ಕಾಗೋಡು ಚಳವಳಿ ಸ್ಮಾರಕ ನಿರ್ಮಾಣವಾಗಲಿ

ಭಾನುವಾರ, ಮೇ 26, 2019
27 °C
‘ಕಾಗೋಡು ಚಳವಳಿ---–68 ರ ನೆನಪು ಕಾರ್ಯಕ್ರಮದಲ್ಲಿ ಸಾಹಿತಿ ನಾ.ಡಿಸೋಜ ಒತ್ತಾಯ

ಕಾಗೋಡು ಚಳವಳಿ ಸ್ಮಾರಕ ನಿರ್ಮಾಣವಾಗಲಿ

Published:
Updated:
Prajavani

ಸಾಗರ: ಮಲೆನಾಡಿನ ರೈತರಲ್ಲಿ ಅಭಿಮಾನ, ದಿಟ್ಟತನ, ಸಂಘಟನಾ ಶಕ್ತಿಯನ್ನು ಬೆಳೆಸಿ ದೇಶದ ಗಮನವನ್ನು ಸೆಳೆದ ಕಾಗೋಡು ಚಳವಳಿ ನೆನಪಿಗಾಗಿ ಕಾಗೋಡು ಗ್ರಾಮದಲ್ಲಿ ಒಂದು ಸ್ಮಾರಕ ನಿರ್ಮಾಣವಾಗುವ ಅಗತ್ಯವಿದೆ ಸಾಹಿತಿ ನಾ.ಡಿಸೋಜ ಪ್ರತಿಪಾದಿಸಿದರು.

ತಾಲ್ಲೂಕಿನ ಕಾಗೋಡು ಗ್ರಾಮದಲ್ಲಿ ‘ಕಾಗೋಡು ಚಳವಳಿ-68ರ ನೆನಪು’ ಅಂಗವಾಗಿ ಗುರುವಾರ ತಾಲ್ಲೂಕು ಪ್ರಗತಿಪರ ಒಕ್ಕೂಟ, ಕಾಗೋಡು ಗ್ರಾಮ ಸಮಿತಿ ಏರ್ಪಡಿಸಿದ್ದ ‘ಚಳವಳಿ-ಸಾಹಿತ್ಯ-ಸಂವಾದ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಇಂದಿನ ಯುವ ತಲೆಮಾರಿನ ಅನೇಕರಿಗೆ ಕಾಗೋಡು ಚಳವಳಿಯ ಬಗ್ಗೆ ನೆನಪು ಅಥವಾ ಮಾಹಿತಿಯೇ ಇಲ್ಲವಾಗಿದೆ. ವಾಸ್ತವವಾಗಿ ಮಲೆನಾಡಿನ ಯುವಕರು ಕಾಗೋಡು ಸತ್ಯಾಗ್ರಹದಲ್ಲಿ ಭಾಗವಹಿಸಿದ್ದ ರೈತರನ್ನು ಕೊಂಡಾಡುವ ಕೆಲಸ ಮಾಡಬೇಕಿತ್ತು. ಸ್ಮಾರಕ ನಿರ್ಮಿಸುವ ಜೊತೆಗೆ ಸತ್ಯಾಗ್ರಹದ ಬಗ್ಗೆ ಮತ್ತಷ್ಟು ಸಂಶೋಧನೆ ನಡೆದು ಯುವ ತಲೆಮಾರಿಗೆ ಅದರ ಮಹತ್ವವನ್ನು ತಿಳಿಸುವ ಕೆಲಸ ಆಗಬೇಕಿದೆ ಎಂದರು.

ಕಾಗೋಡು ಸತ್ಯಾಗ್ರಹ ನಡೆದ 1950ರ ದಶಕದ ಆರಂಭದಲ್ಲಿ ಸಾಗರ ತಾಲ್ಲೂಕಿನ ರೈತರು ಪೇಟೆಗೆ ಬರಲು ಹೆದರುತ್ತಿದ್ದರು. ತುಂಡು ಪಂಚೆ, ಹರಿದ ಅಂಗಿ ತೊಟ್ಟ ರೈತರು ಪೇಟೆಗೆ ಬಂದರೆ ಇಲ್ಲಿನ ನಾಗರಿಕ ಸಮಾಜ ಅವರನ್ನು ನಿಕೃಷ್ಟವಾಗಿ ಕಾಣುತ್ತಿತ್ತು. ಇಂತಹ ಸನ್ನಿವೇಶ ಬದಲಾಗಿ ರೈತರಲ್ಲಿ ಸ್ವಾಭಿಮಾನ ಮೂಡಿದ್ದರೆ ಅದಕ್ಕೆ ಕಾಗೋಡು ಸತ್ಯಾಗ್ರಹವೇ ಕಾರಣ ಎಂದು ವಿಶ್ಲೇಷಿಸಿದರು.

ಸಾಮಾಜಿಕ ಕಾರ್ಯಕರ್ತ ಶಿವಾನಂದ ಕುಗ್ವೆ, ‘ಕಾಗೋಡು ಚಳವಳಿ ಭೂ ಮಾಲೀಕ ವ್ಯವಸ್ಥೆ ವಿರುದ್ದ ನಡೆದ ಹೋರಾಟವೇ ಹೊರತು ಯಾವುದೇ ಒಂದು ಜಾತಿಯ ವಿರುದ್ಧ ನಡೆದ ಸತ್ಯಾಗ್ರಹವಲ್ಲ. ಭೂ ಮಾಲೀಕರು ಮೇಲ್ವರ್ಗಕ್ಕೆ ಸೇರಿದ್ದು, ಗೇಣಿದಾರರು ಹಿಂದುಳಿದ ವರ್ಗಕ್ಕೆ ಸೇರಿದ್ದರು ಎನ್ನುವ ಮಾತ್ರಕ್ಕೆ ಸತ್ಯಾಗ್ರಹವನ್ನು ಒಂದು ಜಾತಿ ಅಥವಾ ವರ್ಗದ ವಿರುದ್ಧ ನಡೆದ ಹೋರಾಟ ಎಂದು ಬಿಂಬಿಸುವುದು ಸರಿಯಲ್ಲ’ ಎಂದರು.

ಶಿಕ್ಷಣ,ರಾಜಕೀಯ ನಾಯಕತ್ವ, ಸಾರಿಗೆ ಸಂಪರ್ಕ ಕೊರತೆ ಇದ್ದ ಕಾಲದಲ್ಲಿ ರೈತರು ಸಂಘಟಿತರಾಗಿ ಭೂ ಮಾಲೀಕರ ವಿರುದ್ಧ ಧ್ವನಿ ಎತ್ತಿದ್ದು ಸಾಧಾರಣ ಸಂಗತಿಯಲ್ಲ. ಎಂತಹ ಸಂದರ್ಭದಲ್ಲೂ ಹಿಂಸೆಯ ಮಾರ್ಗ ಹಿಡಿಯದೆ ಅಹಿಂಸೆಯ ದಾರಿಯಲ್ಲೇ ನಡೆದ ಈ ಹೋರಾಟ ಇಂದಿಗೂ ಮಾದರಿಯಾಗಿದೆ. ನಾಡಿಗೆ ಹೋರಾಟದ ಬೆಳಕು ಕೊಟ್ಟ ಗ್ರಾಮ ಕಾಗೋಡು ಎಂಬುದು ಹೆಮ್ಮೆಯ ವಿಷಯ ಎಂದು ಹೇಳಿದರು.

ಬರಹಗಾರ ಹರ್ಷಕುಮಾರ್ ಕುಗ್ವೆ, ‘ಕಾಗೋಡು ಸತ್ಯಾಗ್ರಹದ ಸಂದರ್ಭದಲ್ಲಿ ಮಲೆನಾಡಿನ ರೈತರ ಸಂಕಷ್ಟಗಳನ್ನು ಮಾರ್ಮಿಕವಾಗಿ ತಮ್ಮ ಬರಹಗಳಲ್ಲಿ ಚಿತ್ರಿಸಿದ ಶ್ರೇಯಸ್ಸು ನಾ.ಡಿಸೋಜ ಅವರಿಗೆ ಸಲ್ಲುತ್ತದೆ. ಭೂಮಿಯ ಹಕ್ಕಿನ ವಿಷಯದಲ್ಲಿ ಒಂದು ಮಹತ್ವದ ಬದಲಾ
ವಣೆಗೆ ಕಾರಣವಾದ ಕಾಗೋಡು ಸತ್ಯಾಗ್ರಹ ಕೇವಲ ದಿನಾಚರಣೆಗೆ ಸೀಮಿತವಾಗಬಾರದು’ ಎಂದು ಹೇಳಿದರು.

ರೈತ ಮುಖಂಡ ಕೆ.ಟಿ.ಗಂಗಾಧರ್, ‘ಕಾನೂನುಗಳ ಹೆಸರಿನಲ್ಲಿ ರೈತರನ್ನು ಜೈಲಿಗೆ ತಳ್ಳುವ ಕೆಲಸ ನಡೆಯುತ್ತಿದೆ. ಕಾನೂನು ಮಾಡಲು ಸಮರ್ಥ ಪ್ರತಿನಿಧಿಗಳು ಆಯ್ಕೆಯಾಗಿದ್ದರೆ ಇಂತಹ ಪರಿಸ್ಥಿತಿ ಬರುತ್ತಿರಲಿಲ್ಲ’ ಎಂದು ಅಭಿಪ್ರಾಯಪಟ್ಟರು.

ಕಾಗೋಡು ಗ್ರಾಮ ಸಮಿತಿ ಅಧ್ಯಕ್ಷ ಪಾಪಣ್ಣ ಅಧ್ಯಕ್ಷತೆ ವಹಿಸಿದ್ದರು. ತಾಲ್ಲೂಕು ಪ್ರಗತಿಪರ ಒಕ್ಕೂಟದ ಅಧ್ಯಕ್ಷ ರಮೇಶ್ ಇ.ಕೆಳದಿ, ರೈತ ಸಂಘದ ಮುಖಂಡರಾದ ಗುರುಮೂರ್ತಿ ಕೌತಿ, ಹಿರಿಯಣ್ಣಯ್ಯ, ಪ್ರಮುಖರಾದ ಸಸರವಳ್ಳಿ ಈಶ್ವರ, ಹೊಯ್ಸಳ ಗಣಪತಿಯಪ್ಪ, ಕಣಸೆ ಜಯಮ್ಮ, ಕೋಣೆ ರಾಚಪ್ಪ, ನಾರಾಯಣಪ್ಪ, ಹೊಸಗದ್ದೆ ರಾಮಪ್ಪ, ರಾಮಣ್ಣಹಸಲರು ಇದ್ದರು.

ಲಕ್ಷ್ಮಮ್ಮ, ಕೆರಿಯಮ್ಮ ಸಂಗಡಿಗರು ಸೋಬಾನೆ ಪದ ಹಾಡಿದರು. ನಾರಾಯಣಪ್ಪ ಎಮ್.ಕೆ. ಸ್ವಾಗತಿಸಿದರು. ವೀರೇಶ್ ಜಿ.ನಿರೂಪಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !