ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಂಕಿನಲ್ಲೊಂದು ಕೃಷಿ ಜ್ಞಾನಭಂಡಾರ

ರೈತರಿಗಾಗಿ ಕೃಷಿ ಗ್ರಂಥಾಲಯ ಸ್ಥಾಪಿಸಿದ ‘ಕೃಷಿ ಪಂಡಿತ’
Last Updated 18 ನವೆಂಬರ್ 2019, 19:45 IST
ಅಕ್ಷರ ಗಾತ್ರ

ಕೊಲ್ಹಾರ: ಶಾಲೆ– ಕಾಲೇಜುಗಳಲ್ಲಿ, ವಿಶ್ವವಿದ್ಯಾಲಯಗಳಲ್ಲಿ ಗ್ರಂಥಾಲಯ ಕಾಣುವುದು ಸಾಮಾನ್ಯ. ಆದರೆ, ರೈತರಿಗಾಗಿಯೇ ಅಪರೂಪಕ್ಕೆ ಅಪರೂಪ ಎನ್ನುವಂತೆ ಬ್ಯಾಂಕಿನಲ್ಲೊಂದು ಕೃಷಿ ಗ್ರಂಥಾಲಯ ಸ್ಥಾಪಿಸುವ ಮೂಲಕ ಕೃಷಿ ಪಂಡಿತರೊಬ್ಬರು ಮಾದರಿ ಕಾರ್ಯ ಮಾಡಿದ್ದಾರೆ.

ರಾಜ್ಯಮಟ್ಟದ ಕೃಷಿ ಪಂಡಿತ ಪ್ರಶಸ್ತಿ ಪುರಸ್ಕೃತ ಸಿದ್ದಪ್ಪ ಗುಂಡಪ್ಪ ಬಾಲಗೊಂಡ ಅವರು ಕೊಲ್ಹಾರದ ಬಸವೇಶ್ವರ ವಿವಿಧೋದ್ದೇಶ ಸೌಹಾರ್ದ ಸಹಕಾರ ಬ್ಯಾಂಕ್‌ನ ಅಧ್ಯಕ್ಷರಾಗಿದ್ದು, ನಾಲ್ಕು ವರ್ಷಗಳ ಹಿಂದೆ ಬ್ಯಾಂಕ್ ಅನ್ನು ಪಟ್ಟಣದ ಶಿವಾಜಿ ವೃತ್ತದ ಬಳಿ ನೂತನ ಕಟ್ಟಡಕ್ಕೆ ಸ್ಥಳಾಂತರಗೊಳಿಸಿದ ನಂತರ ತಮ್ಮ ಬ್ಯಾಂಕಿನಲ್ಲಿರುವ ಸಭಾ ಭವನದಲ್ಲಿ ಸುಂದರ, ಸುಸಜ್ಜಿತ ಕೃಷಿ ಜ್ಞಾನ ಭಂಡಾರವನ್ನು ಆರಂಭಿಸಿದ್ದಾರೆ.

ಇಲ್ಲಿ ತೋಟಗಾರಿಕೆ, ಬೀಜೋತ್ಪಾದನೆ ಹಾಗೂ ಎಣ್ಣೆಕಾಳುಬೆಳೆ, ಅರಣ್ಯಕೃಷಿ, ಸಾವಯವ ಕೃಷಿ, ಔಷಧಿ ಮತ್ತು ಪುಷ್ಪ ಕೃಷಿ, ಪಶುಸಂಗೋಪನೆ, ಸಮಗ್ರ ತೋಟಗಾರಿಕೆ, ಅಧಿಕ ಇಳುವರಿಗೆ ಅಧುನಿಕ ಬೇಸಾಯ ಪದ್ಧತಿಗಳು, ಮೀನು ಕೃಷಿ ಸೇರಿ ಇತರ ಕೃಷಿ ವಿಷಯಕ್ಕೆ ಸಂಬಂಧಿಸಿದ ಪುಸ್ತಕಗಳ ಪ್ರತ್ಯೇಕ ವಿಭಾಗಗಳಿದ್ದು, ಜತೆಗೆ ಪ್ರತಿ ತಿಂಗಳು ಹಲವಾರು ಕೃಷಿ ಮಾಸಿಕ ಪುಸ್ತಕಗಳು, ಸರ್ಕಾರಿ ಯೋಜನೆಗಳ ಕುರಿತು ಹಲವಾರು ಮಾಹಿತಿ ಫಲಕಗಳು, ಭಿತ್ತಿ ಪತ್ರಗಳು ಹಾಗೂ ಸಹಕಾರ, ಕಾನೂನು ಅರಿವು ಮತ್ತು ಯೋಗ, ಧ್ಯಾನದ ಪುಸ್ತಗಳು ಹೀಗೆ ಸುಮಾರು ಸಾವಿರಕ್ಕೂ ಹೆಚ್ಚು ಪುಸ್ತಕಗಳ ದೊಡ್ಡ ಭಂಡಾರವಿದೆ.

ವಿಜಯಪುರ ಕೃಷಿ ವಿಸ್ತರಣಾಧಿಕಾರಿ ಆರ್.ಬಿ.ಬೆಳ್ಳಿ ಅವರು ಬಾಲಗೊಂಡರ ರೈತಪರ ಕಾರ್ಯ ಮೆಚ್ಚಿ ನೂರಾರು ತೋಟಗಾರಿಕಾ ಪುಸ್ತಕಗಳನ್ನು ಗ್ರಂಥಾಲಯಕ್ಕೆ ನೀಡಿ ಪ್ರೋತ್ಸಾಹಿಸಿದ್ದಾರೆ. ಕೃಷಿ, ತೋಟಗಾರಿಕೆ, ಪಶುಸಂಗೋಪನೆ ಇಲಾಖೆಗಳು ಹೊರತಂದ ಪುಸ್ತಕಗಳು ಇಲ್ಲಿವೆ.

ಬಾಲಗೊಂಡ ಅವರು ಕೃಷಿಮೇಳ ಕಾರ್ಯಕ್ರಮಗಳಿಗೆ ಹೋದ ಕಡೆಯಲ್ಲಾ ಪುಸ್ತಕಗಳನ್ನು ಖರೀದಿಸಿ ಗ್ರಂಥಾಲಯದಲ್ಲಿ ಸಂಗ್ರಹಿಸಿದ್ದಾರೆ. ಪ್ರತಿದಿನ ಬ್ಯಾಂಕಿಗೆ ಬರುವ ರೈತರು ಹಾಗೂ ಶಾಲೆಯ ಮಕ್ಕಳು ಗ್ರಂಥಾಲಯದ ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ.

ರೈತರು ತಮಗೆ ಬೇಕಾದ ಪುಸ್ತಕವನ್ನು ರಿಜಿಸ್ಟರ್‌ನಲ್ಲಿ ಅವರ ಹೆಸರು ಹಾಗೂ ಮೊಬೈಲ್ ಸಂಖ್ಯೆ ನಮೂದಿಸಿ ವಾರಗಟ್ಟಲೆ ಪುಸ್ತಕ ತೆಗೆದುಕೊಂಡು ಹೋಗುವ ವ್ಯವಸ್ಥೆಯಿದೆ. ಅಲ್ಲದೇ ಬ್ಯಾಂಕಿನ ರೈತಪರ ಸೇವೆಗಳನ್ನು ಗುರುತಿಸಿ ಸರ್ಕಾರ ಪ್ರಸಕ್ತ ವರ್ಷದ ರಾಜ್ಯಮಟ್ಟದ ಅತ್ಯುತ್ತಮ ಸಹಕಾರ ಬ್ಯಾಂಕ್ ಪ್ರಶಸ್ತಿ ನೀಡಿ ಪ್ರೋತ್ಸಾಹಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT