ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಗ್ಲಿಷ್‌ ಭಾಷೆ ಬೆಳೆಸುವ ವ್ಯಾಮೋಹ ಸಲ್ಲ: ನಾ.ಡಿಸೋಜ

ಶಿಕಾರಿಪುರ: ಮಯೂರ ಅಕ್ಷರ ವೀರ ಕನ್ನಡ ಪ್ರತಿಭಾನ್ವೇಷಣೆ ಪ್ರಶಸ್ತಿ ವಿತರಣಾ ಸಮಾರಂಭ
Last Updated 14 ಅಕ್ಟೋಬರ್ 2018, 10:55 IST
ಅಕ್ಷರ ಗಾತ್ರ

ಶಿಕಾರಿಪುರ: ಕನ್ನಡ ಭಾಷೆಯನ್ನು ಬದಿಗೊತ್ತಿ ಇಂಗ್ಲಿಷ್‌ ಭಾಷೆ ಬೆಳೆಸುವ ವ್ಯಾಮೋಹ ಸಲ್ಲದು ಎಂದು ಹಿರಿಯ ಸಾಹಿತಿ ನಾ.ಡಿಸೋಜ ಹೇಳಿದರು.

ಪಟ್ಟಣದ ಜೂನಿಯರ್ ಕಾಲೇಜು ಸಭಾಂಗಣದಲ್ಲಿ ಭಾನುವಾರ ಕನ್ನಡ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನ ಆಯೋಜಿಸಿದ್ದ ಮಯೂರ ಅಕ್ಷರ ವೀರ ಕನ್ನಡ ಪ್ರತಿಭಾನ್ವೇಷಣೆ ರಾಜ್ಯ ಮಟ್ಟದ ಅರ್ಹತಾ ಪರೀಕ್ಷೆ ಹಾಗೂ ಪ್ರಶಸ್ತಿ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮಕ್ಕಳು ಮನೆಯಲ್ಲಿ ಇಂಗ್ಲಿಷ್‌ ಭಾಷೆ ಪದಗಳನ್ನು ಮಾತನಾಡಿದ ಕೂಡಲೇ ಪೋಷಕರು ಹಿಗ್ಗುತ್ತಾರೆ. ಈ ಭ್ರಮೆ ಬಿಟ್ಟು ಕನ್ನಡ ಭಾಷೆಯನ್ನು ಬೆಳೆಸುವ ಕಾರ್ಯವನ್ನು ಪೋಷಕರು ಮಾಡಬೇಕು. ಇಂಗ್ಲಿಷ್‌ ನಿಘಂಟಿನಲ್ಲಿ ಹಲವು ಕನ್ನಡ ಪದಗಳನ್ನು ತೆಗೆದುಕೊಂಡಿರುವುದು ಕನ್ನಡ ಭಾಷೆಯ ಗೌರವವನ್ನು ಹೆಚ್ಚಿಸಿದೆ ಎಂದರು.

ಒಂದು ಭಾಷೆ ಉತ್ತಮ ಸ್ಥಾನಮಾನ ಪಡೆಯಲು ಜನ ಕಾರಣರಾಗುತ್ತಾರೆ. ಹೊರಗಿನವರು ಬಂದು ಕನ್ನಡ ಭಾಷೆ ಉಳಿಸಲು ಸಾಧ್ಯವಿಲ್ಲ, ನಮ್ಮ ಭಾಷೆಯ ಶ್ರೀಮಂತಿಕೆಯನ್ನು ಉಳಿಸಿ ಬೆಳೆಸುವ ಕರ್ತವ್ಯ ನಮ್ಮದಾಗಿದೆ ಎಂದು ಸಲಹೆ ನೀಡಿದರು.

ಕನ್ನಡ ಸಾಮ್ರಾಜ್ಯ ಸ್ಥಾಪಕ ಮಯೂರವರ್ಮ ಹೆಸರಿನಲ್ಲಿ ಪ್ರತಿಭಾನ್ವೇಷಣೆ ಪರೀಕ್ಷೆ ಹಾಗೂ ಪ್ರಶಸ್ತಿ ವಿತರಣಾ ಸಮಾರಂಭ ನಡೆಸುವುದು ಕನ್ನಡ ಸಾಮ್ರಾಜ್ಯ ಇತಿಹಾಸವನ್ನು ನೆನಪಿಸುವ ಕಾರ್ಯವಾಗಿದೆ ಎಂದು ಶ್ಲಾಘಿಸಿದ ಅವರು, ಕನ್ನಡ ಪರ ಕಾರ್ಯಕ್ರಮಗಳಿಗೆ ಜನರು ಸಹಕಾರ ನೀಡಬೇಕು. ವೇದಿಕೆ ಮೇಲೆ ಕನ್ನಡ ಪರ ಭಾಷಣ ಮಾಡುವುದನ್ನು ಬಿಟ್ಟು ಕನ್ನಡ ಭಾಷೆ ಬೆಳೆಸುವ ಪ್ರಾಮಾಣಿಕ ಕಾರ್ಯ ಆಗಬೇಕು ಎಂದು ಸಲಹೆ ನೀಡಿದರು.

ಶಿರಾಳಕೊಪ್ಪ ಜೆಸಿಐ ಮಯೂರ ಅಧ್ಯಕ್ಷ ಎಂ.ಆರ್‌. ಸತೀಶ್‌, ಮಯೂರ ಅಕ್ಷರವೀರ ಪ್ರತಿಭಾನ್ವೇಷಣೆ ಪರೀಕ್ಷೆ ಮೂಲಕ ತಾಲ್ಲೂಕಿನ ತಾಳಗುಂದ ಗ್ರಾಮದಲ್ಲಿ ಜನಿಸಿ ಕನ್ನಡ ಸಾಮ್ರಾಜ್ಯ ಸ್ಥಾಪಿಸಿದ ಮಯೂರವರ್ಮನ ಇತಿಹಾಸ ನೆನಪಿಸುವ ಕಾರ್ಯವನ್ನು ಕನ್ನಡ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನ ಮಾಡುತ್ತಿದೆ ಎಂದು ಶ್ಲಾಘಿಸಿದರು.

ಕನ್ನಡ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನ ಅಧ್ಯಕ್ಷ ಎಂ. ನವೀನ್‌ಕುಮಾರ್‌, ಕನ್ನಡ ಭಾಷೆಗೆ ಎಲ್ಲರನ್ನೂ ಒಟ್ಟುಗೂಡಿಸುವ ಶಕ್ತಿ ಇದೆ. ಕನ್ನಡ ಭಾಷೆ ಬಗ್ಗೆ ತಾತ್ಸರ ಮನೋಭಾವ ಹೊಂದದೇ ಭಾಷೆ ಉಳಿಸಿ ಬೆಳೆಸಬೇಕು. ರಾಜ್ಯದ ವಿವಿಧ ಜಿಲ್ಲೆಗಳಿಂದ ಮಕ್ಕಳು ಆಗಮಿಸಿ ಪರೀಕ್ಷೆಯಲ್ಲಿ ಪಾಲ್ಗೊಳ್ಳುತ್ತಿರುವುದು ಕನ್ನಡಕ್ಕೆ ಸಂದ ಗೌರವವಾಗಿದೆ ಎಂದರು.

ಪುರಸಭೆ ಮುಖ್ಯಾಧಿಕಾರಿ ಸುರೇಶ್‌, ಕನ್ನಡ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನ ಕಾರ್ಯದರ್ಶಿ ಕೆ.ಎಸ್‌. ಹುಚ್ಚರಾಯಪ್ಪ, ವೈಭವ್‌ ವಿದ್ಯಾಸಂಸ್ಥೆ ಕಾರ್ಯದರ್ಶಿ ವೈಭವ್‌ ಶಿವಣ್ಣ, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಚ್.ಆರ್. ರಾಘವೇಂದ್ರ, ಸಾಧನಾ ಅಕಾಡೆಮಿ ಸಂಸ್ಥಾಪಕ ಮಂಜುನಾಥ್‌, ಉದ್ಯಮಿ ನಾಗರಾಜ್‌ ಪಾರಸನ್‌, ಪ್ರತಿಭಾನ್ವೇಷಣೆ ಪರೀಕ್ಷೆ ವಿವಿಧ ಜಿಲ್ಲೆಯ ಸಂಯೋಜಕರು, ಕನ್ನಡ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನ ಪದಾಧಿಕಾರಿಗಳಾದ ಡಾಕೇಶ್‌ ತಾಳಗುಂದ, ತಾಳಗುಂದ ಮಹದೇವಪ್ಪ, ಸುಧಾಕರ್‌ ಹಿರೇಕಸವಿ, ಗಣೇಶ್ ಪ್ರಸಾದ್, ಪ್ರವೀಣ್‌ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT