ಮುದ್ದೇಬಿಹಾಳ ಪುರಸಭೆ ಚುನಾವಣೆ:ಬಹುಮತ ಕೊರತೆ; ದೋಸ್ತಿಗೆ ಸಿದ್ಧತೆ..?

7
ಮತ ಎಣಿಕೆಗೆ ಕ್ಷಣಗಣನೆ

ಮುದ್ದೇಬಿಹಾಳ ಪುರಸಭೆ ಚುನಾವಣೆ:ಬಹುಮತ ಕೊರತೆ; ದೋಸ್ತಿಗೆ ಸಿದ್ಧತೆ..?

Published:
Updated:

ಮುದ್ದೇಬಿಹಾಳ: ಇಲ್ಲಿನ ಪುರಸಭೆಯ 22 ವಾರ್ಡ್‌ಗಳ ಮತ ಎಣಿಕೆಗೆ ಕ್ಷಣಗಣನೆ ಆರಂಭಗೊಂಡಿದೆ. ಈ ಬಾರಿಯೂ ಒಂದೇ ಪಕ್ಷ ಬಹುಮತ ಪಡೆದು ಅಧಿಕಾರದ ಚುಕ್ಕಾಣಿ ಹಿಡಿಯುವುದು ಅನುಮಾನ ಎಂಬ ಚರ್ಚೆ ಪಟ್ಟಣದಲ್ಲಿ ಬಿರುಸುಗೊಂಡಿದೆ.

ಪಟ್ಟಣದ ಬಹುತೇಕ ವಾರ್ಡ್‌ಗಳಲ್ಲಿ ಮುಸ್ಲಿಂ ಬಾಹುಳ್ಯವಿದ್ದು ಇಲ್ಲಿ ಕಾಂಗ್ರೆಸ್‌ ಜಯಭೇರಿ ಬಾರಿಸಿದರೆ, ಉಳಿದೆಡೆ ಬಿಜೆಪಿ, ಕೆಲವೆಡೆ ಜೆಡಿಎಸ್‌ ಸಹ ಗೆಲುವು ಸಾಧಿಸಲಿವೆ.

23 ಸದಸ್ಯ ಬಲದ ಪುರಸಭೆಯಲ್ಲಿ ಕಾಂಗ್ರೆಸ್‌ ಅವಿರೋಧ ಆಯ್ಕೆ ಮೂಲಕ ಈಗಾಗಲೇ ಖಾತೆ ತೆರೆದಿದೆ. ಬಹುಮತಕ್ಕೆ ಇನ್ನೂ 11 ಸ್ಥಾನಗಳ ಅಗತ್ಯವಿದೆ. ಇಷ್ಟು ಸ್ಥಾನ ಗೆಲ್ಲುವುದು ಅನುಮಾನ. 8ರಿಂದ 9 ವಾರ್ಡ್‌ ಕೈ ವಶವಾದರೆ ಹೆಚ್ಚು ಎಂಬ ವಿಶ್ಲೇಷಣೆ ರಾಜಕೀಯ ಪಡಸಾಲೆಯಲ್ಲಿ ನಡೆದಿದೆ.

ಬಿಜೆಪಿ ಸಹ ಬಹುಮತದ ಬಳಿ ಸುಳಿಯುವುದು ಸದ್ಯದ ಲೆಕ್ಕಾಚಾರದಲ್ಲಿ ಕಷ್ಟವಿದೆ. ಎರಡಂಕಿ ಮುಟ್ಟಿದರೇ ಹೆಚ್ಚು ಎಂಬ ವಾಸ್ತವವಿದೆ. ಜೆಡಿಎಸ್‌ ಹಿಂದಿನ ಸಾಧನೆ ಉಳಿಸಿಕೊಳ್ಳೋದು ಕಷ್ಟಸಾಧ್ಯ ಎಂಬ ಮಾತುಗಳೇ ಹೆಚ್ಚಿನದಾಗಿ ಕೇಳಿಬಂದಿವೆ.

ಮೈತ್ರಿಯ ದೋಸ್ತಿ:

ಚುನಾವಣಾ ಪೂರ್ವ ಮೈತ್ರಿ ಮಾಡಿಕೊಳ್ಳದ ಕಾಂಗ್ರೆಸ್‌, ಜೆಡಿಎಸ್‌ ಚುನಾವಣೋತ್ತರ ಮೈತ್ರಿ ಮಾಡಿಕೊಳ್ಳಲಿವೆ ಎಂಬ ಚರ್ಚೆ ಬಿರುಸುಗೊಂಡಿದೆ.

ಹಿಂದಿನ ಅವಧಿಗಿಂತ ಈ ಬಾರಿ ಕಾಂಗ್ರೆಸ್‌, ಬಿಜೆಪಿ ಹೆಚ್ಚಿನ ಸಾಧನೆಗೈಯುವುದು ಖಚಿತ. ಇದೇ ರೀತಿ ಜೆಡಿಎಸ್‌, ಪಕ್ಷೇತರರು ತಮ್ಮ ಪ್ರಾಬಲ್ಯ ಕಳೆದುಕೊಳ್ಳಲಿದ್ದಾರೆ. 2013ರಲ್ಲಿ ಪಕ್ಷೇತರರು–12, ಜೆಡಿಎಸ್‌–6, ಕಾಂಗ್ರೆಸ್‌–4 ಸ್ಥಾನ ಗಳಿಸಿದ್ದರೆ, ಬಿಜೆಪಿ 1 ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು.

ಹಾಲಿ ಶಾಸಕ ಎ.ಎಸ್‌.ಪಾಟೀಲ ನಡಹಳ್ಳಿ ಕಮಲ ಅರಳಿಸಲು ಶ್ರಮವಹಿಸಿದ್ದರೇ, ಮಾಜಿ ಸಚಿವ ಸಿ.ಎಸ್‌.ನಾಡಗೌಡ ಸೋಲಿನ ಪ್ರತೀಕಾರ ತೀರಿಸಲಿಕ್ಕಾಗಿ ಪಕ್ಷದಿಂದಲೇ ಹೆಚ್ಚು ಅಭ್ಯರ್ಥಿಗಳನ್ನು ಕಣಕ್ಕಿಳಿಸಿ, ಚುನಾವಣೆಯನ್ನು ತಮ್ಮ ಪ್ರತಿಷ್ಠೆಯನ್ನಾಗಿ ಸ್ವೀಕರಿಸಿದ್ದರು.

ಮತ ಎಣಿಕೆ ಪೂರ್ಣಗೊಂಡು ಫಲಿತಾಂಶ ಪ್ರಕಟಕ್ಕೂ ಮುನ್ನವೇ ಮೈತ್ರಿಯ ಮಾತು ಪುರಸಭೆ ಅಂಗಳದಿಂದ ಮಾರ್ದನಿಸಲಾರಂಭಿಸಿವೆ. ಕಾಂಗ್ರೆಸ್‌, ಜೆಡಿಎಸ್‌ ಮೈತ್ರಿ ಅಧಿಕಾರದ ಚುಕ್ಕಾಣಿ ಹಿಡಿಯುತ್ತದೆಯೋ ? ಬಿಜೆಪಿ–ಪಕ್ಷೇತರರ ಮೈತ್ರಿ ನಡೆಯುತ್ತದೆಯೋ ? ಇಲ್ಲವೇ ಅಚ್ಚರಿ ಎಂಬಂತೆ ಹೊಸ ಮೈತ್ರಿ ಸೃಷ್ಟಿಯಾಗುತ್ತದೆಯೋ ಎಂಬ ಚರ್ಚೆ ಇದೀಗ ಪಟ್ಟಣದಲ್ಲಿ ಬಿರುಸುಗೊಂಡಿದೆ.

ಇದು ಚುನಾವಣೆಯಲ್ಲಿ ಪಕ್ಷವನ್ನು ಮುನ್ನಡೆಸಿದ್ದ ನೇತಾರರ ಲೆಕ್ಕಾಚಾರವಾಗಿದ್ದರೆ; ಇನ್ನೂ ಅಭ್ಯರ್ಥಿಗಳ ತಳಮಳ ತಾರಕಕ್ಕೇರಿದೆ. ಮತ ಎಣಿಕೆಗೂ ಮುನ್ನವೇ ಮತದಾರರ ಪಟ್ಟಿ ಇಟ್ಟುಕೊಂಡು, ಚಲಾವಣೆಯಾದ ಮತಗಳ ಸಂಖ್ಯೆ ಆಧರಿಸಿ ‘ಮತ ಗಣಿತ’ ನಡೆಸಿದ್ದಾರೆ ಎಂದು ಅಭ್ಯರ್ಥಿಯ ಬೆಂಬಲಿಗರೊಬ್ಬರು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !