ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕಮಿಷನ್‌ ದಂದೆಗೆ ಕಡಿವಾಣ ಹಾಕಿ’

ದೇವೇಗೌಡರ ಕುಟುಂಬದ ವಿರುದ್ಧ ಲಿಂಗಪ್ಪ ಪರೋಕ್ಷ ವಾಗ್ದಾಳಿ: ಪ್ರತಿಭಟನೆಯ ಎಚ್ಚರಿಕೆ
Last Updated 25 ಡಿಸೆಂಬರ್ 2018, 16:11 IST
ಅಕ್ಷರ ಗಾತ್ರ

ರಾಮನಗರ: ‘ಜಿಲ್ಲೆಯಲ್ಲಿ ‘ಕಮಿಷನ್ ಭ್ರಷ್ಟಾಚಾರ’ ಮಿತಿ ಮೀರುತ್ತಿದ್ದು, ಆಳುವವರು ಇದನ್ನು ನಿಯಂತ್ರಣಕ್ಕೆ ತರದೇ ಹೋದರೆ ಧರಣಿ ಕುಳಿತು ಪ್ರತಿಭಟನೆ ಮಾಡುತ್ತೇನೆ’ ಎಂದು ವಿಧಾನ ಪರಿಷತ್‌ ಸದಸ್ಯ ಸಿ.ಎಂ. ಲಿಂಗಪ್ಪ ಎಚ್ಚರಿಸಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ‘ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಅಧಿಕಾರದಲ್ಲಿದೆ. ಆದರೆ ಆಡಳಿತ ನಡೆಸುತ್ತಿರುವವರು ಮಾತ್ರ ದಳದವರು. ದೊಡ್ಡಗೌಡರಿಂದ ಹಿಡಿದು ಚಿಕ್ಕಗೌಡರವರೆಗೆ, ದೊಡ್ಡಗೌಡತಿಯಿಂದ ಹಿಡಿದು ಚಿಕ್ಕಗೌಡತಿಯವರೆಗೆ ರಾಜ್ಯದಲ್ಲಿ ಸಂಪೂರ್ಣವಾಗಿ ಅವರದ್ದೇ ಆಡಳಿತ ನಡೆಯುತ್ತಿದೆ’ ಎಂದು ಪರೋಕ್ಷವಾಗಿ ಎಚ್‌.ಡಿ. ದೇವೇಗೌಡರ ಕುಟುಂಬದವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

‘ರಾಮನಗರ, ಚನ್ನಪಟ್ಟಣ ಅವಳಿ ಕ್ಷೇತ್ರಗಳು ಇಂದು ತಬ್ಬಲಿಯಾಗಿವೆ. ಇಲ್ಲಿ ಆಯಕಟ್ಟಿನ ಸರ್ಕಾರಿ ಹುದ್ದೆಗಳು ಬಿಕರಿಗೆ ಇವೆ. ಈಚೆಗೆ ತಾಲೂಕು ಪಂಚಾಯಿತಿಯಲ್ಲಿ ಶಾಸಕಿ ಅನಿತಾ ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಶೇ 37ರಷ್ಟು ಕಮಿಷನ್ ಪಡೆಯುವ ಬಗ್ಗೆ ತಾ.ಪಂ. ಅಧ್ಯಕ್ಷ ನಟರಾಜು ಕೆಆರ್‌ಡಿಸಿಎಲ್ ಅಧಿಕಾರಿಯನ್ನು ಪ್ರಶ್ನಿಸಿದ್ದರು. ಆದರೆ ಶಾಸಕಿಯವರು ಅಧಿಕಾರಿಯನ್ನು ಮನೆಗೆ ಬಂದು ಕಾಣಿ ಎಂದಿದ್ದರು. ಹೀಗಾದರೆ ಎಲ್ಲಿ ಗುಣಮಟ್ಟದ ಕಾಮಗಾರಿ ನಡೆಯಲು ಸಾಧ್ಯ’ ಎಂದು ಅವರು ಪ್ರಶ್ನಿಸಿದರು.

‘ರಾಮನಗರತಹಶೀಲ್ದಾರ್ ಹುದ್ದೆ ಕೆಲವು ತಿಂಗಳಿಂದ ಖಾಲಿ ಇದೆ. ಆ ಹುದ್ದೆ ಸೇರಿದಂತೆ ಆಯಕಟ್ಟಿನ ಹುದ್ದೆಗಳಿಗೆ ಬರುವವರು ಇಂತಿಷ್ಟು ಹಣ ನೀಡಿ ಬರಬೇಕಿದೆ. ಹೀಗೆ ಹಣ ನೀಡಿ ಬರುವವರು ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಲು ಸಾಧ್ಯವೇ’ ಎಂದು ಪ್ರಶ್ನಿಸಿದರು.

‘ಒಂದು ವಾರದೊಳಗೆ ತಹಶೀಲ್ದಾರ್ ಹುದ್ದೆಗೆ ಅಧಿಕಾರಿಯನ್ನು ನೇಮಿಸದಿದ್ದಲ್ಲಿ ಜನವರಿ 2ರಂದು ಧರಣಿ ಕೂರುತ್ತೇನೆ’ ಎಂದು ಎಚ್ಚರಿಸಿದರು.

ಕಾಂಗ್ರೆಸ್ ಮುಖಂಡ ಎಚ್.ಸಿ. ಬಾಲಕೃಷ್ಣ, ಕಾಂಗ್ರೆಸ್ ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷೆ ಬಿ.ಸಿ.ಪಾರ್ವತಮ್ಮ, ತಾ.ಪಂ. ಅಧ್ಯಕ್ಷ ಜಿ.ಎನ್. ನಟರಾಜು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT