ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಮಾಜಿಕ ನ್ಯಾಯಕ್ಕಾಗಿ ಶಿಕ್ಷಕರು ಶ್ರಮಿಸಲಿ

ರಾಜ್ಯ ಮಟ್ಟದ ಕಾರ್ಯಾಗಾರದಲ್ಲಿ ಕುಲಪತಿ ಪ್ರೊ.ಜೋಗನ್ ಶಂಕರ್
Last Updated 20 ಫೆಬ್ರುವರಿ 2019, 12:52 IST
ಅಕ್ಷರ ಗಾತ್ರ

ಶಿವಮೊಗ್ಗ: ಸಂಶೋಧನಾರ್ಥಿಗಳು ಕೆರೆಗಾತ್ರದ ವಿಷಯಗಳನ್ನು ಆಯ್ಕೆಮಾಡಿಕೊಂಡು ಸಂಶೋಧನೆಯಲ್ಲಿ ವಿಫಲರಾಗದೇ, ಬೋರ್‍ವೆಲ್ ಗಾತ್ರದ ವಿಷಯವನ್ನು ಆಯ್ಕೆಮಾಡಿಕೊಂಡು ಆಳವಾಗಿ ಅಧ್ಯಯನ ಮಾಡಿ ಯಶಸ್ವಿಯಾಗಬೇಕು ಎಂದು ಕುವೆಂಪು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಜೋಗನ್ ಶಂಕರ್ ಸಲಹೆ ನೀಡಿದರು.

ನಗರದ ಕುವೆಂಪು ಶತಮಾನೋತ್ಸವ ಶಿಕ್ಷಣ ಮಹಾವಿದ್ಯಾಲಯದಲ್ಲಿ ಕುವೆಂಪು ವಿಶ್ವವಿದ್ಯಾಲಯ ಪ್ರಶಿಕ್ಷಕರ ಸಂಘ, ಡಾ.ಬಿ.ಆರ್. ಅಂಬೇಡ್ಕರ್ ಅಧ್ಯಯನ ಕೇಂದ್ರದ ಸಹಯೋಗದಲ್ಲಿ ಬುಧವಾರ ಏರ್ಪಡಿಸಿದ್ದ ‘ವಿಶ್ವ ಸಾಮಾಜಿಕ ನ್ಯಾಯ ದಿನ ಮತ್ತು ಪರಿಣಿತ ಲೇಖನಗಳ ಬರೆಯುವಿಕೆ’ ಕುರಿತು ರಾಜ್ಯ ಮಟ್ಟದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

ಸಂಶೋಧನಾರ್ಥಿಗಳು ನಡೆಸುವ ಸಂಶೋಧನೆಗಳು ಅಡ್ಡಗೋಡೆಯ ಮೇಲೆ ದೀಪ ಇಟ್ಟಂತೆ ಇರಬಾರದು. ಸಂಶೋಧನೆಗಳಲ್ಲಿ ನಿಖರತೆ, ಸ್ಪಷ್ಟ ಮಾಹಿತಿ, ಒಟ್ಟು ಸಾರಾಂಶವನ್ನು ಸ್ವಷ್ಟವಾಗಿ ಕಟ್ಟಿಕೊಡಬೇಕು. ಬೇರೆಯವರು ನಡೆಸಿದ ಸಂಶೋಧನೆಗಳನ್ನೇ ಅಚ್ಚೊತ್ತದೆ, ಸ್ವಂತವಾಗಿ ಸಂಶೋಧನೆ ನಡೆಸಬೇಕು. ಹೊಸದನ್ನು ಸಂಶೋಧಿಸುವ ಗುಣಗಳನ್ನು ಮೈಗೂಡಿಸಿಕೊಳ್ಳಬೇಕು. ಅನಾವಶ್ಯಕ ವಿಷಯಗಳಿಗೆ ಹೆಚ್ಚು ಆಸ್ಪದ ನೀಡದೆ, ನಿಖರವಾದ ಮಾಹಿತಿಯನ್ನು ನೀಡಬೇಕು ಎಂದರು.

‘ನಮ್ಮಲ್ಲಿ ಹೆಚ್ಚು ಜ್ಞಾನ ಇರುತ್ತದೆ. ಆದರೆ ಅದನ್ನು ಅಕ್ಷರ ರೂಪದಲ್ಲಿ ಅಭಿವ್ಯಕ್ತಿಪಡಿಸುವಲ್ಲಿ ಸೋಲುತ್ತೇವೆ. ಈ ಬಗ್ಗೆ ಶಿಕ್ಷಕರು, ಸಂಶೋಧನಾರ್ಥಿಗಳು ಅರಿಯಬೇಕು. ಜ್ಞಾನವನ್ನು ಅಭಿವ್ಯಕ್ತಿಸುವ ಗುಣಗಳನ್ನು ಕರಗತ ಮಾಡಿಕೊಳ್ಳಬೇಕು. ಸಾಮಾಜಿಕ ನ್ಯಾಯ ಒದಗಿಸುವ ಹಾಗೂ ಸಮಾಜವನ್ನು ತಿದ್ದುವ ಕೆಲಸವನ್ನು ಶಿಕ್ಷಕರು, ಸಂಶೋಧನಾರ್ಥಿಗಳು ಮಾಡಬೇಕು’ ಎಂದು ಹೇಳಿದರು.

ಕುವೆಂಪು ವಿಶ್ವವಿದ್ಯಾಲಯ ಶಿಕ್ಷಣ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಜಗನ್ನಾಥ್ ಕೆ.ಡಾಂಗೆ, ‘ಜಾಗತಿಕ ಹಸಿವಿನ ಸೂಚ್ಯಂಕದಲ್ಲಿ ಭಾರತ ಬಳಲುತ್ತಿದೆ. ಇಡೀ ಪ್ರಪಂಚದಲ್ಲಿ ಭಾರತದಲ್ಲಿಯೇ 5 ವರ್ಷದೊಳಗಿನ ಮಕ್ಕಳು ಹೆಚ್ಚಾಗಿ ಹಸಿವಿನಿಂದ ಬಳಲುತ್ತಿದ್ದಾರೆ. ಸಾಮರ್ಥ್ಯಕ್ಕೆ ತಕ್ಕ ಉದ್ಯೋಗ ಸಿಗುತ್ತಿಲ್ಲ. ನಿರುದ್ಯೋಗ ಸಮಸ್ಯೆ ತಾಂಡವವಾಡುತ್ತಿದೆ. ಶೇ 27 ರಷ್ಟು ಮಂದಿ ಬಿಪಿಎಲ್‌ ಅಡಿಯಲ್ಲಿ ಜೀವಿಸುತ್ತಿದ್ದಾರೆ. ಕೇವಲ ಶೇ 1 ರಷ್ಟು ಮಂದಿ ಶೇ 71 ರಷ್ಟು ಸಂಪತ್ತು ಹೊಂದಿದ್ದಾರೆ. ಇದರಿಂದ ಸಾಮಾಜಿಕ ನ್ಯಾಯ ಸಿಗುತ್ತಿಲ್ಲ’ ಎಂದರು.

ಶಿಕ್ಷಣ ಸಮಾನತೆ ಮೂಡಿಸಬೇಕೇ ವಿನಾ ಅಸಮಾನತೆಯನ್ನಲ್ಲ. ಹಾಗಾಗಿ ಸಾಮಾಜಿಕ ನ್ಯಾಯ ತರುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ. ಸಮಾನತೆ ಎಂದರೆ ‘ಸಮಾನವಾದ ಅವಕಾಶವಲ್ಲ. ಆದ್ಯತೆಗೆ ಅನುಗುಣವಾದ ಅವಕಾಶ’ ಎಂಬ ಆರ್ಥಿಕ ತಜ್ಞ ಜಾನ್‌ರಾಲ್ಸ್‌ ಅವರ ಮಾತನ್ನು ಉಲ್ಲೇಖಿಸಿದ ಅವರು, ಪ್ರಚಲಿತ ಸಮಸ್ಯೆಗಳಿಗೆ ಪೂರಕವಾದ ಉತ್ತರಗಳನ್ನು ಕಂಡುಕೊಳ್ಳಲು ಈ ಕಾರ್ಯಕ್ರಮ ನಡೆಸಲಾಗಿದೆ. ಪ್ರತಿಯೊಬ್ಬರ ಮೂಲಭೂತ ಹಕ್ಕುಗಳ ರಕ್ಷಣೆ ಆಗಬೇಕು ಎನ್ನುವುದು ಈ ಕಾರ್ಯಕ್ರಮದ ಔಚಿತ್ಯ. ಶಿಕ್ಷಕರು ಸಹ ಈ ಎಲ್ಲಾ ವಿಷಯಗಳನ್ನು ಬೋಧನೆಯ ಮೂಲಕ ಮಕ್ಕಳಿಗೆ ಹೇಳಿಕೊಟ್ಟಾಗ ಮಾತ್ರವೇ ಸಾಮಾಜಿಕ ಬದಲಾವಣೆ ಸಾಧ್ಯ ಎಂದು ಅಭಿಪ್ರಾಯಪಟ್ಟರು.

ಕುವೆಂಪು ಶತಮಾನೋತ್ಸವ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಜಿ.ಮಧು, ಕುವೆಂಪು ವಿಶ್ವವಿದ್ಯಾಲಯ ಶಿಕ್ಷಣ ವಿಭಾಗದ ಡಾ.ಸಿ. ಗೀತಾ, ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಕಡಿದಾಳ್‌ ಗೋಪಾಲ್, ಪ್ರಮುಖರಾದ ಡಾ. ಪರಮೇಶ್ ಮಸಲವಾಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT