ಉಪ ಚುನಾವಣೆ: ಒಲ್ಲದ ಮನಸ್ಸಿನ ಪೈಪೋಟಿ!

7
ಲೋಕಸಭೆ: ಗೆದ್ದವರಿಗೆ ನಾಲ್ಕೇ ತಿಂಗಳು ಅವಕಾಶ, ಕಾಂಗ್ರೆಸ್–ಜೆಡಿಎಸ್ ಮೈತ್ರಿಯತ್ತ ಎಲ್ಲರ ಚಿತ್ತ

ಉಪ ಚುನಾವಣೆ: ಒಲ್ಲದ ಮನಸ್ಸಿನ ಪೈಪೋಟಿ!

Published:
Updated:
Deccan Herald

ಶಿವಮೊಗ್ಗ: ಸಂಸತ್ ಸದಸ್ಯರಾಗಿದ್ದ ಬಿ.ಎಸ್. ಯಡಿಯೂರಪ್ಪ ಅವರ ರಾಜೀನಾಮೆಯಿಂದ ತೆರವಾಗಿದ್ದ ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಸಲು ಚುನಾವಣಾ ಆಯೋಗ ದಿನ ನಿಗದಿಗೊಳಿಸಿದೆ. ನ. 3ರಂದು ನಡೆಯುವ ಈ ಚುನಾವಣೆಗೆ ಒಲ್ಲದ ಮನಸ್ಸಿನಿಂದಲೇ ರಾಜಕೀಯ ಪಕ್ಷಗಳು ಸನ್ನದ್ಧಗುತ್ತಿವೆ.

ಸಾರ್ವತ್ರಿಕ ಲೋಕಸಭಾ ಚುನಾವಣೆಗೆ ಕೇವಲ 6 ತಿಂಗಳು ಬಾಕಿ ಇದೆ. ಇಂತಹ ಸಮಯದಲ್ಲಿ ಉಪ ಚುನಾವಣೆ ಎಲ್ಲ ಪಕ್ಷಗಳಿಗೂ ಒಲ್ಲದ ಪಥ್ಯವಾಗಿದೆ. ನ. 3ರಂದು ಚುನಾವಣೆ ನಡೆದು, ನವೆಂಬರ್ 6ರಂದು ಫಲಿತಾಂಶ ಪ್ರಕಟವಾಗುವುದು. ಚುನಾವಣೆಯಲ್ಲಿ ಗೆದ್ದವರು ಸಂಸತ್‌ನಲ್ಲಿ ಪ್ರಮಾಣ ವಚನ ಸ್ವೀಕರಿಸುವಷ್ಟರಲ್ಲಿ ನವೆಂಬರ್ ಮುಗಿಯುತ್ತದೆ. ಉಳಿದ ನಾಲ್ಕು ತಿಂಗಳು ಅವರಿಗೆ ಲೋಕಸಭಾ ಸದಸ್ಯರಾಗುವ ಅವಕಾಶ. ಹಾಗಾಗಿ, ನಾಲ್ಕು ತಿಂಗಳ ಅವಧಿಗೆ ಲೋಕಸಭಾ ಸದಸ್ಯರಾಗಿರಲು ಬಹುತೇಕ ಅಭ್ಯರ್ಥಿಗಳು ಒಲವು ತೋರುತ್ತಿಲ್ಲ.

ರಾಘವೇಂದ್ರ ಬಿಜೆಪಿ ಅಭ್ಯರ್ಥಿ: ಬಿ.ವೈ. ರಾಘವೇಂದ್ರ ಅವರನ್ನು ಬಿಜೆಪಿ ಅಭ್ಯರ್ಥಿ ಎಂದು ಆ ಪಕ್ಷದ ರಾಜ್ಯ ಘಟಕದ ಅಧ್ಯಕ್ಷರು ಈಗಾಗಲೇ ಘೋಷಿಸಿದ್ದಾರೆ. ಎಂ.ಬಿ. ಭಾನುಪ್ರಕಾಶ್, ದತ್ತಾತ್ರಿ ಮತ್ತಿತರರು ಆಕಾಂಕ್ಷಿಗಳಿದ್ದರೂ ಅಂತಿಮ ಆಯ್ಕೆ ರಾಘವೇಂದ್ರ ಅವರೆ. ಈಗಾಗಲೇ ಒಂದು ಅವಧಿ (2009–2014) ಸಂಸತ್ ಸದಸ್ಯರಾಗಿದ್ದಾರೆ.

ಎರಡು ಚುನಾವಣೆಗಳನ್ನು ಎದುರಿಸಿದ ಅನುಭವ ಅವರಿಗಿದೆ. ಸತತ ಒಂಬತ್ತೂವರೆ ವರ್ಷ ಅವರ ಕುಟುಂಬವೇ ಕ್ಷೇತ್ರದ ಮೇಲೆ ಹಿಡಿತ ಹೊಂದಿದೆ. ಮುಂದಿನ ಸಾರ್ವತ್ರಿಕ ಚುನಾವಣೆಗೆ ಮತ್ತೆ ಅವರೇ ಅಭ್ಯರ್ಥಿಯಾಗುವ ಕಾರಣ ಈ ಚುನಾವಣೆ ಅವರಿಗೆ ಬೋನಸ್‌.

ಕಾಂಗ್ರೆಸ್–ಜೆಡಿಎಸ್ ಮೈತ್ರಿ ಮೇಲೆ ಅಭ್ಯರ್ಥಿ ನಿರ್ಧಾರ: ಉಪ ಚುನಾವಣೆಗೆ ಕಾಂಗ್ರೆಸ್–ಜೆಡಿಎಸ್ ಮೈತ್ರಿ ಮಾಡಿಕೊಂಡರೆ ಒಮ್ಮತದ ಅಭ್ಯರ್ಥಿ ಯಾರು ಎನ್ನುವ ಕುತೂಹಲ ಮನೆ ಮಾಡಿದೆ. 2014ರಲ್ಲಿ ನಡೆದಿದ್ದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್–ಜೆಡಿಎಸ್ ಪರಸ್ಪರ ವಿರುದ್ಧ ಸ್ಪರ್ಧಿಸಿದ್ದವು.

ಬಿಜೆಪಿ ಅಭ್ಯರ್ಥಿ ಯಡಿಯೂರಪ್ಪ ಭಾರಿ ಅಂತರದಲ್ಲಿ ವಿಜಯ ಸಾಧಿಸಿದ್ದರೆ, ಕಾಂಗ್ರೆಸ್ ಅಭ್ಯರ್ಥಿ ಮಂಜುನಾಥ ಭಂಡಾರಿ ಎರಡನೇ ಸ್ಥಾನಕ್ಕೆ, ಜೆಡಿಎಸ್‌ ಅಭ್ಯರ್ಥಿ ಗೀತಾ ಶಿವರಾಜ್‌ಕುಮಾರ್ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದರು.

ಈ ಬಾರಿಯ ಚುನಾವನೆಯಲ್ಲಿ ಎರಡೂ ಪಕ್ಷಗಳು ಮೈತ್ರಿ ಮಾಡಿಕೊಂಡರೆ ಬಿಜೆಪಿ ಅಭ್ಯರ್ಥಿಗೆ ಪ್ರಬಲ ಪೈಪೋಟಿ ನೀಡಬಹುದು. ಕಾಂಗ್ರೆಸ್‌ಗೆ ಬಿಟ್ಟುಕೊಟ್ಟರೆ ಕೆಪಿಸಿಸಿ ಉಪಾಧ್ಯಕ್ಷ ಮಂಜುನಾಥ್ ಭಂಡಾರಿ, ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಮಾಜಿ ಶಾಸಕ ಕಿಮ್ಮನೆ ರತ್ನಾಕರ ಅಭ್ಯರ್ಥಿಗಳಾಗುವ ಸಾಧ್ಯತೆ ಇದೆ. ಒಂದು ವೇಳೆ ಜೆಡಿಎಸ್‌ಗೆ ಬಿಟ್ಟುಕೊಟ್ಟರೆ ಗೀತಾ ಶಿವರಾಜ್‌ಕುಮಾರ್, ಇಲ್ಲವೇ ಮಧು ಬಂಗಾರಪ್ಪ ಅಭ್ಯರ್ಥಿಗಳಾಗುವ ಸಾದ್ಯತೆ ಹೆಚ್ಚಿದೆ.

ವಿಧಾನಸಭಾ ಚುನಾವಣೆಯ ಹುಮ್ಮಸ್ಸು: ಬಿಜೆಪಿಗೆ ಕಳೆದ ವಿಧಾನಸಭಾ ಚುನಾವಣೆಯ ಫಲಿತಾಂಶ ಹುಮ್ಮಸ್ಸು ತಂದಿದೆ. ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳಲ್ಲಿ 6ರಲ್ಲಿ ಬಿಜೆಪಿ ಶಾಸಕರು ಆಯ್ಕೆಯಾಗಿದ್ದಾರೆ. ಹಾಗಾಗಿ, ಬಿಜೆಪಿಗೆ ಅನುಕೂಲಕರ ವಾತಾವರಣವಿದೆ ಎಂದು ಆ ಪಕ್ಷದ ಮುಖಂಡರು ವಿಶ್ವಾಸ ವ್ಯಕ್ತಪಡಿಸುತ್ತಾರೆ.

ಕಾಂಗ್ರೆಸ್–ಜೆಡಿಎಸ್‌ಗೆ ಸರ್ಕಾರದ ಬಲ: ಜಿಲ್ಲೆಯಲ್ಲಿ ಕಾಂಗ್ರೆಸ್, ಜೆಡಿಎಸ್ ಸಾಧನೆ ಉತ್ತಮವಾಗಿಲ್ಲದಿದ್ದರೂ, ರಾಜ್ಯದಲ್ಲಿ ಆ ಎರಡೂ ಪಕ್ಷಗಳ ಸರ್ಕಾರ ಅಧಿಕಾರದಲ್ಲಿ ಇರುವುದು ವರದಾನವಾಗಿದೆ. ಸರ್ಕಾರದ ಮೈತ್ರಿ ಚುನಾವಣಾ ಕಣದಲ್ಲೂ ಕೆಲಸ ಮಾಡಿದರೆ ನಿರೀಕ್ಷಿತ ಫಲಿತಾಂಶ ಪಡೆಯುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ. ಉಪ ಚುನಾವನೆಯಲ್ಲಿ ಗೆಲುವು ಕಂಡರೆ ಮತ್ತೆ ನಾಲ್ಕೇ ತಿಂಗಳಿಗೆ ಬರುವ ಸಾರ್ವತ್ರಿಕ ಚುನಾವಣೆ ಎದುರಿಸಲು ಮತ್ತಷ್ಟು ಆತ್ಮಸ್ಥೈರ್ಯ ದೊರಕಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !