ಶುಕ್ರವಾರ, ನವೆಂಬರ್ 15, 2019
21 °C

ಕೆರೆ ಹೂಳೆತ್ತಲು ₹ 25 ಕೋಟಿ ಕ್ರಿಯಾ ಯೋಜನೆ

Published:
Updated:
Prajavani

ಶಿವಮೊಗ್ಗ: ಜಲಾಮೃತ ಯೋಜನೆಯಲ್ಲಿ ಕೆರೆಗಳ ಹೂಳೆತ್ತುವುದು, ಕೆರೆಗಳ ಸಮಗ್ರ ಅಭಿವೃದ್ಧಿಗೆ ₨ 25 ಕೋಟಿಯ ಕ್ರಿಯಾ ಯೋಜನೆ ಸಲ್ಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಹೇಳಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ಜಲಾಮೃತ ಯೋಜನೆಯ ಪ್ರಗತಿ ಪರಿಶೀಲನೆ ನಡೆಸಿದರು.

ಸಣ್ಣ ನೀರಾವರಿ ಇಲಾಖೆ 33 ಕೆರೆಗಳ ಅಭಿವೃದ್ಧಿಗೆ ಸಲ್ಲಿಸಲಾಗಿದ್ದ ₨ 3.89 ಕೋಟಿ ಕ್ರಿಯಾ ಯೋಜನೆಗೆ ಅನುಮತಿ ದೊರೆತಿದೆ. ಕೆರೆಗಳಲ್ಲಿ ನೀರು ತುಂಬಿರುವ ಕಾರಣ ಜನವರಿ ಬಳಿಕ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗುವುದು. ಕಾಮಗಾರಿ ಕೈಗೊಳ್ಳುವ ಮೊದಲು ಸ್ಥಳೀಯ ಕೆರೆ ನೀರು ಬಳಕೆದಾರರ ಸಂಘದ ಸಭೆ ನಡೆಸಬೇಕು. ಕಾಮಗಾರಿಗೆ ಅನುಮೋದನೆ ಪಡೆಯಬೇಕು. ಆಡಳಿತಾತ್ಮಕ ಕಾರ್ಯಗಳನ್ನು ಪೂರ್ಣಗೊಳಿಸಬೇಕು ಎಂದು ಸೂಚಿಸಿದರು.

ಜಿಲ್ಲೆಯ ಉಳಿದ ಕೆರೆಗಳ ಅಭಿವೃದ್ಧಿಗೆ ಪ್ರಸ್ತಾವ ಸಲ್ಲಿಸುವಂತೆ ಈಗಾಗಲೇ ಸೂಚಿಸಲಾಗಿದೆ. ಮೂರು ತಾಲ್ಲೂಕುಗಳಿಂದ 142 ಕೆರೆಗಳ ಅಭಿವೃದ್ಧಿಗೆ ₹ 12.68 ಕೋಟಿ ಮೊತ್ತದ ಕಾಮಗಾರಿ ಕೈಗೊಳ್ಳುವ ಪ್ರಸ್ತಾವ ಸ್ವೀಕರಿಸಲಾಗಿದೆ. ಶಿಕಾರಿಪುರ ತಾಲ್ಲೂಕಿನಲ್ಲಿ ₹ 2 ಕೋಟಿ ವೆಚ್ಚದಲ್ಲಿ ನಾಲ್ಕು ಕೆರೆಗಳ ಅಭಿವೃದ್ಧಿ, ಹೊಸನಗರ ತಾಲ್ಲೂಕಿನಲ್ಲಿ ₹ 9.69 ಕೋಟಿ ವೆಚ್ಚದಲ್ಲಿ 117 ಕೆರೆಗಳ ಅಭಿವೃದ್ಧಿ, ಶಿವಮೊಗ್ಗ ತಾಲ್ಲೂಕಿನಲ್ಲಿ ₹ 77 ಲಕ್ಷ ವೆಚ್ಚದಲ್ಲಿ 16 ಕೆರೆಗಳ ಕಾಮಗಾರಿ, ಹೊಸನಗರ ತಾಲ್ಲೂಕಿನಲ್ಲಿ 3 ಬಹುಕಮಾನು ಮಾದರಿ ಚೆಕ್‌ಡ್ಯಾಂ ನಿರ್ಮಾಣಕ್ಕಾಗಿ ₹ 18 ಲಕ್ಷ ವೆಚ್ಚದ ಪ್ರಸ್ತಾವ ಸ್ವೀಕರಿಸಲಾಗಿದೆ ಎಂದು ವಿವರ ನೀಡಿದರು.

ಜಲಾಮೃತ ಯೋಜನೆಯಡಿ ಜಲಸಂರಕ್ಷಣೆ, ಜಲಮೂಲಗಳ ಪುನಃಶ್ಚೇತನ ಮತ್ತು ಹಸರೀಕರಣ ಕಾರ್ಯ ಕೈಗೊಳ್ಳಬೇಕಿದೆ. ಕಲ್ಯಾಣಿ, ಪುಷ್ಕರಣಿ, ಕುಂಟೆ, ಕೆರೆಕಟ್ಟೆ, ಗೋಕಟ್ಟೆಗಳ ಸಂರಕ್ಷಣೆ ಹಾಗೂ ಪುನಃಶ್ಚೇತನ ಕಾರ್ಯ ಕೈಗೊಳ್ಳಲಾಗುತ್ತಿದೆ. ಯೋಜನೆ ಅನುಷ್ಠಾನದಲ್ಲಿ ಸ್ಥಳೀಯ ಗ್ರಾಮ ಪಂಚಾಯಿತಿಗಳು ಹೆಚ್ಚಿನ ಜವಾಬ್ದಾರಿ ನಿರ್ವಹಿಸಬೇಕು ಎಂದು ತಾಕೀತು ಮಾಡಿದರು.

ಜಿಲ್ಲಾ ಪಂಚಾಯಿತಿ ಸಿಇಒ ಎಂ.ಎಲ್.ವೈಶಾಲಿ, ಯೋಜನಾ ನಿರ್ದೇಶಕ ವೀರಾಪುರ, ಸಾಮಾಜಿಕ ಅರಣ್ಯ ಉಪ ಸಂರಕ್ಷಣಾಧಿಕಾರಿ ದೇಸಾಯಿ, ಪಶುಸಂಗೋಪನಾ ಇಲಾಖೆ ಉಪ ನಿರ್ದೇಶಕ ಸದಾಶಿವ ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)