ಸಾಗುವಳಿ ಮಾಡದ ಪ್ರದೇಶಕ್ಕೆ ಭೂ ಮಂಜೂರಾತಿ!

7
ಕನಸಾಗಿ ಉಳಿದ ಬಡವರ ಭೂ ಒಡೆತನದ ಹಕ್ಕು, ವ್ಯಾಪಕ ಅಕ್ರಮ ಶಂಕೆ

ಸಾಗುವಳಿ ಮಾಡದ ಪ್ರದೇಶಕ್ಕೆ ಭೂ ಮಂಜೂರಾತಿ!

Published:
Updated:
Deccan Herald

ತೀರ್ಥಹಳ್ಳಿ: ರೈತರ ಸಾಗುವಳಿಯ ಬಗರ್‌ಹುಕುಂ ಭೂ ಪ್ರದೇಶದ ಸಕ್ರಮಕ್ಕೆ ಸರ್ಕಾರ ಹೊಸ ಅರ್ಜಿಗಳ ಆಹ್ವಾನಕ್ಕೆ ಸಿದ್ಧತೆ ನಡೆಸುತ್ತಿರುವ ಬೆನ್ನಲ್ಲಿಯೇ ಈ ಹಿಂದೆ ಕರೆದ ಅರ್ಜಿಗಳ ಭೂ ಮಂಜೂರಾತಿಯಲ್ಲಿ ವ್ಯಾಪಕ ಅಕ್ರಮ ಎಸಗಿರುವ ಅಂಶಗಳಿರುವುದು ಕಂಡು ಬಂದಿವೆ.

ಬಗರ್‌ಹುಕುಂ ಸಾಗುವಳಿ ಅರ್ಜಿಗಳ ಸಂಪೂರ್ಣ ವಿಲೇವಾರಿಯಾಗಿದ್ದು ಅರ್ಹ ಫಲಾನುಭವಿಗಳು ಭೂಮಿ ಹಕ್ಕಿನಿಂದ ವಂಚಿತರಾಗಿದ್ದಾರೆ. ಮಂಜೂರಾತಿ ಅಕ್ರಮದಿಂದಾಗಿ ಅನೇಕ ಅನರ್ಹ ಅರ್ಜಿದಾರರು ಭೂಮಿಯ ಒಡೆಯರಾಗಿದ್ದಾರೆ ಎಂಬ ಅಂಶ ತನಿಖೆಯಿಂದ ಬಹಿರಂಗವಾಗಿದೆ.

ತಾಲ್ಲೂಕಿನಲ್ಲಿ ಬಗರ್‌ಹುಕುಂ ಭೂ ಸಕ್ರಮ ಸಂಬಂಧ 1991ರಲ್ಲಿ ಫಾರಂ ನಂ. 50 ರಲ್ಲಿ 29,376 ಎಕರೆ ಭೂ ಮಂಜೂರಾತಿ ಕೋರಿ ಒಟ್ಟು 10,231 ಅರ್ಜಿ ಸಲ್ಲಿಕೆಯಾಗಿದ್ದು ಈವರೆಗೆ 794 ಅರ್ಜಿಗೆ 1,147 ಎಕರೆ 06 ಗುಂಟೆ ಭೂ ಪ್ರದೇಶ ಮಂಜೂರು ಮಾಡಲಾಗಿದೆ. ಅರಣ್ಯ ಪ್ರದೇಶ, ಹೆಚ್ಚುವರಿ ಭೂಮಿ ಹೊಂದಲಾಗಿದೆ ಎಂಬ ಕಾರಣಕ್ಕೆ 9,473 ಅರ್ಜಿಯನ್ನು ವಜಾಗೊಳಿಸಲಾಗಿದೆ.

1999ರಲ್ಲಿ ಫಾರಂ ನಂ 53ರಲ್ಲಿ 42,276,35 ಎಕರೆ ಭೂ ಮಂಜೂರಾತಿ ಕೋರಿ ಒಟ್ಟು 15,779 ಅರ್ಜಿ ಸಲ್ಲಿಕೆಯಾಗಿದ್ದು ಈವರೆಗೆ 2,663 ಅರ್ಜಿಗೆ 4,013 ಎಕರೆ ಪ್ರದೇಶ ಮಂಜೂರು ಮಾಡಲಾಗಿದೆ. 13,116 ಅರ್ಜಿಗಳು ವಜಾಗೊಂಡಿವೆ. 2016 ಡಿಸೆಂಬರ್ ಒಳಗೆ ಅಂತಿಮ ತೀರ್ಮಾನ ಕೈಗೊಳ್ಳಬೇಕೆಂಬ ತರಾತುರಿಯಲ್ಲಿ ಅರ್ಜಿ ವಿಲೇವಾರಿಗೊಂಡಿವೆ. ವಜಾಗೊಂಡ ಅರ್ಜಿದಾರರಿಗೆ ಕಚೇರಿಯಿಂದ ಅಧಿಕೃತ ಮಾಹಿತಿ ಸಿಕ್ಕಿಲ್ಲ. ಭೂ ರಹಿತರು, ಬಡವರಿಂದ ಸಲ್ಲಿಕೆಯಾದ ಅರ್ಜಿಗಳನ್ನು ಹೆಚ್ಚಾಗಿ ವಜಾಗೊಳಿಸಲಾಗಿದ್ದು ಹಣ, ಪ್ರಭಾವಕ್ಕೆ ಸುಲಭವಾಗಿ ಭೂ ಮಂಜೂರಾತಿ ಪಡೆಯಲಾಗಿದೆ ಎಂಬ ಅಂಶ ಸಾರ್ವಜನಿಕರ ಚರ್ಚೆಯ ವಸ್ತುವಾಗಿದೆ.

ಸಾಗುವಳಿ ಮಾಡದ ಪ್ರದೇಶವನ್ನು ಮಂಜೂರು ಮಾಡಿರುವ ಹಲವು ಪ್ರಕರಣಗಳಿವೆ. ಅಕ್ರಮದಲ್ಲಿ ಭೂ ಸಕ್ರಮೀಕರಣ ಸಮಿತಿ, ತಹಶೀಲ್ದಾರ್, ರಾಜಸ್ವ ನಿರೀಕ್ಷಕ, ಗ್ರಾಮ ಲೆಕ್ಕಿಗ, ಸರ್ವೆಯರ್, ತಾಲ್ಲೂಕು ಕಚೇರಿ ವಿಷಯ ಗುಮಾಸ್ತ ಒಳಗೊಂಡಂತೆ ಅನೇಕರು ಶಾಮೀಲಾಗಿದ್ದಾರೆ ಎಂಬುದನ್ನು ದಾಖಲೆಗಳು ಸ್ಪಷ್ಟಪಡಿಸಿವೆ. ಸಾವಿರಾರು ಅರ್ಜಿಗಳು ವಜಾಗೊಂಡರೆ, ಹಣ ಕೊಟ್ಟವರಿಗೆ ಭೂಮಿ ಭಾಗ್ಯ ಲಭಿಸಿದಂತಾಗಿದೆ. ಸಮಿತಿಗೆ ಸ್ಥಳ ಪರಿಶೀಲನೆಯ ಅಧಿಕಾರವಿದ್ದರೂ ಮಾಹಿತಿ ವರದಿಯನ್ನು ಕಂದಾಯ ಇಲಾಖೆ ಅಧಿಕಾರಿ, ಸಿಬ್ಬಂದಿಯಿಂದ ಪಡೆದು ಮಂಜೂರಾತಿಗೆ ಅವಕಾಶ ಕಲ್ಪಿಸಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ತಾಲ್ಲೂಕಿನ ಮುತ್ತೂರು ಹೋಬಳಿಯ ಹೊಸ ಅಗ್ರಹಾರ ಗ್ರಾಮದ ಸರ್ವೆ ನಂ. 274ರಲ್ಲಿ ಸಾಗುವಳಿ ಇಲ್ಲದ 1 ಎಕರೆ 15 ಗುಂಟೆ ಹಾಗೂ 4 ಎಕರೆ ಪ್ರದೇಶ ಮಂಜೂರುಗೊಳಿಸಿ ಅರ್ಜಿದಾರರೊಬ್ಬರಿಗೆ ಖಾತೆ ಹಕ್ಕು ನೀಡಲಾಗಿದೆ. ಈ ಪ್ರದೇಶದಲ್ಲಿ ಬಾಳೆ, ಅಡಿಕೆ ತೆಂಗು ಬೆಳೆಯಲಾಗಿದೆ ಎಂದು ಮಂಜೂರಾತಿ ಕಡತದಲ್ಲಿ ಕಂದಾಯ ಇಲಾಖೆ ಅಧಕಾರಿಗಳು ವರದಿ ನೀಡಿದ್ದಾರೆ.

2004-05ನೇ ಸಾಲಿನಲ್ಲಿ 1 ಎಕರೆ 15 ಗುಂಟೆ ಭೂ ಮಂಜುರಾತಿ ಪಡೆದ ನಂತರ ಮತ್ತೊಮ್ಮೆ ಸದರಿ ಅರ್ಜಿದಾರರಿಗೆ 2016ರ ನವೆಂಬರ್ 30 ರಂದು 4 ಎಕರೆ ಭೂಮಿ ಮಂಜೂರು ಮಾಡಲಾಗಿದೆ. ಒಟ್ಟು 5 ಎಕರೆ 15 ಗುಂಟೆ ಪ್ರದೇಶಕ್ಕೆ ನಿಯಮ ಬಾಹಿರವಾಗಿ ಮಂಜೂರಾತಿ ಲಭಿಸಿದೆ. ಸಾರ್ವಜನಿಕರು ಸರ್ಕಾರ, ಜಿಲ್ಲಾಧಿಕಾರಿಗೆ ಈ ಬಗ್ಗೆ ದೂರು ಸಲ್ಲಿಸಿದ್ದು ಪ್ರಕರಣ ಗಂಭೀರ ಸ್ವರೂಪ ಪಡೆದಿದೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !