ಕಲಿಕೆಯೊಂದೆಡೆ; ಬಿಸಿಯೂಟ ಇನ್ನೊಂದೆಡೆ..!

7
ಶ್ರಾವಣ ಮಾಸ ಆರಂಭದ ಬೆನ್ನಿಗೆ ದೇವರಹಿಪ್ಪರಗಿ ತಾಲ್ಲೂಕಿನ ಬಮ್ಮನಜೋಗಿ ಶಾಲೆಯ ವೇಳೆ ಬದಲು

ಕಲಿಕೆಯೊಂದೆಡೆ; ಬಿಸಿಯೂಟ ಇನ್ನೊಂದೆಡೆ..!

Published:
Updated:
Deccan Herald

ವಿಜಯಪುರ:  ಬ್ರಿಟಿಷರ ಆಡಳಿತದಲ್ಲೇ ವಿದ್ಯಾ ಕೇಂದ್ರವಾಗಿದ್ದ ದೇವರಹಿಪ್ಪರಗಿ ತಾಲ್ಲೂಕಿನ ಬಮ್ಮನಜೋಗಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಇದೀಗ ಸಂಪೂರ್ಣ ಶಿಥಿಲಗೊಂಡಿದೆ. ಶಾಲೆಯ ಆಡಳಿತ ಕಚೇರಿ, ಅಕ್ಷರ ದಾಸೋಹದ ಅಡುಗೆ ಮನೆಯ ಕೊಠಡಿ ಹೊರತುಪಡಿಸಿದರೆ; ಉಳಿದ 7 ಕೊಠಡಿಗಳು ಬಳಕೆಗೆ ಯೋಗ್ಯವಿಲ್ಲ.

ಮೂರು ವರ್ಷದ ಹಿಂದೆಯೇ ಕೊಠಡಿಯೊಂದು ಕುಸಿದು ನೆಲಕಚ್ಚಿದೆ. ಎರಡು ಕೊಠಡಿಗಳ ಮೇಲ್ಛಾವಣಿಯಲ್ಲಿ ಹೆಂಚುಗಳಿಲ್ಲ. ಇದರಿಂದ ಮಳೆ–ಬಿಸಿಲಿಗೆ ಕೊಠಡಿಯೊಳಗೆ ಸರಾಗ ಪ್ರವೇಶವಿದೆ. ಉಳಿದ ನಾಲ್ಕು ಕೊಠಡಿಗಳ ಗೋಡೆ ಬಿರುಕು ಬಿಟ್ಟಿವೆ. ನೆಲಕ್ಕೆ ಕಲ್ಲು ಹಾಕಿಲ್ಲ. ಕಿಟಕಿಗಳಿಲ್ಲ..!

1938ರಲ್ಲಿ ಆರಂಭಗೊಂಡ ಈ ಶಾಲೆಯಲ್ಲಿ ಪ್ರಸ್ತುತ 1ರಿಂದ 8ನೇ ತರಗತಿಯವರೆಗೆ 307 ಮಕ್ಕಳು ಕಲಿಯುತ್ತಿದ್ದಾರೆ. ಅಪಾಯದ ಮುನ್ಸೂಚನೆ ಅರಿತ ಶಾಲಾ ಸಿಬ್ಬಂದಿ, ತರಗತಿ ಬೋಧನೆಯನ್ನು ಬೇರೆಡೆ ಸ್ಥಳಾಂತರಿಸಿಕೊಂಡಿದೆ.

ಶಾಲೆಗೆ ಸಮೀಪದ ಉರ್ದು ಶಾಲೆಯಲ್ಲಿ 4ನೇ ತರಗತಿ ನಡೆಸಿದರೆ; ಉಳಿದ 7 ತರಗತಿಗಳನ್ನು ಗ್ರಾಮದ ಇನ್ನೊಂದು ಬದಿಯಿರುವ ಮರುಳಾರಾಧ್ಯರ ಮಠದ ಕಟ್ಟಡದಲ್ಲಿ ನಡೆಸುತ್ತಿದೆ. ಬೇರೆ ಬೇರೆ ಕಡೆ ಕಲಿಯುತ್ತಿರುವ ಎಲ್ಲಾ ಮಕ್ಕಳು ಮಧ್ಯಾಹ್ನವಾಗುತ್ತಿದ್ದಂತೆ, ಬಿಸಿಯೂಟಕ್ಕಾಗಿ ಮೂಲ ಶಾಲೆಗೆ ಹೆಜ್ಜೆ ಹಾಕಬೇಕಿರುವುದು ಅನಿವಾರ್ಯವಾಗಿದೆ.

‘ಮಧ್ಯಾಹ್ನ 1.15ಕ್ಕೆ ಊಟಕ್ಕೆ ಬಿಡ್ತಾರೆ. ತಂಡೋಪ ತಂಡವಾಗಿ ಹೊರಡುವ ನಮ್ಮ ಜತೆ ಮೂವರು ಶಿಕ್ಷಕರು ಬರ್ತಾರೆ. ಉಳಿದವರು ನಮ್ಮ ಪಾಟಿಚೀಲ ಕಾದ್ಕೊಂಡು ಮಠದಲ್ಲೇ ಉಳಿತಾರೆ. ನಾವುಗಳು ಲಘುನೇ ಬರ್ತೀವಿ. ಅವಸರವಾಗಿ ಊಟ ಮುಗಿಸಿ ಮತ್ತೆ ಮಠದತ್ತ ಓಡ್ತೇವೆ. ಇದು ನಿತ್ಯವೂ ನಡೆಯುತ್ತದೆ. ಊಟ ಮಾಡ್ದಂಗೆ ಆಗಲ್ಲ’ ಎಂದು 6ನೇ ತರಗತಿ ವಿದ್ಯಾರ್ಥಿಗಳಾದ ಜಯಶ್ರೀ ಪಾಟೀಲ, ಲಕ್ಷ್ಮೀ ಹರಸೂರ, ಮಸ್ಕಾನ ಹರನಾಳ, ಮಣಿಕಂಠ ಮರಡಿ, ಮಂಜುನಾಥ ಬಡಿಗೇರ ತಿಳಿಸಿದರು.

‘ನಮ್ಮೂರ ಶಾಲೆಯ ಅಭಿವೃದ್ಧಿಗೆ ಸಂಬಂಧಿಸಿದಂತೆ ಅಧಿಕಾರಿಗಳಿಂದ ಹಿಡಿದು ಜನಪ್ರತಿನಿಧಿಗಳಿಗೆ ಎರಡ್ಮೂರು ವರ್ಷದಿಂದ ಮನವಿ ನೀಡಿದ್ದೇವೆ. ಎಲ್ರೂ ಭರವಸೆಯ ಮಳೆ ಸುರಿಸಿದವರೇ. ಇದೂವರೆಗೂ ಒಂದೇ ಒಂದ್‌ ಆಶ್ವಾಸನೆ ಈಡೇರಿಸಿಲ್ಲ. ನಮ್ಗೂ ಅನಿವಾರ್ಯ. ಶಾಲೆ ಬಿಡಿಸಬಾರದು ಎಂಬ ಏಕೈಕ ಕಾರಣಕ್ಕೆ ವಿಧಿಯಿಲ್ಲದೆ ಮಕ್ಕಳನ್ನು ಕಳುಹಿಸಿಕೊಡುತ್ತಿದ್ದೇವೆ.

ಸ್ಥಳೀಯವಾಗಿಯೇ ಪರ್ಯಾಯ ವ್ಯವಸ್ಥೆ ಕಂಡುಕೊಂಡಿದ್ದಾರೆ. ಆದರೆ ಅಲ್ಲೂ ನೂರೆಂಟು ಸಮಸ್ಯೆ. ಇದೀಗ ಶ್ರಾವಣ ಮಾಸ ಆರಂಭವಾಗೈತಿ. ಮಠದಲ್ಲಿ ಧಾರ್ಮಿಕ ಕಾರ್ಯಕ್ರಮ ಬಿರುಸಾಗಿವೆ. ಮಂತ್ರ ಪಠಣ, ರುದ್ರಾಭಿಷೇಕ, ವಿಶೇಷ ಪೂಜೆಗಳ ನಡುವೆಯೇ ಮಕ್ಕಳ ಕಲಿಕೆ ನಡದೈತಿ’ ಎಂದು ಪೋಷಕರಾದ ದಶರಥ ಬಿರಾದಾರ, ಭೀಮಾಶಂಕರ ಮುತ್ತಗಿ, ಮಹಾಂತೇಶ ಪಾಟೀಲ, ಮಲ್ಲಯ್ಯ ಹಿರೇಮಠ ಶಾಲೆಯ ದುಃಸ್ಥಿತಿ ಬಗ್ಗೆ ‘ಪ್ರಜಾವಾಣಿ’ ಬಳಿ ಎಲ್ಲವನ್ನೂ ಎಳೆ ಎಳೆಯಾಗಿ ಬಿಚ್ಚಿಟ್ಟರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !