ಮಳೆ ಕೊರತೆ; ಬಾಡುತ್ತಿರುವ ಬೆಳೆ

5
ತಾಳಿಕೋಟೆ: ಮುಂಗಾರಿ ಬೆಳೆ ಹರಗಿ ಹಿಂಗಾರಿಗೆ ಹೊಲ ಸಜ್ಜುಗೊಳಿಸಲಾರಂಭಿಸಿದ ರೈತರು

ಮಳೆ ಕೊರತೆ; ಬಾಡುತ್ತಿರುವ ಬೆಳೆ

Published:
Updated:
Deccan Herald

ತಾಳಿಕೋಟೆ:  ಮುಂಗಾರು ಮಳೆಯ ಕೊರತೆಯಿಂದ ಬಿತ್ತನೆಯಾಗಿದ್ದ ಶೇ 50ರಷ್ಟು ಪ್ರದೇಶದಲ್ಲಿನ ಬೆಳೆಗಳು ತೇವಾಂಶ ಕೊರತೆಯಿಂದ ಒಂದೆಡೆ ಬಾಡುತ್ತಿದ್ದರೇ; ಮುಂಗಾರಿನ ಸಹವಾಸವೇ ಸಾಕೆಂದು ಹಿಂಗಾರಿಗಾಗಿ, ಮುಂಗಾರಿ ಬೆಳೆಗಳನ್ನು ಹರಗುವ ಪ್ರಕ್ರಿಯೆ ಮತ್ತೊಂದೆಡೆ ನಡೆದಿದೆ.

ತಾಲ್ಲೂಕಿನ ವ್ಯಾಪ್ತಿಯ ಎಲ್ಲೆಡೆ ರೈತರಲ್ಲಿ ಇದೀಗ ಮಳೆಯದ್ದೇ ಮಾತು. ಮಳೆ ಸಕಾಲಕ್ಕೆ ಬಾರದಿದ್ದರಿಂದ ಕಂಗಾಲಾಗಿರುವ ರೈತರ ಮೊಗ ಕಪ್ಪಿಟ್ಟಿದೆ.

ಕೊಂಚ ಹದ ಮಳೆಗೆ ಬಿತ್ತನೆ ಕಂಡು, ಮೂರ್ನಾಲ್ಕು ಅಡಿ ಎತ್ತರ ಬೆಳೆ ಕಾಣುತ್ತಿದ್ದ ತುಂಬಗಿ, ಗೋಟಗುಣಕಿ, ಭಂಟನೂರ, ಪೀರಾಪುರ ಭಾಗದ ಜಮೀನುಗಳಲ್ಲಿ ರೈತರು ಎಡೆ ಹೊಡೆದು ಕಸ ತೆಗೆಸಿದ್ದರು. ಆದರೆ ಈ ಬೆಳೆಗಳೂ ಮಳೆ ಕೊರತೆಯಿಂದ ಬಾಡುತ್ತಿವೆ.

ಇದಕ್ಕೆ ಬರೆ ಇಟ್ಟಂತೆ ಮಜ್ಜಿಗೆ ರೋಗದ ಬಾಧೆ. ಮುಂಗಾರು ಬಿತ್ತನೆ ಮಾಡಿದ್ದ ರೈತರು ಇದೀಗ ಒಬ್ಬೊಬ್ಬರಾಗಿ ತಮ್ಮ ಹೊಲಗಳನ್ನು ಹಿಂಗಾರಿ ಪೀಕಿಗಾಗಿ ಬೆಳೆಯನ್ನು ಹರಗಿ ಸ್ವಚ್ಛಗೊಳಿಸುತ್ತಿದ್ದಾರೆ. ಮೈಲೇಶ್ವರ ಗ್ರಾಮದ ರೈತ ಸಿದ್ರಾಮಪ್ಪ ಈರಪ್ಪ ಚೌಧರಿ ತಮ್ಮ 20 ಎಕರೆ ಜಮೀನಿನಲ್ಲಿ ಅಂದಾಜು ₹ 30000 ಖರ್ಚು ಮಾಡಿ ಬಿತ್ತನೆ ಮಾಡಿದ್ದ ತೊಗರಿಯನ್ನು ಈಚೆಗಷ್ಟೇ ಹರಗಿದ್ದಾರೆ. ಇತರೆ ರೈತರು ಇದೇ ಕೆಲಸಕ್ಕೆ ಮೊದಲಿಗರಾಗುತ್ತಿದ್ದಾರೆ.

ಮಿಣಜಗಿಯ ರೈತ ದ್ಯಾವಪ್ಪ ತಳವಾರ ಸಹ ತನ್ನ ತೊಗರಿ ಹೊಲವನ್ನು ಹರಗಿದ್ದಾರೆ. ಬಳಗಾನೂರನಲ್ಲಿ ಎಸ್.ಜಿ.ತಿಳಗೂಳ ಸೇರಿದಂತೆ ಅನೇಕ ರೈತರು ಕೂಡ ಬಿತ್ತನೆ ಮಾಡಿದ್ದ ಜಮೀನುಗಳಲ್ಲಿ ಹರುಗುವಿಕೆ ನಡೆಸಿದ್ದಾರೆ.

‘ಇನ್ನೂ ಒಂದು ವಾರದೊಳಗೆ ಮಳೆ ಬರದಿದ್ದರೇ; ಈಗ ಬಿತ್ತನೆ ಮಾಡಿರುವ ರೈತರೆಲ್ಲಾ ಹರಗುವುದನ್ನು ಬಿಟ್ಟು ಬೇರೆ ಕೆಲಸವಿಲ್ಲ. ಭೂಮಿಗೆ ಹಾಕಿದ ಬೀಜ, ಗೊಬ್ಬರ, ಗಳೆ, ಔಷಧಿ ಎಲ್ಲ ಭೂಮಿಯ ಪಾಲಾಗಿ ಹೋಯ್ತು’ ಎಂದು ಮಿಣಜಗಿ ಗ್ರಾಮದ ಪ್ರಗತಿಪರ ರೈತರಾದ ಜಿ.ಕೆ.ಬಿರಾದಾರ, ಎಚ್.ಬಿ.ಬಾಗೇವಾಡಿ, ಎ.ಜಿ.ಪಾಟೀಲ ಅವಲತ್ತುಕೊಂಡರು.

ತಾಳಿಕೋಟೆ ಹೋಬಳಿ ವ್ಯಾಪ್ತಿಯಲ್ಲಿ ಒಟ್ಟು 40712 ಹೆಕ್ಟೇರ್ ಸಾಗುವಳಿ ಕ್ಷೇತ್ರವಿದೆ. ಅದರಲ್ಲಿ ಮುಂಗಾರು 15571 ಹೆಕ್ಟೇರ್ ಹಾಗೂ ಹಿಂಗಾರಿ 25642 ಹೆಕ್ಟೇರ್ ಪ್ರದೇಶ ಹೊಂದಿದೆ.

ಪ್ರಸಕ್ತ ಸಾಲಿಗೆ ಮುಂಗಾರಿನೊಂದಿಗೆ ಬಿತ್ತನೆಯಾಗಿರುವ 50% ಭೂಮಿಗಳಲ್ಲಿ 80% ತೊಗರಿ, ಉಳಿದಂತೆ 10% ರಷ್ಟು ಹತ್ತಿ ಬೆಳೆ ಇದ್ದರೆ; ಉಳಿದ ಪ್ರದೇಶದಲ್ಲಿ ಸೂರ್ಯಕಾಂತಿ, ಹೆಸರು, ಸೆಜ್ಜೆ, ಶೇಂಗಾ ಬೆಳೆಗಳಿವೆ. ಆದರೆ ಮಳೆ ಇಲ್ಲದಿರುವುದರಿಂದ ಬಾಡುತ್ತಿವೆ.

ಮೂಕಿಹಾಳ, ಮಿಣಜಗಿ, ಶಿವಪುರ, ಕಲ್ಲದೇವನಹಳ್ಳಿ, ನಾಗೂರ, ಬಿಳೇಭಾವಿ ಬಂಡೆಪ್ಪನ ಸಾಲವಾಡಗಿ ಇನ್ನಿತರೆ ಗ್ರಾಮಗಳಲ್ಲಿ 75% ಬಿತ್ತನೆಯೇ ನಡೆದಿಲ್ಲ ಎಂದು ಕೃಷಿ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದರು.

ತಾಳಿಕೋಟೆ ಪಟ್ಟಣದಲ್ಲಿ ಮಳೆ ಮಾಪನ ಕೇಂದ್ರದಲ್ಲಿ ಈ ಬಾರಿ ದಾಖಲಾಗಿರುವಂತೆ, ಜೂನ್‌ನಲ್ಲಿ ಐದು ದಿನ 9.2 ಸೆಂ.ಮೀ. ಮಳೆ ಸುರಿದಿದ್ದರೇ; ಜುಲೈನಲ್ಲಿ ಆರು ದಿನ 2.68 ಸೆಂ.ಮೀ. ಮಳೆಯಾಗಿದೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !