ಶೌಚಾಲಯಗಳಿಗೆ ಬೀಗ; ರೋಗಿಗಳ ಪರದಾಟ..!

7
ರಾಷ್ಟ್ರೀಯ ಪ್ರಶಸ್ತಿ ಪಡೆದಿದ್ದ ವಿಜಯಪುರ ಜಿಲ್ಲಾ ಆಸ್ಪತ್ರೆ ಆವರಣದಲ್ಲೇ ಬಯಲು ಬಹಿರ್ದೆಸೆ

ಶೌಚಾಲಯಗಳಿಗೆ ಬೀಗ; ರೋಗಿಗಳ ಪರದಾಟ..!

Published:
Updated:
Deccan Herald

ವಿಜಯಪುರ: ವಿಜಯಪುರ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿನ ಹದಗೆಟ್ಟ ಶೌಚಾಲಯ, ಸ್ನಾನಗೃಹಗಳಿಗೆ ಹಲ ದಿನಗಳಿಂದ ಆಸ್ಪತ್ರೆಯ ಆಡಳಿತ ವರ್ಗ ಬೀಗ ಹಾಕಿದ್ದು; ರೋಗಿಗಳು, ರೋಗಿಗಳ ಸಹಾಯಕರು ನಿಸರ್ಗ ಕರೆ ಪೂರೈಸಿಕೊಳ್ಳಲು ಸಂಕಟ ಪಡುವಂತಾಗಿದೆ.

ಜಿಲ್ಲಾಸ್ಪತ್ರೆಯಲ್ಲಿ ಶೌಚಾಲಯದ ಸಮಸ್ಯೆ ಆರಂಭಗೊಂಡು ಹಲ ತಿಂಗಳು ಗತಿಸಿದರೂ; ಇನ್ನೂ ದುರಸ್ತಿ ಭಾಗ್ಯ ದೊರಕದಿರುವುದರಿಂದ ರೋಗಿಗಳ ಸಂಕಟ, ತಾಪತ್ರಯ ಹೇಳತೀರದು. ಬಹುತೇಕ ರೋಗಿಗಳು ತಮ್ಮ ನಿಸರ್ಗ ಬಾಧೆ ತೀರಿಸಿಕೊಳ್ಳಲು ಅನಿವಾರ್ಯವಾಗಿ ಬಯಲು ಬಹಿರ್ದೆಸೆಯ ಮೊರೆ ಹೊಕ್ಕಿದ್ದಾರೆ.

ಇನ್ನೂ ಕೆಲವರು ಶೌಚಾಲಯ ಸಮರ್ಪಕವಾಗಿರುವ ವಾರ್ಡ್‌ಗಳಿಗೆ ತೆರಳಿ ಪಾಳಿ ಹಚ್ಚಿ ತಮ್ಮ ಬಾಧೆ ತೀರಿಸಿಕೊಳ್ಳುವ ಚಿತ್ರಣ ಇದೀಗ ನಗರದ ಜಿಲ್ಲಾ ಆಸ್ಪತ್ರೆಯಲ್ಲಿ ಸಾಮಾನ್ಯ ದೃಶ್ಯಾವಳಿಯಾಗಿದೆ. ಮಹಿಳಾ ರೋಗಿಗಳು, ರೋಗಿಗಳ ಜತೆಯಲ್ಲಿರುವ ಮಹಿಳಾ ಸಹಾಯಕಿಯರ ಗೋಳು ಹೇಳತೀರದಾಗಿದೆ.

ಆರೋಗ್ಯ ಸಚಿವರ ತವರೂರಿನ ಪ್ರಶಸ್ತಿ ಪುರಸ್ಕೃತ ಆಸ್ಪತ್ರೆಯಿದು: ‘ವಿಜಯಪುರ ಜಿಲ್ಲಾ ಆಸ್ಪತ್ರೆಗೆ ಎರಡು ಬಾರಿ ರಾಷ್ಟ್ರ ಮಟ್ಟದ ಕಾಯಕಲ್ಪ ಪ್ರಶಸ್ತಿ ಲಭಿಸಿದೆ. ಹಿಂದಿನ ವರ್ಷವಷ್ಟೇ ರಾಷ್ಟ್ರೀಯ ಗುಣಮಟ್ಟದ ಭರವಸೆ ಪ್ರಶಸ್ತಿಗೂ ಆಸ್ಪತ್ರೆ ಭಾಜನವಾಗಿದೆ. ಇದರ ಜತೆಗೆ ಆರೋಗ್ಯ ಸಚಿವ ಶಿವಾನಂದ ಪಾಟೀಲರ ತವರೂರಿನ ಜಿಲ್ಲಾಸ್ಪತ್ರೆ ಎಂಬ ಹೆಮ್ಮೆ ಇದಕ್ಕಿದೆ. ಇವೆಲ್ಲದರ ನಡುವೆಯೂ ಆಸ್ಪತ್ರೆಯಲ್ಲಿನ ಶೌಚಾಲಯಗಳಿಗೆ ಬೀಗ ಹಾಕಿರುವುದು ಇದೀಗ ಸಮಸ್ಯೆಯ ಮೂಲವಾಗಿದೆ.

ಚಿಕಿತ್ಸೆಗಾಗಿ ನಿತ್ಯವೂ ಜಿಲ್ಲಾಸ್ಪತ್ರೆಗೆ ಭೇಟಿ ನೀಡುವ ರೋಗಿಗಳು, ಅವರ ಜತೆ ಬರುವ ಸಹಾಯಕರ ಸಂಖ್ಯೆ ಸಹಸ್ರ, ಸಹಸ್ರ ದಾಟಲಿದೆ. ಮೂತ್ರದ ಸಮಸ್ಯೆಯನ್ನು ಈ ಎಲ್ಲರೂ ಹೇಗೋ ಬಗೆಹರಿಸಿಕೊಳ್ಳಲಿದ್ದಾರೆ. ಆದರೆ ಮಲ ವಿಸರ್ಜನೆಯದ್ದೇ ಬಗೆಹರಿಯಲಾಗದ ಸಮಸ್ಯೆಯಾಗಿ ಕಾಡುತ್ತಿದೆ.

ಹೊರ ರೋಗಿಗಳಿಗೆ ಅಷ್ಟೇನೂ ಸಮಸ್ಯೆಯಿಲ್ಲ. ಆದರೆ ಒಳರೋಗಿಗಳ ಸಂಕಟ ಹೇಳತೀರದು. ನಸುಕಿನಲ್ಲೇ ಬಹುತೇಕ ರೋಗಿಗಳು, ಅವರ ಸಹಾಯಕರು ಆಸ್ಪತ್ರೆ ಆವರಣದಲ್ಲಿರುವ ನಂದಿನಿ ಹಾಗೂ ಹಾಪ್‌ಕಾಮ್ಸ್‌ ಮಳಿಗೆಗಳ ಹಿಂಭಾಗದ ಬಯಲು ಪ್ರದೇಶದಲ್ಲಿ ಮಲ ವಿಸರ್ಜನೆಗೆ ಹೋಗುವುದು ಅನಿವಾರ್ಯವಾಗಿದೆ. ಅಲ್ಲಿನ ವಾತಾವರಣ ತುಂಬಾ ಅಸಹ್ಯಕರವಾಗಿದೆ’ ಎಂದು ಲಕ್ಷ್ಮಣ ಮಲ್ಲಾಡ ಆಸ್ಪತ್ರೆಯಲ್ಲಿನ ಅವ್ಯವಸ್ಥೆಯ ಚಿತ್ರಣ ತೆರೆದಿಟ್ಟರು.

‘ಎಂಟತ್ತು ದಿನಗಳಿಂದ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವೆ. ನಾನು ಬಂದ ಮೊದಲ ದಿನದಿಂದಲೂ ಶೌಚಾಲಯದ ಸಮಸ್ಯೆ ಕಗ್ಗಂಟಾಗಿದೆ. ಬಾಧೆ ತೀರಿಸಿಕೊಳ್ಳಲು ಪರದಾಡಬೇಕಿದೆ. ಇಂಥ ಕಷ್ಟ ಯಾರಿಗೂ ಬರಬಾರದು. ಮೊದಲೇ ಅನಾರೋಗ್ಯಪೀಡಿತರಿದ್ದೇವೆ. ಇಲ್ಲಿನ ವಾತಾವರಣ ನಮ್ಮನ್ನು ಮತ್ತಷ್ಟು ಅನಾರೋಗ್ಯಕ್ಕೆ ದೂಡುತ್ತಿದೆ’ ಎಂದು ಮಲ್ಲಿಕಾರ್ಜುನ ಶಿವನಕುದರಿ ಅಸಮಾಧಾನ ವ್ಯಕ್ತಪಡಿಸಿದರು.

‘ಬೆಳಿಗ್ಗೆ–ಮಧ್ಯಾಹ್ನದ ವೇಳೆ ಸಂಡಾಸ್‌ ಬಂದ್ರೇ ಏನ್‌ ಮಾಡ್ಬೇಕು ಎಂಬುದೇ ತೋಚಲ್ಲ. ಮುಜುಗರ ಬಿಟ್ಟು ಯಾವ ವಾರ್ಡ್‌ನಲ್ಲಿ ಚಲೋ ಶೌಚಾಲಯವಿದೆ ಅಲ್ಲಿಗೆ ಹೋಗಿ ಬಾಧೆ ತೀರಿಸಿಕೊಳ್ತೀವಿ. ಇದು ನನ್ನೊಬ್ಬನ ಸಮಸ್ಯೆಯಲ್ಲ. ಇಲ್ಲಿರುವ ಎಲ್ಲರೂ ಇದೇ ಸಮಸ್ಯೆ ಎದುರಿಸುತ್ತಿದ್ದಾರೆ. ಶೀಘ್ರ ಇದಕ್ಕೆ ಇತಿಶ್ರೀ ಹಾಕಬೇಕು. ಅಲ್ಲಿವರೆಗೂ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕಿದೆ’ ಎಂದು ಮತ್ತೊಬ್ಬ ರೋಗಿ ಇಸ್ಮಾಯಿಲ್‌ ಮುಲ್ಲಾ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !