ಬೆಂಗಳೂರಿಗೆ ಲಿಂಗನಮಕ್ಕಿ ನೀರು: ವಿರೋಧ

7

ಬೆಂಗಳೂರಿಗೆ ಲಿಂಗನಮಕ್ಕಿ ನೀರು: ವಿರೋಧ

Published:
Updated:
ಲಿಂಗನಮಕ್ಕಿ ಜಲಾಶಯ

ಶಿವಮೊಗ್ಗ: ಬೆಂಗಳೂರು ನಗರಕ್ಕೆ ಲಿಂಗನಮಕ್ಕಿ ಜಲಾಶಯದಿಂದ ಕುಡಿಯುವ ನೀರು ಪೂರೈಕೆ ಯೋಜನೆ ಕೈಗೆತ್ತಿಕೊಳ್ಳುವ ಸರ್ಕಾರದ ಆಲೋಚನೆ ಮುರ್ಖತನದ ಪರಮಾವಧಿ ಎಂದು ಪರಿಸರವಾದಿಗಳು, ಸಾಹಿತಿಗಳು ಟೀಕಿಸಿದ್ದಾರೆ.

ಜಲಾಶಯ ಸಂಪೂರ್ಣ ಭರ್ತಿಯಾದರೆ 151 ಟಿಎಂಸಿ ಅಡಿ ನೀರು ಸಂಗ್ರಹವಾಗುತ್ತದೆ. ಈ ನೀರಿನಿಂದ 1,035 ಮೆಗಾವಾಟ್ ವಿದ್ಯುತ್ ಉತ್ಪಾದಿಸಲಾಗುತ್ತದೆ. 50 ಟಿಎಂಸಿ ನೀರನ್ನು ಕುಡಿಯುವ ಯೋಜನೆಗೆ ಬಳಸಿಕೊಂಡರೆ 150ರಿಂದ 200 ಮೆಗಾವಾಟ್ ವಿದ್ಯುತ್ ಉತ್ಪಾದನೆ ಕುಂಠಿತವಾಗುತ್ತದೆ ಎನ್ನುವುದು ಅವರ ಅಭಿಪ್ರಾಯ.

ಶರಾವತಿ ನದಿಗೆ ಲಿಂಗಮಕ್ಕಿ ಬಳಿ ಜಲಾಶಯ ಕಟ್ಟಲು 12 ಸಾವಿರ ಎಕರೆ ಕಾಡು ನಾಶ ಮಾಡಲಾಗಿತ್ತು. ಸಾವಿರಾರು ಕುಟುಂಬಗಳನ್ನು ಒಕ್ಕಲೆಬ್ಬಿಸಲಾಗಿತ್ತು. ನೆಲೆ ಕಳೆದು ಕೊಂಡವರಿಗೆ ಇಂದಿಗೂ ಸೂಕ್ತ ನೆಲೆ, ಪರ್ಯಾಯ ವ್ಯವಸ್ಥೆ ಕಲ್ಪಿ
ಸಲು ಸಾಧ್ಯವಾಗಿಲ್ಲ. ಇಲ್ಲಿಂದ ಬೆಂಗಳೂರಿಗೆ ಸುಮಾರು 400 ಕಿ.ಮೀ. ದೂರವಿದೆ. ಪೈಪ್‌ಲೈನ್ ಅಳವಡಿಸಲು, ಕಾಲುವೆ ತೋಡಲು ಮತ್ತೆಷ್ಟು ಮರಗಳ ಮಾರಣಹೋಮ ನಡೆಸಬೇಕು ಎಂದು ಸಾಹಿತಿ ನಾ. ಡಿಸೋಜ ಪ್ರಶ್ನಿಸಿದರು.

‘ನಾನು ಚಿಕ್ಕವನಿದ್ದಾಗ ಜೋಗದ ಭಾಗದಲ್ಲಿ 300ರಿಂದ 350 ಇಂಚು ಮಳೆಯಾಗುತ್ತಿತ್ತು. ಈಗ ಅದು 100ರ ಒಳಗೆ ಇದೆ. ಇರುವ ಕಾಡು ಉಳಿಸಿಕೊಳ್ಳದಿದ್ದರೆ ನಾಡಿಗೆ ಉಳಿಗಾಲವಿಲ್ಲ. ಈ ಯೋಜನೆ ಜಾರಿಗೆ ಯೋಚಿಸುವ ಸರ್ಕಾರ ಮೂರ್ಖ ಸರ್ಕಾರ’ ಎಂದು ಡಿಸೋಜ ಆಕ್ರೋಶ ವ್ಯಕ್ತಪಡಿಸಿದರು.

ಇಡೀ ದಕ್ಷಿಣ ಭಾರತಕ್ಕೆ ಜಲಮೂಲ ಪಶ್ಚಿಮಘಟ್ಟ ಪ್ರದೇಶ. ಈ ಭಾಗದಲ್ಲೇ ಮಳೆ ಕೊರತೆ ಎದುರಾಗಿದೆ. ಕಳೆದ 10 ವರ್ಷಗಳಲ್ಲಿ ಮೂರು ಬಾರಿ ಮಾತ್ರ ಲಿಂಗನಮಕ್ಕಿ ಭರ್ತಿಯಾಗಿದೆ. ಜಲಾಶಯದ ಸರಾಸರಿ ನೀರಿನ ಮಟ್ಟ 151 ಟಿಎಂಸಿ ಇದ್ದರೂ, ಹೂಳು ತುಂಬಿರುವ ಕಾರಣ ವಾಸ್ತವದಲ್ಲಿ ಅಷ್ಟು ನೀರಿಲ್ಲ. ಬೆಂಗಳೂರಿಗೆ ಈ ನೀರು ತೆಗೆದುಕೊಂಡು ಹೋದರೆ ವಿದ್ಯುತ್ ಘಟಕಗಳು ಸ್ಥಗಿತವಾಗುತ್ತವೆ ಎಂದು ಪಶ್ಚಿಮಘಟ್ಟ ಕಾರ್ಯಪಡೆ ಮಾಜಿ ಅಧ್ಯಕ್ಷ ಅನಂತ ಹೆಗಡೆ ಆಶಿಸರ ಎಚ್ಚರಿಸಿದರು.

ಜಲ ವಿದ್ಯುತ್ ಯೋಜನೆಯಲ್ಲಿ ಈಗ ಉತ್ಪಾದಿಸುವ ವಿದ್ಯುತ್ ಸಾಲುತ್ತಿಲ್ಲ ಎಂದು ಭೂಗರ್ಭ ಯೋಜನೆಗೆ ಆಲೋಚಿಸುತ್ತಿದ್ದಾರೆ. ಆ ಮೂಲಕ 2 ಸಾವಿರ ಮೆಗಾವಾಟ್ ಉತ್ಪಾದಿಸುವ ಗುರಿ ಹೊಂದಲಾಗಿದೆ. ಹೀಗಿರುವಾಗ ಇಲ್ಲಿಂದ ನೀರು ಏಕೆ ತೆಗೆದುಕೊಂಡು ಹೋಗಬೇಕು? ಅಲ್ಲದೇ ಅದಕ್ಕಾಗಿ ಸಾವಿರಾರು ಕೋಟಿ ರೂಪಾಯಿ ವೆಚ್ಚ ಮಾಡಬೇಕಾಗುತ್ತದೆ. ಸಾವಿರಾರು ಮರಗಳು ನಾಶವಾಗುತ್ತವೆ. ಇದು ಅತ್ಯಂತ ವೆಚ್ಚದಾಯಕ ಎಂದರು.

ಸಾಗರ ಸೇರಿದಂತೆ ಹಲವೆಡೆ ಕುಡಿಯುವ ನೀರಿಗಾಗಿ ಲಿಂಗನಮಕ್ಕಿಯಿಂದ ಪೈಪ್‌ಲೈನ್ ಅಳವಡಿಸಲಾಗಿದೆ. ಹೀಗೇ ಮುಂದುವರಿದರೆ ಲಿಂಗನಮಕ್ಕಿ ಯೋಜನೆ ಮೂಲ ಆಶಯವನ್ನೇ ಕಳೆದುಕೊಳ್ಳುತ್ತದೆ. ಇದರ ವಿರುದ್ಧ ಜೂನ್ 20ರಂದು ಶಿರಸಿಯಲ್ಲಿ ಸಭೆ ಕರೆಯಲಾಗಿದೆ. ಯೋಜನೆ ವಿರುದ್ಧ ಹೋರಾಟ ಕುರಿತು ಚರ್ಚಿಸಲಾಗುವುದು ಎಂದು ಆಶಿಸರ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !