ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರಿಗೆ ಲಿಂಗನಮಕ್ಕಿ ನೀರು–ಜುಲೈ 10ಕ್ಕೆ ಶಿವಮೊಗ್ಗ ಜಿಲ್ಲೆ ಬಂದ್‌ಗೆ ನಿರ್ಧಾರ

ನೀರು ಪೂರೈಕೆ ಯೋಜನೆಗೆ ವಿರೋಧ; ಮೊಳಗಿದ ಪ್ರತ್ಯೇಕ ರಾಜ್ಯದ ಕೂಗು
Last Updated 22 ಜೂನ್ 2019, 18:56 IST
ಅಕ್ಷರ ಗಾತ್ರ

ಸಾಗರ: ಲಿಂಗನಮಕ್ಕಿಯಿಂದ ಬೆಂಗಳೂರಿಗೆ ಕುಡಿಯುವ ನೀರು ಹರಿಸುವ ರಾಜ್ಯ ಸರ್ಕಾರದ ಪ್ರಸ್ತಾವಿತ ಯೋಜನೆಯನ್ನು ವಿರೋಧಿಸಿ ಜುಲೈ 10ರಂದು ಶಿವಮೊಗ್ಗ ಜಿಲ್ಲೆ ಬಂದ್ ಕರೆ ನೀಡಬೇಕು ಎಂದು ಶನಿವಾರ ನಡೆದ ಶರಾವತಿ ಉಳಿಸಿ ಹೋರಾಟ ಒಕ್ಕೂಟದ ಸಭೆಯಲ್ಲಿ ತೀರ್ಮಾನಿಸಲಾಯಿತು.

ಇಲ್ಲಿನ ಸರ್ಕಾರಿ ನೌಕರರ ಭವನದಲ್ಲಿ ನಡೆದ ವಿವಿಧ ಸಂಘ–ಸಂಸ್ಥೆಗಳ, ಜನಪ್ರತಿನಿಧಿಗಳ ಸಮಾಲೋಚನಾ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಪ್ರಸ್ತಾವಿತ ಯೋಜನೆಯ ಸಾಧಕ–ಬಾಧಕಗಳ ಕುರಿತು ಅಧ್ಯಯನ ನಡೆಸಿ ಸರ್ಕಾರಕ್ಕೆ ವರದಿ ನೀಡಲು ಇಂಧನ ತಜ್ಞ ಶಂಕರ್ ಶರ್ಮಾ ನೇತೃತ್ವದಲ್ಲಿ ಸಮಿತಿ ರಚಿಸಲು ನಿರ್ಧರಿಸಲಾಯಿತು. ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಒಕ್ಕೂಟದ ವತಿಯಿಂದ ಸಭೆ ನಡೆಸಿ ಯೋಜನೆಯಿಂದ ಮಲೆನಾಡಿಗೆ ಆಗುವ ತೊಂದರೆಗಳ ಬಗ್ಗೆ ಜನರಿಗೆ ಮನವರಿಕೆ ಮಾಡಿ ಯೋಜನೆ ವಿರುದ್ಧ ಪ್ರಬಲ ಜನಾಂದೋಲನ ರೂಪಿಸಲು ಸಹ ತೀರ್ಮಾನಿಸಲಾಯಿತು. ಈ ಸಂಬಂಧ ಹಿರಿಯ ಸಾಹಿತಿ ನಾ. ಡಿಸೋಜ ಹಾಗೂ ದೇಸಿ ಚಿಂತಕ ಪ್ರಸನ್ನ ಗೌರವಾಧ್ಯಕ್ಷತೆಯಲ್ಲಿ ಸಂಚಾಲನ ಸಮಿತಿಯೊಂದನ್ನು ರಚಿಸಲಾಯಿತು.

ಸಭೆಯಲ್ಲಿ ಮಾತನಾಡಿದ ನಾ.ಡಿಸೋಜ, ‘ಶರಾವತಿ ನದಿ 80 ಮೈಲು ಕ್ರಮಿಸುವ ಒಂದು ಸಣ್ಣ ನದಿ. ಸಮುದ್ರ ಮಟ್ಟದಿಂದ 2,500 ಅಡಿ ಎತ್ತರದಲ್ಲಿರುವ ಬೆಂಗಳೂರಿಗೆ ಈ ನದಿಯ ನೀರನ್ನು ಹರಿಸಬಹುದು ಎಂಬುದು ಗುಡ್ಡಕ್ಕೆ ನೀರು ಹೊರುವ ಯೋಜನೆಯಂತೆ ಆಗುತ್ತದೆ’ ಎಂದು ಟೀಕಿಸಿದರು.

ಬಿಜೆಪಿಯ ಟಿ.ಡಿ. ಮೇಘರಾಜ್, ಕಾಂಗ್ರೆಸ್‌ನ ಬಿ.ಆರ್.ಜಯಂತ್, ಮಲ್ಲಿಕಾರ್ಜುನ ಹಕ್ರೆ, ಪ್ರಭಾವತಿ ಚಂದ್ರಕಾಂತ್, ಕಲಗೋಡು ರತ್ನಾಕರ್ ಸೇರಿದಂತೆ ವಿವಿಧ ಮುಖಂಡರು ಸಭೆಯಲ್ಲಿ ಪಾಲ್ಗೊಂಡಿದ್ದರು.

ಮೊಳಗಿದ ಪ್ರತ್ಯೇಕ ರಾಜ್ಯದ ಕೂಗು

ಲಿಂಗನಮಕ್ಕಿ ಜಲಾಶಯದಿಂದ ಬೆಂಗಳೂರಿಗೆ ನೀರು ಹರಿಸುವ ಯೋಜನೆಯನ್ನು ಸರ್ಕಾರ ಕೈಬಿಡದೇ ಇದ್ದರೆ ಮಲೆನಾಡು ಹಾಗೂ ಕರಾವಳಿ ಜಿಲ್ಲೆಗಳ ಜನರು ಸೇರಿ ಪ್ರತ್ಯೇಕ ರಾಜ್ಯದ ಬೇಡಿಕೆಯನ್ನು ಮುಂದಿಡಬೇಕಾಗುತ್ತದೆ ಎಂಬ ಕೂಗು ಸಭೆಯಲ್ಲಿ ವ್ಯಕ್ತವಾಯಿತು.

* ಲಿಂಗನಮಕ್ಕಿ ಜಲಾಶಯದಲ್ಲಿ ವಿದ್ಯುತ್ ಉತ್ಪಾದನೆಗೆ ಬಳಕೆ ಮಾಡಿದ ನೀರು ಸಮುದ್ರಕ್ಕೆ ಸೇರುತ್ತಿತ್ತು. ಆ ನೀರಿನಲ್ಲಿ 10 ಟಿಎಂಸಿ ಅಡಿ ನೀರನ್ನು ಪರಿಸರಕ್ಕೆ ಹಾನಿಯಾಗದಂತೆ ಬೆಂಗಳೂರಿಗೆ ಪೂರೈಸುವ ಯೋಜನೆ ರೂಪಿಸಲಾಗಿದೆ

–ಡಾ.ಜಿ.ಪರಮೇಶ್ವರ,ಉಪಮುಖ್ಯಮಂತ್ರಿ

*ಈ ಭಾಗದ ಹಳ್ಳಿಗಳಲ್ಲೇ ಕುಡಿಯುವ ನೀರಿನ ಕೊರತೆ ತೀವ್ರವಾಗಿ ಕಾಡುತ್ತಿರುವಾಗ ಇಲ್ಲಿಂದ ಬೆಂಗಳೂರಿಗೆ ನೀರು ಹರಿಸುವುದು ಯಾವುದೇ ಕಾರಣಕ್ಕೂ ಕಾರ್ಯಸಾಧುವಲ್ಲ.
- ಅಖಿಲೇಶ್ ಚಿಪ್ಪಳಿ, ಪರಿಸರ ಕಾರ್ಯಕರ್ತ

*ಈಗಿನ ಪ್ರಸ್ತಾವಿತ ಯೋಜನೆ ಜಾರಿಗೆ ಬಂದರೆ ಅದನ್ನು ಕಾರ್ಯಗತಗೊಳಿಸಲು ಲಿಂಗನಮಕ್ಕಿ ಜಲಾಶಯದಿಂದ ಉತ್ಪಾದನೆಯಾಗುವ ಶೇ 50ರಷ್ಟು ವಿದ್ಯುತ್ ಬೇಕಾಗುತ್ತದೆ.
-ಶಂಕರ್ ಶರ್ಮಾ, ಇಂಧನ ತಜ್ಞ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT