7
ಮೂರು ದಶಕದ ಇತಿಹಾಸ ಹೊಂದಿರುವ ಮಾರುಕಟ್ಟೆ ಪ್ರಾಂಗಣ; ಅವ್ಯವಸ್ಥೆಗೆ ಇತಿಶ್ರೀಯ ನಿರೀಕ್ಷೆ ?

ಎಲ್‌ಬಿಎಸ್‌ ಮಾರುಕಟ್ಟೆ ನವೀಕರಣಕ್ಕೆ ‘ಮಾಸ್ಟರ್‌ ಪ್ಲಾನ್‌’..!

Published:
Updated:
ವಿಜಯಪುರದ ಹೃದಯ ಭಾಗ ಗಾಂಧಿಚೌಕ್‌ನಲ್ಲಿರುವ ಎಲ್‌ಬಿಎಸ್‌ ಮಾರುಕಟ್ಟೆಯ ಭಾಗವೊಂದು ಈಚೆಗೆ ಕುಸಿದು ಬಿದ್ದಿದೆಪ್ರಜಾವಾಣಿ ಚಿತ್ರ

ವಿಜಯಪುರ: ನಗರದ ಹೃದಯ ಭಾಗ ಗಾಂಧಿಚೌಕ್‌ನಲ್ಲಿರುವ ಲಾಲ್‌ಬಹಾದ್ದೂರ್‌ ಶಾಸ್ತ್ರಿ ಮಾರುಕಟ್ಟೆ ಪ್ರಾಂಗಣದ ನವೀಕರಣಕ್ಕೆ ವಿಜಯಪುರ ಮಹಾನಗರ ಪಾಲಿಕೆ ಆಡಳಿತ ಮಾಸ್ಟರ್ ಪ್ಲಾನ್‌ ರೂಪಿಸಲು ಮುಂದಾಗಿರುವುದು ತಿಳಿದು ಬಂದಿದೆ.

1990ರ ದಶಕದಲ್ಲಿ ಆಗಿನ ವಿಜಾಪುರ ನಗರಸಭೆ ಅಧ್ಯಕ್ಷರಾಗಿದ್ದ ಶಿವಾನಂದ ಪಾಟೀಲರ ಕಾಳಜಿಯಿಂದ ನಿರ್ಮಾಣಗೊಂಡಿದ್ದ ಮಾರುಕಟ್ಟೆ ಪ್ರಾಂಗಣ ಪ್ರಸ್ತುತ ಅವ್ಯವಸ್ಥೆಯ ಆಗರವಾಗಿದೆ. ವರ್ಷಧಾರೆಯಾದರೆ ಸಾಕು ಕಟ್ಟಿಕೊಂಡಿರುವ ಚರಂಡಿಯಿಂದ ಮಳೆ ನೀರು ಇಲ್ಲಿರುವ ಅಂಗಡಿಗಳೊಳಗೆ ನುಗ್ಗುತ್ತಿದೆ. ವರ್ಷದಿಂದ ಕಾಡುತ್ತಿರುವ ವಿದ್ಯುತ್‌ ಸಮಸ್ಯೆ ಇಂದಿಗೂ ಪರಿಹಾರವಾಗದಾಗಿದೆ.

ಇಡೀ ಕಟ್ಟಡ ಬಣ್ಣ ಕಂಡು ದಶಕ ಉರುಳಿದೆ. ಅತಿಕ್ರಮಣ ಪ್ರಶ್ನಿಸುವವರೇ ಇಲ್ಲವಾಗಿದೆ. ಇದಕ್ಕೆಲ್ಲಾ ಯಾವಾಗ ಇತಿಶ್ರೀ ಬೀಳಲಿದೆ ? ಎಂದು ಹಲ ವರ್ಷಗಳಿಂದ ವ್ಯಾಪಾರಿ ಸಮೂಹ ಕಾದಿದ್ದು, ಪಾಲಿಕೆ ಆಡಳಿತದ ಈಗಿನ ನಿರ್ಧಾರ ಮಾರುಕಟ್ಟೆ ಪ್ರಾಂಗಣದಲ್ಲಿ ಮಿಂಚಿನ ಸಂಚಲನ ಮೂಡಿಸಿದೆ.

ನವೀಕರಣದ ರೂಪುರೇಷೆ: ‘ಪಾಲಿಕೆ ಆಡಳಿತ ಈಗಾಗಲೇ ನವೀಕರಣದ ರೂಪುರೇಷೆ ತಯಾರಿಸುತ್ತಿದೆ. ಪ್ರಸ್ತುತ ಅಂದಾಜಿನಂತೆ ₹ 1 ಕೋಟಿ ವೆಚ್ಚದಲ್ಲಿ ಕಾಮಗಾರಿ ನಡೆಸಲು ನಿರ್ಧರಿಸಿದೆ’ ಎಂಬುದು ಮೂಲಗಳಿಂದ ಖಚಿತ ಪಟ್ಟಿದೆ. ‘ಕಟ್ಟಿಕೊಂಡಿರುವ ಚರಂಡಿ ದುರಸ್ತಿ, ಮಳೆ ನೀರು ಸರಾಗವಾಗಿ ಹರಿದು ಹೋಗುವಂತೆ ಕ್ರಮ ಕೈಗೊಳ್ಳುವಿಕೆ. ಮೊದಲ ಮಹಡಿಯಲ್ಲಿನ ಅಂಗಡಿಗಳಿಗೆ ವ್ಯಾಪಾರಕ್ಕಾಗಿ ತೆರಳಲು ವಯೋವೃದ್ಧರಿಗೆ ಅನುಕೂಲವಾಗುವಂತೆ ಲಿಫ್ಟ್‌ ವ್ಯವಸ್ಥೆ. ಮೂರು ದಶಕದ ಇತಿಹಾಸ ಹೊಂದಿರುವ ಕಟ್ಟಡ ಕೆಲವೆಡೆ ಕುಸಿದು ಬಿದ್ದಿದ್ದು, ಹಲವೆಡೆ ಬಿರುಕು ಬಿಟ್ಟಿದೆ. ಇದನ್ನು ದುರಸ್ತಿಪಡಿಸಿ, ಭದ್ರಗೊಳಿಸುವುದು. ಮಾರುಕಟ್ಟೆಯ ಆವರಣದಲ್ಲಿ, ಮೊದಲ ಮಹಡಿಯಲ್ಲಿ ಹೈಟೆಕ್‌ ಶೌಚಾಲಯ ನಿರ್ಮಾಣವೂ ಸೇರಿದೆ’ ಎನ್ನಲಾಗಿದೆ.

ನಿರ್ದಾಕ್ಷಿಣ್ಯ ಕ್ರಮ: ‘ಎಲ್‌ಬಿಎಸ್‌ ಮಾರುಕಟ್ಟೆ ನವೀಕರಣದ ಚಿಂತನೆ ನಡೆದಿದೆ. ಮಾರ್ಕೆಟ್‌ನ ಆದಾಯದ ಮೂಲದಿಂದಲೇ ಕಾಮಗಾರಿ ಕೈಗೆತ್ತಿಕೊಳ್ಳಲು ಪಾಲಿಕೆ ಆಡಳಿತಕ್ಕೆ ಸೂಚಿಸಿರುವೆ. ₹ 1 ಕೋಟಿ ಮೊತ್ತದ ಯೋಜನೆ ರೂಪಿಸಿದ್ದರು. ನವೀಕರಣ ಕೈಗೊಳ್ಳುತ್ತಿದ್ದೀರಿ. ಆದಾಯವೂ ಸಾಕಷ್ಟಿದೆ. ದುಡ್ಡಿಗೆ ಚಿಂತಿಸದೆ ವ್ಯವಸ್ಥಿತವಾಗಿ ನೀಲನಕ್ಷೆ ರೂಪಿಸಿ ಕಾಮಗಾರಿ ನಡೆಸಿ. ಅಭಿವೃದ್ಧಿಯ ನಂತರ ಅತಿಕ್ರಮಣಕ್ಕೆ ಅವಕಾಶ ಕೊಡಬೇಡಿ. ಎಷ್ಟೆಷ್ಟು ಜಾಗ ನಿಗದಿಯಾಗಿದೆ; ಅಷ್ಟರಲ್ಲೇ ಅಂಗಡಿಗಳು ಇರುವಂತೆ ನೋಡಿಕೊಳ್ಳಿ.

ಪಾಲಿಕೆ ಸೂಚನೆ ಮೀರಿಯೂ ಅತಿಕ್ರಮಣ ಮಾಡುವವರ ವಿರುದ್ಧ ನಿರ್ದಾಕ್ಷಣ್ಯ ಕ್ರಮ ತೆಗೆದುಕೊಳ್ಳುವ ಜತೆಗೆ, ದಂಡವನ್ನೂ ವಿಧಿಸಿ ಎಂದು ಸೂಚಿಸಿರುವೆ. ಪಾಲಿಕೆ ಆಯುಕ್ತರು, ಜಿಲ್ಲಾಧಿಕಾರಿ ಸಹ ನನ್ನ ಸಲಹೆಗೆ ಸಮ್ಮತಿ ವ್ಯಕ್ತಪಡಿಸಿದ್ದಾರೆ’ ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ತಿಳಿಸಿದರು.

‘ಮಾರುಕಟ್ಟೆ ಪ್ರಾಂಗಣದ ಮುಂಭಾಗದ ಮೇಲ್ಭಾಗದಲ್ಲಿ ಲಾಲ್‌ಬಹಾದ್ದೂರ್‌ ಶಾಸ್ತ್ರಿ ಅವರ ಚಿಕ್ಕ ಪುತ್ಥಳಿ ಕೂರಿಸುವಂತೆ ತಿಳಿಸಿರುವೆ. ಸುತ್ತಲೂ ಕಾರಂಜಿ ನಿರ್ಮಿಸಿ ಅಲಂಕರಿಸುವ ಜತೆಗೆ, ವರ್ಣರಂಜಿತ ಬೃಹತ್‌ ನಾಮಫಲಕ ಹಾಕುವುದನ್ನು ಸಹ ನವೀಕರಣ ಕಾಮಗಾರಿಯೊಳಗೆ ಸೇರ್ಪಡೆ ಮಾಡಿಕೊಳ್ಳುವಂತೆ ಸೂಚಿಸಿರುವೆ’ ಎಂದು ಬಸನಗೌಡ ಹೇಳಿದರು.

ನಿರ್ವಹಣೆಯ ತುರ್ತು ಅಗತ್ಯವಿದೆ

‘ಎಲ್‌ಬಿಎಸ್‌ ಮಾರುಕಟ್ಟೆಯ ನಿರ್ವಹಣೆ ತುರ್ತು ಅಗತ್ಯವಿದೆ. ಹಲ ವರ್ಷಗಳಿಂದ ಸಣ್ಣ ದುರಸ್ತಿಯೂ ನಡೆದಿಲ್ಲ. ಸಾಕಷ್ಟು ಬಾರಿ ಮನವಿ ಸಲ್ಲಿಸಿದರೂ ಯಾರೊಬ್ಬರೂ ಸ್ಪಂದಿಸಿಲ್ಲ. ಸ್ವಚ್ಛತೆಗೆ ಒತ್ತು ನೀಡಬೇಕಿದೆ. ಮಹಡಿ ಮೇಲೆ ಸ್ವಚ್ಛಗೊಳಿಸಿ ನೀರು ನಿಲ್ಲದಂತೆ ಮೊದಲು ಕ್ರಮ ತೆಗೆದುಕೊಳ್ಳಬೇಕಿದೆ’ ಎನ್ನುತ್ತಾರೆ ವ್ಯಾಪಾರಿ ಸಮೀರ ಉಕ್ಕಲಿ.

‘ಇಡೀ ಮಾರುಕಟ್ಟೆ ಪ್ರಾಂಗಣಕ್ಕೆ ಸಿ.ಸಿ. ಟಿ.ವಿ. ಕ್ಯಾಮೆರಾ ಅಳವಡಿಸಬೇಕಿದೆ. ಈ ಹಿಂದೆ ಅಳವಡಿಸಿದ್ದರೂ ಅವು ಕಾರ್ಯಾಚರಿಸುತ್ತಿರುವುದು ಗೋಚರಿಸುತ್ತಿಲ್ಲ. ಎಲ್ಲದಕ್ಕಿಂತ ಮೊದಲು ಮಾರುಕಟ್ಟೆ ಸುತ್ತಲೂ, ಒಳಭಾಗದಲ್ಲಿನ ಅತಿಕ್ರಮ ತೆರವುಗೊಳಿಸಬೇಕಿದೆ. ಇದರ ಜತೆಗೆ ಪಾರ್ಕಿಂಗ್‌ ವ್ಯವಸ್ಥೆ ಕಲ್ಪಿಸಿದರೆ ಹೆಚ್ಚೆಚ್ಚು ಜನ ವಹಿವಾಟಿಗಾಗಿ ಬರಲಿದ್ದಾರೆ’ ಎಂದು ಮತ್ತೊಬ್ಬ ವ್ಯಾಪಾರಿ ಡಿ.ಎಂ.ಮೈದರಗಿ ತಿಳಿಸಿದರು.

ಪಾಲಿಕೆ ಆಡಳಿತ ಬಾಡಿಗೆಯನ್ನು ಮಾತ್ರ ಕರಾರುವಕ್ಕಾಗಿ ವಸೂಲಿ ಮಾಡಿದೆ. ನಿರ್ವಹಣೆಯ ವಿಷಯದಲ್ಲಿ ಎಳ್ಳು ಕಾಳಿನಷ್ಟು ಕಾಳಜಿಯನ್ನು ತೋರಿಲ್ಲ. ಈಗಿನ ಬೆಳವಣಿಗೆ ಕಾದು ನೋಡಬೇಕಿದೆ
- ರಾಜೇಂದ್ರ ಪಾಟೀಲ, ವ್ಯಾಪಾರಿ

ಈ ಹಿಂದೆ ನಾನು ಶಾಸಕನಿದ್ದ ಸಂದರ್ಭವೇ ಮಾರುಕಟ್ಟೆಯನ್ನು ಋಣಮುಕ್ತವಾಗಿ ಮಾಡಿದ್ದೆ. ಇದೀಗ ನನ್ನ ಅವಧಿಯ ಆರಂಭದಲ್ಲೇ ನವೀಕರಣ ಕಾರ್ಯವನ್ನೂ ಕೈಗೊಳ್ಳುವೆ
- ಬಸನಗೌಡಪಾಟೀಲ ಯತ್ನಾಳ, ವಿಜಯಪುರ ನಗರ ಶಾಸಕ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !