ಮಂಗಳವಾರ, ಅಕ್ಟೋಬರ್ 22, 2019
25 °C
ವಿದ್ಯಾ ವಿಷಯಕ ಪರಿಷತ್ ಸಭೆಯಲ್ಲಿ ಹಲವು ನಿರ್ಧಾರ, ಕುಲಪತಿ ಬಿ.ಪಿ.ವೀರಭದ್ರಪ್ಪ ಮಾಹಿತಿ

ಕೆಎಸ್‌ಯುಆರ್‌ಎಫ್‌ ರ್‍ಯಾಂಕಿಂಗ್‌ನಲ್ಲಿ ಕುವೆಂಪು ವಿವಿಗೆ ಮೊದಲ ಸ್ಥಾನ

Published:
Updated:
Prajavani

ಶಿವಮೊಗ್ಗ: ಕುವೆಂಪು ವಿಶ್ವವಿದ್ಯಾಲಯವು ಉನ್ನತ ಶಿಕ್ಷಣ ಇಲಾಖೆಯ ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಮಂಡಳಿ ಬಿಡುಗಡೆಗೊಳಿಸಿರುವ ಕೆಎಸ್‌ಯುಆರ್‌ಎಫ್‌ (ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ಶ್ರೇಣೀಕರಣ) ಪಟ್ಟಿಯಲ್ಲಿ ರಾಜ್ಯದ ಸರ್ಕಾರಿ ವಿಶ್ವವಿದ್ಯಾಲಯಗಳಲ್ಲಿ ಮೊದಲ ಸ್ಥಾನ ಹಾಗೂ ಎಲ್ಲ ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿ ಮೂರನೇ ಸ್ಥಾನ ಗಳಿಸಿದೆ ಎಂದು ಕುಲಪತಿ ಪ್ರೊ.ಬಿ.ಪಿ.ವೀರಭದ್ರಪ್ಪ ಹರ್ಷ ವ್ಯಕ್ತಪಡಿಸಿದರು.

ರಾಜ್ಯದ ಒಟ್ಟು 62 ವಿಶ್ವವಿದ್ಯಾಲಯಗಳು ಕೆಎಸ್‌ಯುಆರ್‌ಎಫ್‌ ರ್‍ಯಾಂಕ್‌ ವ್ಯಾಪ್ತಿಯಲ್ಲಿ ಬರಲಿದ್ದು, ಮೊದಲೆರಡು ಸ್ಥಾನಗಳನ್ನು ಮಣಿಪಾಲ ಉನ್ನತ ಶಿಕ್ಷಣ ಅಕಾಡೆಮಿ ಮತ್ತು ಕೆ.ಎಲ್.ಇ. ವಿಶ್ವವಿದ್ಯಾಲಯಗಳು ಪಡೆದಿವೆ ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. 

ಮಾನದಂಡ: ಶಿಕ್ಷಣ ಸಂಸ್ಥೆಯ ಸಂಶೋಧನೆ, ಆವಿಷ್ಕಾರ, ಬೋಧನೆ, ಮೂಲ ಸೌಕರ್ಯ ಹಾಗೂ ಸಾಮಾಜಿಕ ಪರಿಣಾಮಗಳೆಂಬ ಐದು ಮಾನದಂಡಗಳನ್ನು ಪರಿಗಣಿಸಿ ರ್‍ಯಾಂಕಿಂಗ್ ಪಟ್ಟಿ ತಯಾರಿಸಲಾಗಿದೆ. ಈ ಎಲ್ಲ ಮಾನದಂಡಗಳಲ್ಲೂ ಉತ್ತಮ ಅಂಕ ಪಡೆಯುವ ಮೂಲಕ ರ್‍ಯಾಂಕ್‌ ಪಡೆದಿದೆ. ಈಗಾಗಲೇ ವಿಶ್ವವಿದ್ಯಾಲಯವು ನ್ಯಾಕ್‌ನಿಂದ ‘ಎ’ ಶ್ರೇಣಿ, ಎನ್.ಐ.ಆರ್.ಎಫ್.ನಿಂದ 73ನೇ ರ್‍ಯಾಂಕ್ ಹಾಗೂ ಸೈಮ್ಯಾಗೋ ರ್‍ಯಾಂಕಿಂಗ್‌ನಲ್ಲಿ ದೇಶದಲ್ಲೇ 45ನೇ ಸ್ಥಾನ ಪಡೆದಿದ್ದು, ಪ್ರಸ್ತುತ ಕೆಎಸ್‌ಯುಆರ್‌ಎಫ್‌ ರ್‍ಯಾಂಕಿಂಗ್‌ನಲ್ಲಿಯೂ ಮೂರನೇ ಸ್ಥಾನ ಪಡೆದಿರುವುದು ನಮ್ಮ ವಿಶ್ವವಿದ್ಯಾಲಯದ ಶೈಕ್ಷಣಿಕ ಮತ್ತು ಸಂಶೋಧನಾ ಗುಣಮಟ್ಟದ ಸ್ಥಿರತೆ ತೋರ್ಪಡಿಸುತ್ತದೆ ಎಂದರು.

ಅನೇಕರ ಸಹಭಾಗಿತ್ವ: ಈ ರ್‍ಯಾಂಕ್ ಪಡೆಯುವುದರ ಹಿಂದೆ ಈ ಹಿಂದಿನ ಕುಲಪತಿಗಳು, ಕುಲಸಚಿವರು, ಅಧ್ಯಾಪಕರು, ಸಿಬ್ಬಂದಿಯ ಶ್ರಮ ಸಾಕಷ್ಟಿದೆ. ಅವರು ಮಾಡಿರುವ ಉತ್ತಮ ಕೆಲಸಗಳು, ದೂರದೃಷ್ಟಿಯ ಕಲ್ಪನೆಯಿಂದಾಗಿ ವಿಶ್ವವಿದ್ಯಾಲಯ ಸಾಧನೆಗಳ ಕಡೆ ದಾಪುಗಾಲು ಹಾಕುತ್ತಿದೆ. ಮುಂದೆ ಕೆಎಸ್‌ಆರ್‌ಎಫ್‌ಯು ರ್‍ಯಾಂಕ್‌ನಲ್ಲಿ ಮೊದಲ ಅಥವಾ ದ್ವಿತೀಯ ಸ್ಥಾನ ಗಳಿಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಕುಲಸಚಿವ ಎಸ್‌.ಎಸ್‌.ಪಾಟೀಲ್, ಪರೀಕ್ಷಾಂಗ ಕುಲಸಚಿವ ವೆಂಕಟೇಶ್ವರಲು, ಹಣಕಾಸು ಅಧಿಕಾರಿ ಹಿರೇಮಣಿ ನಾಯ್ಕ್, ಡಾ.ಸತ್ಯಪ್ರಕಾಶ್ ಇದ್ದರು.

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಕ್ರಿಯಿಸಿ (+)