ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಭೆ, ಸಮಾರಂಭ, ಜಾತ್ರೆ ನಡೆಸಿದರೆ ಕಾನೂನು ಕ್ರಮ

ಕೋವಿಡ್‌ 19: ನಿರ್ವಹಣೆ ಕ್ರಮ ಪರಿಶೀಲಿಸಿದ ಸಚಿವ ಈಶ್ವರಪ್ಪ
Last Updated 15 ಮಾರ್ಚ್ 2020, 13:32 IST
ಅಕ್ಷರ ಗಾತ್ರ

ಶಿವಮೊಗ್ಗ: ಜಿಲ್ಲೆಯಲ್ಲಿ ಇದುವರೆಗೆ ಯಾವುದೇ ಕೋವಿಡ್ 19 ಪ್ರಕರಣಗಳು ವರದಿಯಾಗಿಲ್ಲ. ಮೂರು ಶಂಕಿತ ಪ್ರಕರಣಗಳಲ್ಲಿ ನೆಗೆಟಿವ್ ವರದಿ ಬಂದಿದ್ದು, ಜನರು ಗಾಬರಿಯಾಗುವ ಅಗತ್ಯವಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ತಿಳಿಸಿದರು.

ಇಲ್ಲಿನ ಮೆಡಿಕಲ್ ಕಾಲೇಜಿನಲ್ಲಿ ಭಾನುವಾರ ಕೋವಿಡ್ 19 ವೈರಸ್ ನಿರ್ವಹಣೆಗೆ ಕೈಗೊಳ್ಳಲಾಗಿರುವ ಕ್ರಮಗಳನ್ನು ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ಕೋವಿಡ್ 19 ಎದುರಿಸಲು ಜಿಲ್ಲಾಡಳಿತ ಸರ್ವ ಸನ್ನದ್ಧವಾಗಿದ್ದು, ಜಿಲ್ಲೆಯಲ್ಲಿ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಸಿಮ್ಸ್‌ನಲ್ಲಿ 30 ಹಾಸಿಗೆಯ ಪ್ರತ್ಯೇಕ ವಾರ್ಡ್ ಸಜ್ಜುಗೊಳಿಸಲಾಗಿದೆ. ವೈದ್ಯಾಧಿಕಾರಿಗಳ ತಂಡ ದಿನದ 24 ಗಂಟೆ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದರು.

ಕೋವಿಡ್ 19 ವೈರಸ್ ಹರಡುವ ಸಾಧ್ಯತೆ ಹಿನ್ನೆಲೆಯಲ್ಲಿ ಜನರು ಒಂದು ಕಡೆ ಸೇರುವಂತಹ ಎಲ್ಲಾ ಕಾರ್ಯಕ್ರಮಗಳನ್ನು ಕೈಬಿಡುವಂತೆ ಈಗಾಗಲೇ ಸೂಚನೆ ನೀಡಲಾಗಿದೆ. ಜಿಲ್ಲೆಯಲ್ಲಿ ಮುಂದಿನ 15 ದಿನಗಳ ಕಾಲ ಯಾವುದೇ ಜಾತ್ರೆಗಳನ್ನು ನಡೆಸದಂತೆ ತಿಳಿಸಲಾಗಿದ್ದು, ಈ ಕುರಿತು ಸಂಬಂಧಪಟ್ಟವರಿಗೆ ಸೂಕ್ತ ಮಾಹಿತಿಯನ್ನು ನೀಡಬೇಕು ಎಂದರು.

ದೊಡ್ಡ ಪ್ರಮಾಣದ ಯಾವುದೇ ಸಭೆ ಸಮಾರಂಭಗಳಿಗೆ ಅನುಮತಿ ನೀಡದಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಲಾಗಿದೆ. ಸರ್ಕಾರದ ಸೂಚನೆಗಳನ್ನು ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮ ಜರುಗಿಸಲು ತಿಳಿಸಲಾಗಿದೆ ಎಂದರು.

ಅಧಿಕಾರಿಗಳ ಸಭೆ: ಇದಕ್ಕೂ ಮೊದಲು ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಚಿವರು ಹಿರಿಯ ಅಧಿಕಾರಿಗಳ ಜತೆ ಕೋವಿಡ್ 19 ವೈರಸ್ ನಿರ್ವಹಣೆಗೆ ಕೈಗೊಂಡಿರುವ ಕ್ರಮಗಳ ಪರಿಶೀಲನೆ ಸಭೆ ನಡೆಸಿದರು.

ಕೋವಿಡ್ 19 ವೈರಸ್ ತಪಾಸಣೆಗೆ ಈಗಾಗಲೇ ಸಿಮ್ಸ್‌ನಲ್ಲಿ ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗಿದೆ. ಇದನ್ನು ಹೊರತು ಪಡಿಸಿ ಸುಬ್ಬಯ್ಯ ಮೆಡಿಕಲ್ ಕಾಲೇಜಿನಲ್ಲಿ ಪರ್ಯಾಯವಾಗಿ 300-400 ಬೆಡ್‍ಗಳ ಐಸೋಲೇಶನ್ ವಾರ್ಡ್‍ಗಾಗಿ ವ್ಯವಸ್ಥೆ ಮಾಡಲಾಗಿದೆ. ವಿದೇಶಗಳಿಂದ ಬರುವವರ ವಿವರಗಳನ್ನು ಎಲ್ಲಾ ಮೂಲಗಳಿಂದ ಪಡೆದು ಆರೋಗ್ಯ ಇಲಾಖೆಗೆ ನೀಡಲಾಗುತ್ತಿದ್ದು, ಆರೋಗ್ಯ ಇಲಾಖೆ ಸಿಬ್ಬಂದಿ ವಿದೇಶದಿಂದ ಬಂದಿರುವವರ ಆರೋಗ್ಯ ತಪಾಸಣೆ ಸೇರಿ ಎಲ್ಲಾ ಅಗತ್ಯ ಮುನ್ನೆಚ್ಚರಿಕೆ ವಹಿಸುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್ ಮಾಹಿತಿ ನೀಡಿದರು.

ಎಲ್ಲಾ ತಾಲ್ಲೂಕು ಆಸ್ಪತ್ರೆಗಳಲ್ಲಿಯೂ ಸಹ ಪ್ರತ್ಯೇಕ ವಾರ್ಡ್ ಸಜ್ಜುಗೊಳಿಸಲು ಕ್ರಮ ಕೈಗೊಳ್ಳಲಾಗಿದೆ. ಹೆಚ್ಚುವರಿಯಾಗಿ ಒಂದು ಸಾವಿರ ಮಾಸ್ಕ್ ಆರ್ಡರ್ ಮಾಡಲಾಗಿದ್ದು, ನಾಳೆಯೊಳಗಾಗಿ ತಲುಪಲಿದೆ. ಕೋವಿಡ್ 19 ನಿರ್ವಹಣೆಗೆ 100 ಕಿಟ್‍ಗಳನ್ನು ತರಿಸಲಾಗಿದೆ. ಸಿಮ್ಸ್‌ನಲ್ಲಿರುವ ಪ್ರಯೋಗಾಲಯದಲ್ಲಿ ಇದುವರೆಗೆ 15 ಪ್ರಕರಣಗಳ ಪರೀಕ್ಷೆ ನಡೆಸಲಾಗಿದ್ದು, ಎಲ್ಲವೂ ನೆಗೆಟಿವ್ ಬಂದಿದೆ ಎಂದು ತಿಳಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಂ. ಶಾಂತರಾಜು, ಜಿಲ್ಲಾ ಪಂಚಾಯಿತಿ ಸಿಇಒ ಎಂ.ಎಲ್. ವೈಶಾಲಿ, ಹೆಚ್ಚುವರಿ ಜಿಲ್ಲಾಧಿಕಾರಿ ಜಿ. ಅನುರಾಧ, ಜಿಲ್ಲಾ ಪಂಚಾಯಿತಿ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಇ. ಕಾಂತೇಶ್, ಸಿಮ್ಸ್‌ ನಿರ್ದೇಶಕ ಡಾ. ಲೇಪಾಕ್ಷಿ, ಡಾ. ಶಂಕರಪ್ಪ ಇದ್ದರು.

ಮಂಗನ ಕಾಯಿಲೆ: ತೀವ್ರ ನಿಗಾ

ಶಿವಮೊಗ್ಗದಲ್ಲಿ ಮಂಗನ ಖಾಯಿಲೆ ಸಹ ಇದ್ದು, ಇದರ ಬಗ್ಗೆಯೂ ತೀವ್ರ ನಿಗಾ ವಹಿಸಲಾಗಿದೆ. ಸಾರ್ವಜನಿಕರಿಗೆ ಸುಳ್ಳು ಸುದ್ದಿ ಹರಡಿಸದಂತೆ ಎಚ್ಚರ ವಹಿಸಲು ಈಶ್ವರಪ್ಪ ಸೂಚನೆ ನೀಡಿದರು.

ಮಣಿಪಾಲ್ ಅಲ್ಲಿಮಂಗನ ಕಾಯಿಲೆಗೆ ಚಿಕಿತ್ಸೆ ಪಡೆದವರಿಗೆ ಸರ್ಕಾರವೇ ಚಿಕಿತ್ಸಾ ವೆಚ್ಚ ಭರಿಸಲಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT