ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನರ ಮನದಲ್ಲಿ ಗೆದ್ದ ಜೆಡಿಎಸ್

ಮುಖಂಡ ಮೇಲೂರು ಬಿ.ಎನ್‌.ರವಿಕುಮಾರ್‌ ಹೇಳಿಕೆ
Last Updated 17 ಮೇ 2018, 8:40 IST
ಅಕ್ಷರ ಗಾತ್ರ

ಶಿಡ್ಲಘಟ್ಟ: ಚುನಾವಣೆಯಲ್ಲಿ ಸೋತಿರಬಹುದು. ಆದರೆ ಜೆಡಿಎಸ್‌ ಸೋತಿಲ್ಲ, ಜನರ ಮನಸ್ಸಿನಲ್ಲಿ ಗೆದ್ದಿದೆ. ಪಕ್ಷವನ್ನು ಸಂಘಟಿಸುವುದರಲ್ಲಿ ಮುಂದೆ ಎರಡು ಪಟ್ಟು ಶ್ರಮ ಹಾಕುತ್ತೇನೆ. ಕ್ಷೇತ್ರದಲ್ಲಿ ಎಲ್ಲಿ ಸಮಸ್ಯೆ ಕಂಡುಬಂದರೂ ಶ್ರಮಿಸುತ್ತೇನೆ. ಶಕ್ತಿ ಮೀರಿ ಜನರ ಕಷ್ಟಕ್ಕೆ ಸ್ಪಂದಿಸುತ್ತೇನೆ ಎಂದು ಜೆಡಿಎಸ್‌ ಮುಖಂಡ ಮೇಲೂರು ಬಿ.ಎನ್‌.ರವಿಕುಮಾರ್‌ ತಿಳಿಸಿದರು.

ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಶಾಸಕ ಹಾಗೂ ಮಾಜಿ ಸಚಿವರನ್ನು ಎದುರಿಸಿ ನಡೆಸಿದ ಚುನಾವಣೆಯಲ್ಲಿ ಒಬ್ಬ ಸಾಮಾನ್ಯ ಜೆಡಿಎಸ್‌ ಕಾರ್ಯಕರ್ತನಾದ ನನಗೆ ಮತದಾರ ತಂದೆ ತಾಯಿಯರು 66,531 ಮತಗಳನ್ನು ನೀಡಿ ಆಶೀರ್ವದಿಸಿದ್ದಾರೆ. ಜನರ ಋಣ ದೊಡ್ಡದು. ಅವರಿಗೆ ಮಾತಿನಲ್ಲಿ ಕೃತಜ್ಞತೆಯನ್ನು ಹೇಳಿದರೆ ಸಾಲದು. ನನ್ನ ಜೀವನ ಪೂರ್ತಿ ಜನರ ಸೇವೆ ಮಾಡುತ್ತೇನೆ’ ಎಂದು ಹೇಳಿದರು.

ಅಧಿಕಾರಕ್ಕಾಗಿ, ದುಡ್ಡು ಮಾಡಲಿಕ್ಕಾಗಿ ನಾನು ಚುನಾವಣೆಗೆ ನಿಲ್ಲಲಿಲ್ಲ. ಜನರಿಗೆ ಮೋಸ ತೊಂದರೆ ಆಗುವುದನ್ನು ತಪ್ಪಿಸಲು, ಕ್ಷೇತ್ರದ ಅಭಿವೃದ್ಧಿ, ನಿಷ್ಠಾವಂತ ಕಾರ್ಯಕರ್ತರ ಬೆನ್ನೆಲುಬಾಗಿ ನಿಲ್ಲಲು ಹಾಗೂ ಜೆಡಿಎಸ್‌ ಬಲಿಷ್ಠಗೊಳಿಸಲು ಚುನಾವಣೆಯಲ್ಲಿ ಸ್ಪರ್ಧಿಸಿದ್ದೆ. ರಾಜ್ಯದಲ್ಲಿ ಜೆಡಿಎಸ್‌ ಪಕ್ಷ ಅಧಿಕಾರಕ್ಕೆ ಬರಬೇಕು. ಕುಮಾರಣ್ಣನ ಕೈ ಬಲಪಡಿಸಬೇಕು ಹಾಗೂ ಕುಮಾರಣ್ಣ ಮುಖ್ಯಮಂತ್ರಿ ಆಗಬೇಕು ಎಂಬುದು ನಮ್ಮ ಆಶಯವಾಗಿತ್ತು ಎಂದರು.

ಜೆಡಿಎಸ್‌ನಿಂದ ಅಧಿಕಾರ ಅನುಭವಿಸಿದ್ದ ಎಂ.ರಾಜಣ್ಣ ಪಕ್ಷಕ್ಕೆ, ಕಾರ್ಯಕರ್ತರಿಗೆ ಮೋಸ ಮಾಡಿ, ಕಾಂಗ್ರೆಸ್‌ ಜತೆ ಹೊಂದಾಣಿಕೆ ಮಾಡಿಕೊಂಡಿದ್ದು ಸೋಲಲು ಕಾರಣವಾಯಿತು. ತಾಯಿಯಂತಹ ಪಕ್ಷಕ್ಕೆ ದ್ರೋಹ ಮಾಡಿ ಆತ್ಮಾಘಾತುಕ ಕೆಲಸ ಮಾಡಿದರು ಎಂದು ಆರೋಪಿಸಿದರು.

ಎಂ.ರಾಜಣ್ಣ ಕಳೆದ ಚುನಾವಣೆಯಲ್ಲಿ ತಮ್ಮ ಮಾವ ದಿವಂಗತ ಎಸ್.ಮುನಿಶಾಮಪ್ಪ ಅವರ ಭಾವಚಿತ್ರ ಹಿಡಿದು ಮತ ಯಾಚಿಸಿದರು. ಕಳೆದ ಹದಿನೈದು ವರ್ಷಗಳಿಂದ ಅನಾರೋಗ್ಯ ಪೀಡಿತರಾಗಿದ್ದ ಅವರ ತಂದೆ ತೀರಿಕೊಂಡರೆ, ಅದನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡಲು ಮುಂದಾದರು ಎಂದರು.

ಜಿಲ್ಲಾ ಪಂಚಾಯಿತಿ ಸದಸ್ಯ ಬಂಕ್ ಮುನಿಯಪ್ಪ ಮಾತನಾಡಿ ಬಿ.ಎನ್.ರವಿಕುಮಾರ್ ಶಾಸಕರಾಗುವುದನ್ನು ತಪ್ಪಿಸುವಲ್ಲಿ ಮಾಜಿ ಶಾಸಕ ಎಂ.ರಾಜಣ್ಣ ಗೆದ್ದಿರಬಹುದು. ಆದರೆ ಕ್ಷೇತ್ರದ ಮತದಾರರ ಪ್ರೀತಿ, ವಿಶ್ವಾಸ ಗಳಿಸಿದ್ದಾರೆ. ಹಾಲಿ ಶಾಸಕರೊಬ್ಬರು ಕೇವಲ 8 ಸಾವಿರ ಮತಗಳನ್ನು ಪಡೆಯುವ ಮೂಲಕ ನಾಲ್ಕನೇ ಸ್ಥಾನಕ್ಕಿಳಿದಿರುವುದು ನಿಮ್ಮ ವೈಯಕ್ತಿಕ ವರ್ಚಸ್ಸು ಏನು ಎಂಬುದನ್ನು ತಿಳಿಸುತ್ತದೆ ಎಂದು ಟೀಕಿಸಿದರು.

ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಡಿ.ಬಿ.ವೆಂಕಟೇಶ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಪಿ.ವಿ.ನಾಗರಾಜ್, ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಎಚ್.ನರಸಿಂಹಯ್ಯ, ಮುಖಂಡರಾದ ತಿಮ್ಮನಾಯಕನಹಳ್ಳಿ ರಮೇಶ್, ಮುಗಲಡಿಪಿ ನಂಜಪ್ಪ, ಗಂಜಿಗುಂಟೆ ಮೂರ್ತಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT