ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಷ್ಠರೋಗ ಪತ್ತೆ ಆಂದೋಲನಕ್ಕೆ ಉತ್ತಮ ಪ್ರತಿಕ್ರಿಯೆ

ಪ್ರತಿ ಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸುತ್ತಿರುವ ಆಶಾ ಕಾರ್ಯಕರ್ತೆಯರು
Last Updated 3 ಡಿಸೆಂಬರ್ 2019, 10:26 IST
ಅಕ್ಷರ ಗಾತ್ರ

ತೀರ್ಥಹಳ್ಳಿ: ಕುಷ್ಠರೋಗವನ್ನು ಸಂಪೂರ್ಣ ನಿರ್ಮೂಲನೆ ಮಾಡುವುದಕ್ಕಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಮ್ಮಿಕೊಂಡಿರುವ ಕುಷ್ಠರೋಗ ಪತ್ತೆಹಚ್ಚುವ ಆಂದೋಲನ ಭರದಿಂದ ಸಾಗಿದೆ.

ತಾಲ್ಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿನ ಗ್ರಾಮಗಳಲ್ಲಿನ ಪ್ರತಿ ಮನೆಗೆ ಆಶಾ ಕಾರ್ಯಕರ್ತೆಯರು ಭೇಟಿ ನೀಡಿ, ಕುಷ್ಠರೋಗ ಲಕ್ಷಣದ ಮಾಹಿತಿ ನೀಡಿ ರೋಗ ಪತ್ತೆ ಕಾರ್ಯದ ಸಮೀಕ್ಷೆಯಲ್ಲಿ
ತೊಡಗಿದ್ದಾರೆ.

ಈ ನಡುವೆ ಜಿಲ್ಲೆಯಲ್ಲಿ ಕುಷ್ಠರೋಗದ ಲಕ್ಷಣ ಹೊಂದಿರುವ ವ್ಯಕ್ತಿಗಳ ಪತ್ತೆಯಾಗಿದ್ದು, ಆರೋಗ್ಯ ಇಲಾಖೆ ರೋಗ ನಿಯಂತ್ರಣಕ್ಕೆ ಮುಂದಾಗಿದೆ. ತಾಲ್ಲೂಕಿನ ಮಾಳೂರು ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ ಮಂಗನ ಕಾಯಿಲೆ ಲಸಿಕೆ ನೀಡುತ್ತಿರುವ ಸಂದರ್ಭದಲ್ಲಿ ವ್ಯಕ್ತಿಯೊಬ್ಬರ ದೇಹದಲ್ಲಿ ಕುಷ್ಠ ರೋಗದ ಲಕ್ಷಣಗಳು ಕಂಡುಬಂದಿವೆ. ತಕ್ಷಣ ಎಚ್ಚೆತ್ತುಕೊಂಡ ಅವರಿಗೆ ಚಿಕಿತ್ಸೆ ನೀಡಬೇಕು ಎನ್ನುವಷ್ಟರಲ್ಲಿ ರೋಗಿ ನಾಪತ್ತೆಯಾಗಿದ್ದು ಆರೋಗ್ಯ ಇಲಾಖೆಗೆ ತಲೆನೋವಾಗಿ ಪರಿಣಮಿಸಿದೆ.

‘ಬಯಲು ನಾಡಿನಿಂದ ಮಲೆನಾಡಿಗೆ ಕೂಲಿ ಅರಸಿಕೊಂಡ ಬಂದ ವ್ಯಕ್ತಿ ಮಂಗನ ಕಾಯಿಲೆ ಲಸಿಕೆ ಪಡೆಯುವ ಸಂದರ್ಭದಲ್ಲಿ ಕುಷ್ಠರೋಗದ ಲಕ್ಷಣ ಇರುವುದು ಪತ್ತೆಯಾಗಿದೆ. ಆ ವ್ಯಕ್ತಿಗೆ ಚಿಕಿತ್ಸೆ ನೀಡಲು ಆರೋಗ್ಯ ಇಲಾಖೆ ಮುಂದಾಗಿದ್ದರೂ ವ್ಯಕ್ತಿಯು ಸಂಪರ್ಕಕ್ಕೆ ಸಿಗುತ್ತಿಲ್ಲ’ ಎಂಬ ಮಾಹಿತಿಯನ್ನು ಆರೋಗ್ಯ ಇಲಾಖೆ ಸಿಬ್ಬಂದಿ ನೀಡಿದೆ.

ತಾಲ್ಲೂಕಿನಲ್ಲಿ ಕಳೆದ ವರ್ಷ 3 ಪ್ರಕರಣ ಪತ್ತೆಯಾಗಿದ್ದು, ಚಿಕಿತ್ಸೆ ನೀಡಲಾಗಿದೆ. ಈಗ ಅವರು ಸಂಪೂರ್ಣ ಗುಣಮುಖರಾಗಿದ್ದಾರೆ. ಈ ಬಾರಿ 2 ಪ್ರಕರಣ ಪತ್ತೆಯಾಗಿವೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು
ತಿಳಿಸಿದ್ದಾರೆ.

ಡಿ. 10ರ ವರೆಗೆ ಕುಷ್ಠರೋಗ ಪತ್ತೆ ಹಚ್ಚುವ ಆಂದೋಲನ ನಡೆಯಲಿದೆ. ಕುಷ್ಠರೋಗವು ಮೈಕ್ರೋಬ್ಯಾಕ್ಟೀರಿಯಂ ಲೆಪ್ರೆ ಎಂಬ ರೋಗಾಣುವಿನಿಂದ ಬರುತ್ತದೆ. ದೇಹದ ಮೇಲೆ ಯಾವುದೇ ಸ್ಪರ್ಶ ಜ್ಞಾನವಿಲ್ಲದ ತಿಳಿತಿಳಿ ಅಥವಾ ತಾಮ್ರದ ಬಣ್ಣದ ಮಚ್ಚೆಗಳು ಕಾಣಿಸುವುದು, ಕೈಕಾಲುಗಳಲ್ಲಿ ಜೋಮು ಹಿಡಿದು ಸ್ಪರ್ಶಜ್ಞಾನ ಇಲ್ಲದಿರುವುದು, ಮುಖ ಅಥವಾ ಕೈಕಾಲುಗಳಲ್ಲಿ ಎಣ್ಣೆ ಸವರಿದಂತೆ ಹೊಳಪು ಇರುವುದು ಕಂಡುಬಂದರೆ ತಕ್ಷಣ ಹತ್ತಿರದ ಸರ್ಕಾರಿ ಆಸ್ಪತ್ರೆಗಳಲ್ಲಿ ಪರೀಕ್ಷಿಸಿಕೊಳ್ಳುವಂತೆ ಆಂದೋಲನದಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ.

ರೋಗ ಲಕ್ಷಣ ಕಂಡುಬಂದಲ್ಲಿ ಬಹು ಔಷಧ ಚಿಕಿತ್ಸೆಯಿಂದ ಸಂಪೂರ್ಣವಾಗಿ ಗುಣಪಡಿಸಬಹುದು. ಈ ಬಹು ಔಷಧ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ದೊರೆಯುತ್ತದೆ. ಆರಂಭಿಕ ಹಂತದಲ್ಲಿ ರೋಗವನ್ನು ಗುರುತಿಸಿ ಕ್ರಮಬದ್ಧ ಚಿಕಿತ್ಸೆ ಪಡೆದಲ್ಲಿ ಅಂಗವಿಕಲತೆಯನ್ನು ತಡೆಗಟ್ಟಬಹುದು.. ಚಿಕಿತ್ಸೆಯ ಅವಧಿ ಕೇವಲ 6 ತಿಂಗಳು ಅಥವಾ 12 ತಿಂಗಳು ಇದ್ದು, ಮನೆಯಲ್ಲಿಯೇ ಪಡೆಯಬಹುದು. ಬಹು ಔಷಧ ಚಿಕಿತ್ಸೆ ಉಚಿತವಾಗಿದ್ದು, ಸರಳ ಹಾಗೂ ಪರಿಣಾಮಕಾರಿಯಾಗಿದೆ ಎಂಬ ಜಾಗೃತಿ ಮಾಹಿತಿಯನ್ನು ಸಾರ್ವಜನಿಕರಿಗೆ ನೀಡುವ ಕೆಲಸವನ್ನು ಆರೋಗ್ಯ ಇಲಾಖೆ ಹಮ್ಮಿಕೊಂಡಿದೆ.

‘ಜನರನ್ನು ಭೇಟಿ ಮಾಡುವ ಕೆಲಸ ಸವಾಲಿನದ್ದಾಗಿದೆ. ಮುಂಜಾನೆ ಹಾಗೂ ಸಂಜೆ ಹೊತ್ತು ಹೆಚ್ಚು ಮನೆಗಳಿಗೆ ಭೇಟಿ ನೀಡುತ್ತೇವೆ. ಕುಷ್ಠರೋಗದ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಕರಪತ್ರಗಳನ್ನು ಹಂಚಲಾಗುತ್ತಿದೆ’ ಎಂದು ಆಶಾ ಕಾರ್ಯಕರ್ತೆ ಶಾರದಾ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT