ಲೂಕು ಮಟ್ಟದ ಕುಸ್ತಿ ಕ್ರೀಡೆಯಲ್ಲಿ ಪ್ರಥಮ ಸ್ಥಾನ ಪಡೆದುಕೊಂಡು ಹ್ಯಾಟ್ರಿಕ್ ದಾಖಲೆ ಮಾಡಿದ್ದಾನೆ. 2015ನೇ ಸಾಲಿನಲ್ಲಿ ಜಮಖಂಡಿ ನಗರದಲ್ಲಿ ನಡೆದ ರಾಜ್ಯ ಮಟ್ಟದ ಪ್ರೌಢಶಾಲೆಗಳ ಕುಸ್ತಿ ಸ್ಪರ್ಧೆಯಲ್ಲಿ ಭಾಗವಹಿಸಿ ಆಯೋಜಕರ ಮೆಚ್ಚುಗೆಗೆ ಪಾತ್ರನಾಗಿದ್ದಾನೆ.

2018–19ನೇ ಸಾಲಿನಲ್ಲಿ 110 ಕೆ.ಜಿ ವಿಭಾಗದಲ್ಲಿ ವಿಜಯಪುರ ಜಿಲ್ಲಾ ಮಟ್ಟದ ಪ್ರೌಢಶಾಲೆಗಳ ಕ್ರೀಡಾಕೂಟದಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಾನೆ. ಇದನ್ನು ಗಮನಿಸಿದ ಕ್ರೀಡಾ ಇಲಾಖೆ ವಲಯ ಮಟ್ಟಕ್ಕೆ ಕಳುಹಿಸಿಕೊಟ್ಟಿತ್ತು. ಅಲ್ಲಿಯೂ ಕೂಡ ಪ್ರಥಮ ಸ್ಥಾನ ಪಡೆದುಕೊಂಡು ಶ್ರೀ ಶಾಂತೇಶ್ವರ ಪ್ರೌಢಶಾಲೆಗೆ ಕೀರ್ತಿ ತಂದಿದ್ದಾನೆ.

ಸಲ್ಮಾನ್ ಅರಬ್ 5ನೇ ತರಗತಿಯಿಂದ ಇಲ್ಲಿಯವರೆಗೆ ಶಾಲೆಯ ವಾರ್ಷಿಕ ಕ್ರೀಡಾಕೂಟಗಳಲ್ಲಿ ಪ್ರತೀ ವರ್ಷ ಪ್ರಥಮ ಸ್ಥಾನ ಪಡೆದುಕೊಳ್ಳುತ್ತ ಬಂದಿದ್ದಾನೆ. ಇಂಡಿ ಪಟ್ಟಣದ ಗರಡಿ ಮನೆಯಲ್ಲಿ ನಿತ್ಯ ತರಬೇತಿ ಪಡೆಯುತ್ತಿದ್ದು, ಶಾಲಾ ಅವಧಿಯಲ್ಲಿಯೇ ರಾಜ್ಯಮಟ್ಟದ ಕುಸ್ತಿ ಸ್ಪರ್ಧೆಯಲ್ಲಿ ಭಾಗವಹಿಸಿ, ಪ್ರಥಮ ಪ್ರಶಸ್ತಿ ಗಳಿಸಿಕೊಳ್ಳಬೇಕು ಎಂಬ ತವಕದಲ್ಲಿದ್ದಾನೆ. ಶ್ರೀ ಶಾಂತೇಶ್ವರ ಪ್ರೌಢ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಆರ್.ಬಿ.ಧನಶೆಟ್ಟಿ ಅವರು ತರಬೇತಿ ನೀಡುತ್ತಿದ್ದಾರೆ.

ಪ್ರಸ್ತುತ ಶಾಂತೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಗೆ ಪ್ರವೇಶ ಪಡೆದುಕೊಂಡಿದ್ದಾನೆ. ಕುಸ್ತಿಯಲ್ಲಿ ಇನ್ನಷ್ಟು ಸಾಧನೆ ಮಾಡಬೇಕು ಎಂಬ ತುಡಿತ ಈತನದ್ದು. ಬೆಳೆಯುವ ಸಿರಿ ಮೊಳಕೆಯಲ್ಲಿ ನೋಡು ಎನ್ನುವಂತೆ ಪ್ರಾಥಮಿಕ ಶಾಲೆಯಿಂದ ಕುಸ್ತಿ ಸ್ಪರ್ಧೆಯೊಂದನ್ನೇ ಆಯ್ಕೆ ಮಾಡಿಕೊಂಡಿರುವ ಸಲ್ಮಾನ್ ನಿತ್ಯ ತರಬೇತಿಯಲ್ಲಿ ತೊಡಗಿಸಿಕೊಂಡು ಸಾಧನೆ ಮಾಡುತ್ತ ಬಂದಿದ್ದಾನೆ.

ಕುಸ್ತಿ ಬಗ್ಗೆ ತನ್ನ ಸಹಪಾಠಿಗಳಲ್ಲಿ ಆಸಕ್ತಿ ಮೂಡಿಸುವ ಕೆಲಸದಲ್ಲಿಯೂ ತೊಡಗಿಸಿಕೊಂಡಿರುವ ಈತ, ಸುಮಾರು 10 ವಿದ್ಯಾರ್ಥಿಗಳನ್ನು ಕುಸ್ತಿ ತರಬೇತಿಗೆ ಕರೆದೊಯ್ಯುತ್ತಿದ್ದಾನೆ. ಮನೆಯಲ್ಲಿ ತಂದೆ ಪ್ರೋತ್ಸಾಹ ನೀಡುತ್ತಿದ್ದಾರೆ. ಶಾಲೆಯ ಆಡಳಿತ ಮಂಡಳಿ ಕೂಡ ಈತನಿಗೆ ಸಾಥ್ ನೀಡುತ್ತಿದೆ. ಸ್ಥಳೀಯ ಶ್ರೀ ಶಾಂತೇಶ್ವರ ದೇವಸ್ಥಾನದ ಜಾತ್ರೆಯಲ್ಲಿ ನಡೆದ ಕುಸ್ತಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಸಲ್ಮಾನ್ ಅಲ್ಲಿಯೂ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದಾನೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !