ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೂಳು ಬಿರುಗಾಳಿಗೆ ನಲುಗಿದ ಉತ್ತರ ಭಾರತ: ರಾಜಸ್ಥಾನ, ಉತ್ತರ ಪ್ರದೇಶ, ಪಂಜಾಬ್‌ನಲ್ಲಿ 108 ಸಾವು

Last Updated 3 ಮೇ 2018, 20:06 IST
ಅಕ್ಷರ ಗಾತ್ರ

ಆಗ್ರಾ/ದೆಹಲಿ/ಅಳ್ವಾರ್ (ಎಎಫ್‌ಪಿ/ಪಿಟಿಐ): ರಾಜಸ್ಥಾನ ಮತ್ತು ಉತ್ತರ ಪ್ರದೇಶದ ಹಲವೆಡೆ ಬುಧವಾರ ರಾತ್ರಿ ಬೀಸಿದ ದೂಳು ಬಿರುಗಾಳಿ ಮತ್ತು ಭಾರಿ ಮಳೆಗೆ 106 ಜನ ಬಲಿಯಾಗಿದ್ದಾರೆ. 183ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಪಂಜಾಬ್‌ನಲ್ಲಿ ಇಬ್ಬರು ಮೃತಪಟ್ಟಿದ್ದಾರೆ.

ಪಶ್ಚಿಮ ರಾಜಸ್ಥಾನದಲ್ಲಿ ಸಂಜೆ ವೇಳೆಗೆ ದೂಳು ಬಿರುಗಾಳಿ ಆರಂಭ ವಾಗಿತ್ತು. ರಾಜಸ್ಥಾನವನ್ನು ದಾಟಿ, ದೆಹಲಿ ಮತ್ತು ಉತ್ತರ ಪ್ರದೇಶ ಮುಟ್ಟುವ ಹೊತ್ತಿಗೆ ಬಿರುಗಾಳಿಯು ಭಾರಿ ವೇಗ ಪಡೆದುಕೊಂಡಿತ್ತು. ಅದರ ಹಿಂದೆಯೇ ಗುಡುಗು ಸಹಿತ ಭಾರಿ ಮಳೆ ಸುರಿದ ಕಾರಣ ಇಷ್ಟೆಲ್ಲಾ ಅನಾಹುತ ಸಂಭವಿಸಿದೆ ಎಂದು ಮೂಲಗಳು ಮಾಹಿತಿ ನೀಡಿವೆ.

ಉತ್ತರ ಭಾರತದ ಹಲವೆಡೆ ಬೇಸಿಗೆಯಲ್ಲಿ ಮನೆಯ ಹೊರಗೆ ಮಲಗುವುದು ಸಾಮಾನ್ಯ. ಬುಧವಾರ ರಾತ್ರಿ ದೂಳು ಬಿರುಗಾಳಿ ಇದ್ದರೂ ಎರಡೂ ರಾಜ್ಯಗಳ ವಿವಿಧ ಪ್ರದೇಶಗಳಲ್ಲಿ ಜನರು ಮನೆಯ ಹೊರಗೆ ಮಲಗಿದ್ದಾರೆ. ವಿದ್ಯುತ್ ಕಂಬಗಳು ಮತ್ತು ಮರಗಳು ಉರುಳಿ ಬಹುತೇಕ ಮಂದಿ ಮೃತಪಟ್ಟಿದ್ದಾರೆ. ತಡ ರಾತ್ರಿ ಸುರಿದ ಭಾರಿ ಮಳೆಗೆ ಮನೆಗಳು ಕುಸಿದು ಮತ್ತಷ್ಟು ಮಂದಿ ಮೃತಪಟ್ಟಿದ್ದಾರೆ ಎಂದು ಮೂಲಗಳು ವಿವರಿಸಿವೆ.

ರಾಜಸ್ಥಾನದ ಅಳ್ವಾರ್‌ ಮತ್ತು ಉತ್ತರ ಪ್ರದೇಶದ ಆಗ್ರಾದಲ್ಲಿ ಹೆಚ್ಚು ಹಾನಿ ಸಂಭವಿಸಿದೆ. ಆಗ್ರಾ ಒಂದರಲ್ಲೇ 43 ಮಂದಿ ಮೃತಪಟ್ಟಿದ್ದಾರೆ. ಎರಡೂ ಪ್ರದೇಶಗಳಲ್ಲಿ ಹಲವು ಮನೆಗಳು ಕುಸಿದಿದ್ದು, ಅವುಗಳನ್ನು ಇನ್ನಷ್ಟೇ ತೆರವು ಮಾಡಬೇಕಿದೆ. ಕುಸಿದ ಮನೆಗಳ ಅವಶೇಷಗಳ ಅಡಿ ಮತ್ತಷ್ಟು ಜನರು ಸಿಲುಕಿರುವ ಅಪಾಯ ಇದೆ ಎಂದು ಮೂಲಗಳು ಹೇಳಿವೆ.

ಅಳ್ವಾರ್‌ನಲ್ಲಿ ನೂರಾರು ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ಇಡೀ ನಗರ ದಲ್ಲಿ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿದ್ದು, ವ್ಯತ್ಯಯವನ್ನು ಸರಿಪಡಿಸಲು ಕನಿಷ್ಠ ಎರಡು ದಿನವಾದರೂ ಬೇಕು. ರಾಜ್ಯದಲ್ಲಿ ಒಟ್ಟಾರೆ ಸಾವಿರಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಉರುಳಿವೆ ಎಂದು ಮೂಲಗಳು ಹೇಳಿವೆ.

ಮೃತರ ಕುಟುಂಬಕ್ಕೆ ರಾಜಸ್ಥಾನ ಸರ್ಕಾರ ₹4 ಲಕ್ಷ ಪರಿಹಾರ, ಗಂಭೀರ ವಾಗಿ ಗಾಯಗೊಂಡವರಿಗೆ ₹ 2 ಲಕ್ಷದ ನೆರವು ಮತ್ತು ಸಣ್ಣ–ಪುಟ್ಟ ಗಾಯಗಳಾದವರಿಗೆ ₹ 60 ಸಾವಿರ ಪರಿಹಾರ ಘೋಷಿಸಿದೆ.

**

ಮತ್ತೊಂದು ಬಿರುಗಾಳಿಯ ಅಪಾಯ

ಮುಂದಿನ ಎರಡು ದಿನಗಳ ಕಾಲ ಈ ಪ್ರದೇಶಗಳಲ್ಲಿ ಬಾರಿ ಬಿರುಗಾಳಿ ಮತ್ತು ಗುಡುಗುಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ರಾಜಸ್ಥಾನದಲ್ಲಿ ಮತ್ತೊಂದು ದೂಳು ಬಿರುಗಾಳಿ ರೂಪುಗೊಳ್ಳುತ್ತಿದೆ. ಅದು ರಾಜಸ್ಥಾನ ಮತ್ತು ಉತ್ತರ ಪ್ರದೇಶದ ಗಡಿ ಜಿಲ್ಲೆಗಳಲ್ಲಿ ಭಾರಿ ಹಾನಿ ಉಂಟು ಮಾಡುವ ಅಪಾಯವಿದೆ. ಜೀವಕ್ಕೆ ಅಪಾಯವಿರುವ ಕಾರಣ ಜನರು ಮನೆಯ ಹೊರಗೆ ಮಲಗದಂತೆ ಕ್ರಮ ತೆಗೆದುಕೊಳ್ಳಿ ಎಂದು ಆಯಾ ರಾಜ್ಯ ಸರ್ಕಾರಗಳಿಗೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

**

ಆಗ್ರಾದ ಗ್ರಾಮವೊಂದರಲ್ಲಿ ಕುಸಿದು ಬಿದ್ದಿದ್ದ ಮನೆಯಲ್ಲಿ ಸಿಲುಕಿದ್ದ ವೃದ್ಧರೊಬ್ಬರನ್ನು ಜನರು ಹೊರಕ್ಕೆ ಎತ್ತಿ ತಂದರು  –ಎಎಫ್‌ಪಿ ಚಿತ್ರ

**

ದೂಳು ಬಿರುಗಾಳಿ ಬೀಸಿದ ಪ್ರದೇಶ

ರಾಜಸ್ಥಾನ

ಉತ್ತರ ಪ್ರದೇಶ

ಪಂಜಾಬ್

ಹಿಮಾಚಲ ಪ್ರದೇಶ

ದೆಹಲಿ

**

64 ಉತ್ತರ ಪ್ರದೇಶದಲ್ಲಿ ಮೃತಪಟ್ಟವರು

33 ರಾಜಸ್ಥಾನದಲ್ಲಿ ಮೃತಪಟ್ಟವರು

2 ಪಂಜಾಬ್‌ನಲ್ಲಿ ಮೃತಪಟ್ಟವರು

**

59 ಕಿ.ಮೀ.: ದೆಹಲಿಯಲ್ಲಿ ಬಿರುಗಾಳಿಯ ವೇಗ

132 ಕಿ.ಮೀ.: ಆಗ್ರಾದಲ್ಲಿ ಬಿರುಗಾಳಿಯ ವೇಗ

ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿ ದಿಢೀರ್ ಎಂದು ಭಾರಿ ಮಳೆ ಸುರಿದಿದ್ದರಿಂದ ಜನರು ಮಳೆಯಲ್ಲಿ ನೆನೆದರು –ಎಎಫ್‌ಪಿ ಚಿತ್ರ

**

‘ಚುನಾವಣಾ ಪ್ರಚಾರದಲ್ಲಿ ಯೋಗಿ’

ಉತ್ತರ ಪ್ರದೇಶದಲ್ಲಿ ದೂಳು ಬಿರುಗಾಳಿಯಿಂದ ಭಾರಿ ಸಾವು–ನೋವು ಸಂಭವಿಸಿದ್ದರೂ, ರಾಜ್ಯದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಕರ್ನಾಟಕ ದಲ್ಲಿ ಚುನಾವಣಾ ಪ್ರಚಾರ ನಡೆಸುತ್ತಿರುವುದಕ್ಕೆ ಕಾಂಗ್ರೆಸ್ ಆಕ್ಷೇಪ ವ್ಯಕ್ತಪಡಿಸಿದೆ.

‘ಉತ್ತರ ಪ್ರದೇಶದ ಜನರು ಬಿರುಗಾಳಿಗೆ ನರಳುತ್ತಿದ್ದರೂ, ನಾನು ಕರ್ನಾಟಕ ಚುನಾವಣೆಗಾಗಿ ಗಿಮಿಕ್ ಮಾಡುವುದರಲ್ಲಿ ಬ್ಯುಸಿಯಾಗದ್ದೇನೆ– ಆದಿತ್ಯನಾಥ, ನಾಪತ್ತೆಯಾಗಿರುವ ಮುಖ್ಯಮಂತ್ರಿ, ಉತ್ತರ ಪ್ರದೇಶ’ ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸಿಂಗ್ ಸುರ್ಜೇವಾಲಾ ಟ್ವೀಟ್ ಮಾಡಿದ್ದಾರೆ.

**

ದೇಶದ ಹಲವೆಡೆ ದೂಳು ಬಿರುಗಾಳಿಗೆ ಹಲವರು ಬಲಿಯಾದದ್ದನ್ನು ಕೇಳಿ ಭಾರಿ ದುಃಖವಾಗಿದೆ. ಗಾಯಾಳುಗಳು ಆದಷ್ಟು ಬೇಗ ಚೇತರಿಸಿಕೊಳ್ಳಲಿ.
–ನರೇಂದ್ರ ಮೋದಿ, ಪ್ರಧಾನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT