ಮುಂಗಾರು ಮಳೆ ಕೊರತೆ; ಬಾಡುತ್ತಿರುವ ಬೆಳೆ

7
ಇಂಡಿ ತಾಲ್ಲೂಕಿನಲ್ಲಿ 72.5% ಮಾತ್ರ ಮುಂಗಾರು ಬಿತ್ತನೆ; ತೇವಾಂಶ ಕೊರತೆಯಲ್ಲಿ ಹೆಚ್ಚಳ

ಮುಂಗಾರು ಮಳೆ ಕೊರತೆ; ಬಾಡುತ್ತಿರುವ ಬೆಳೆ

Published:
Updated:
Deccan Herald

ಇಂಡಿ:  ತಾಲ್ಲೂಕಿನಾದ್ಯಂತ ಮುಂಗಾರು ಮಳೆಯ ಕೊರತೆ ಹೆಚ್ಚಿದೆ. ಇದರ ಜತೆಗೆ ಭೂಮಿಯಲ್ಲಿನ ತೇವಾಂಶ ಕೊರತೆ ಪ್ರಮಾಣವೂ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು; ಬೆಳೆಗಳು ಬಾಡಲಾರಂಭಿಸಿವೆ.

ಜುಲೈ ತಿಂಗಳಲ್ಲಿ ವಾಡಿಕೆ ಮಳೆಯೂ ಸುರಿದಿಲ್ಲ. 9 ಸೆಂ.ಮೀ. ವರ್ಷಧಾರೆಯಾಗಬೇಕಾದ ಸ್ಥಳದಲ್ಲಿ ಕೇವಲ 2.86 ಸೆಂ.ಮೀ. ಮಳೆ ಸುರಿದಿದೆ. ಆಗಸ್ಟ್‌ನಲ್ಲಿ 10 ಸೆಂ.ಮೀ. ಮಳೆ ಸುರಿಯಬೇಕಿದೆ. ಆದರೆ ಅರ್ಧ ತಿಂಗಳು ಗತಿಸಿದರೂ ಒಂದು ಹನಿಯೂ ಹನಿದಿಲ್ಲ. ಆಷಾಢ ಮುಗಿದು ಶ್ರಾವಣ ಮಾಸ ಆರಂಭಗೊಂಡರೂ; ನಿತ್ಯವೂ ಬಾನಂಗಳದಲ್ಲಿ ದಟ್ಟೈಸುವ ಕಾರ್ಮೋಡಗಳು ಒಂದು ಹನಿ ಮಳೆ ಸುರಿಸದಿರುವುದು ರೈತನ ಚಿಂತೆ ಹೆಚ್ಚಿಸಿದೆ.

ಇದರ ಜತೆಗೆ ಈಗಾಗಲೇ ಮುಂಗಾರು ಹಂಗಾಮಿನಲ್ಲಿ ಬಿತ್ತನೆಯಾಗಿದ್ದ ತೊಗರಿ, ಶೇಂಗಾ, ಸಜ್ಜೆ, ಮೆಕ್ಕಜೋಳ, ಹೆಸರು, ಹುರಳಿ, ಉದ್ದು, ಸೂರ್ಯಕಾಂತಿ, ಎಳ್ಳು, ಹತ್ತಿ ಇನ್ನಿತರೆ ಬೆಳೆಗಳು ಬಾಡುತ್ತಿವೆ. 45000 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯಾಗಿರುವ ತೊಗರಿ ಬಾಡುತ್ತಿದೆ. ಇನ್ನುಳಿದ ಅಲ್ಪಾವಧಿಯ ಬೆಳೆಗಳಾದ ಹೆಸರು ಮತ್ತು ಇನ್ನಿತರ ದ್ವಿದಳ ಬೆಳೆಗಳು ತೇವಾಂಶದ ಕೊರತೆಯಿಂದ ಒಣಗಿ ಹೋಗಿವೆ ಎಂದು ಕೃಷಿ ಇಲಾಖೆಯ ಮೂಲಗಳು ತಿಳಿಸಿವೆ.

ತೇವಾಂಶ, ಹದ ದೊರಕದಿದ್ದಕ್ಕೆ ತಾಲ್ಲೂಕಿನ ಕೆಲವು ಗ್ರಾಮಗಳಲ್ಲಿ ಮುಂಗಾರು ಬಿತ್ತನೆಯೇ ನಡೆದಿಲ್ಲ. ಇದೀಗ ಹಿಂಗಾರು ಹಂಗಾಮಿನ ಬಿತ್ತನೆಯ ಸಮಯ ಸಮೀಪಿಸುತ್ತಿರುವುದರಿಂದ ರೈತರು ಕಂಗಾಲಾಗಿದ್ದಾರೆ. ಬಿತ್ತನೆಗೆ ಅಗತ್ಯವಿದ್ದ ಬೀಜ, ಗೊಬ್ಬರ ದಾಸ್ತಾನಿದೆ. ಮಳೆಯ ಅಭಾವದಿಂದ ರೈತರು ಬೀಜ, ಗೊಬ್ಬರ ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ.

ಮಳೆಯ ಆಶಾಭಾವದಿಂದ ತೊಗರಿ, ಶೇಂಗಾ ಬಿತ್ತಿದ್ದೆವು. ಸಕಾಲಕ್ಕೆ ಮೇಘರಾಜನ ಕೃಪೆಯಾಗದಿದ್ದರಿಂದ ಶೇಂಗಾ ಒಣಗಿದೆ. ತೊಗರಿ ಬಾಡುತ್ತಿದೆ ಎಂದು ಹಲಸಂಗಿ ಗ್ರಾಮದ ರೈತರಾದ ತುಕಾರಾಮ ಬೋಗಾರ, ಮಹಾದೇವ ಬರಗಾಲಿ ಅಸಹಾಯಕತೆ ವ್ಯಕ್ತಪಡಿಸಿದರು.

‘ತಾಲ್ಲೂಕಿನ ಗಡಿಯಲ್ಲಿ ಹರಿದಿರುವ ಭೀಮಾ ನದಿಗೆ ಇದೂವರೆಗೆ ಮಳೆಗಾಲದಲ್ಲಿ ಬರಬೇಕಿದ್ದ ಹೊಸ ನೀರೇ ಬಂದಿಲ್ಲ. ನದಿಗೆ ಅಡ್ಡಲಾಗಿ ಕಟ್ಟಿರುವ 8 ಬಾಂದಾರಗಳು ನೀರಿಲ್ಲದೇ ಬಿಕೋ ಎನ್ನುತ್ತಿವೆ. ಭೀಮಾ ನದಿಯ ನೀರನ್ನೇ ನಂಬಿ ನಾಟಿ ಮಾಡಿರುವ ಕಬ್ಬು ಬೆಳೆ ಕೂಡಾ ಒಣಗುತ್ತಿದೆ’ ಎನ್ನುತ್ತಾರೆ ರೈತ ಸುರೇಶ ಮೆಡೆದಾರ.

100980 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಗುರಿ

73201 ಹೆಕ್ಟೇರ್‌ ಪ್ರದೇಶದಲ್ಲಿ ಮಾತ್ರ ಬಿತ್ತನೆ

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !