ಹೂವಿನಹಳ್ಳಿ ಶಾಲೆಯಲ್ಲಿ ಹಚ್ಚ ಹಸಿರು..!

7
ಮುಖ್ಯ ಗುರುಗಳ ಹಸಿರು ಪ್ರೀತಿಗೆ ಎಸ್‌ಡಿಎಂಸಿ ಸಾತ್‌, ಸಸ್ಯವನ ನಿರ್ಮಾಣ

ಹೂವಿನಹಳ್ಳಿ ಶಾಲೆಯಲ್ಲಿ ಹಚ್ಚ ಹಸಿರು..!

Published:
Updated:
Deccan Herald

ಆಲಮೇಲ:  ಹೂವಿನಹಳ್ಳಿ ಪುಟ್ಟ ಗ್ರಾಮ. ಇಲ್ಲಿಂದ ಒಂದು ಕಿ.ಮೀ. ದೂರದಲ್ಲಿನ ಅಂಬೇಡ್ಕರ್ ನಗರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಅಂಗಳಕ್ಕೆ ಕಾಲಿಟ್ಟೊಡನೆ ನಿಸರ್ಗದ ಮಡಿಲಿಗೆ ಪ್ರವೇಶಿಸಿದ ಅನುಭವ. ಎರಡು ಗುಂಟೆ ಜಾಗದಲ್ಲಿ ನೂರಕ್ಕೂ ಹೆಚ್ಚು ಅಲಂಕಾರಿಕ, ಔಷಧೀಯ ಸಸ್ಯಗಳು ಕಣ್ಮನ ಸೆಳೆಯುತ್ತವೆ.

ಎಂಟು ವರ್ಷಗಳ ಹಿಂದೆ ಈ ಶಾಲೆಗೆ ವರ್ಗವಾಗಿ ಬಂದ ಮುಖ್ಯ ಶಿಕ್ಷಕ ಪಿ.ಬಿ.ಅವಜಿ, ಮಕ್ಕಳಿಗೆ ಪಾಠದ ಜತೆ ಸಾಹಿತ್ಯದ ರಸದೌತಣ ಬಡಿಸಿ, ಮಕ್ಕಳ ಪ್ರೀತಿಯ ಮೇಷ್ಟ್ರಾದವರು. ಅವಜಿಯ ಕ್ರಿಯಾಶೀಲತೆಗೆ ಮನಸೋತ ಪೋಷಕರು ಹಂತ ಹಂತವಾಗಿ ಶಾಲಾಭಿವೃದ್ಧಿಗೆ ಕೈಜೋಡಿಸಿದರು. ಶರಣು ಶಿಂಧೆ ಎಸ್.ಡಿ.ಎಂ.ಸಿ. ಅಧ್ಯಕ್ಷರಾದ ಮೇಲೆ ಕೊಡುಗೆಗಳ ಸಂಗ್ರಹವೂ ಹೆಚ್ಚಿತು. ಇದನ್ನು ಬಳಸಿದ ಶಿಕ್ಷಕರು ಶಾಲೆಗೆ ಹಸಿರು ತೋರಣ ಕಟ್ಟಲು ಮುಂದಾದರು.

ಮಕ್ಕಳಿಗೆ ನಿತ್ಯ ಪಾಠದ ಜತೆಗೆ ಹಸಿರು ಪಾಠವನ್ನು ಹೇಳಿಕೊಡಲಾರಂಭಿಸಿದರು. ಇದರ ಪರಿಣಾಮ ಶಾಲೆಯ ಆವರಣದಲ್ಲಿ ತರಹೇವಾರಿ ಸಸಿ, ಗಿಡ ಚಿಗುರತೊಡಗಿದವು. 14 ನಮೂನೆಯ ಹೂವಿನ ಗಿಡಗಳು, 50 ಬಗೆಯ ವನಸ್ಪತಿ ಔಷಧೀಯ ಸಸ್ಯಗಳು, ಹತ್ತಾರು ತೆಂಗಿನ ಗಿಡಗಳು ಶಾಲಾ ಆವರಣದಲ್ಲಿ ಸ್ಥಾನ ಪಡೆದವು. ಇವಕ್ಕೆ ನೀರುಣಿಸಲು ಕೊಳವೆಬಾವಿಯಿದೆ.

81 ಮಕ್ಕಳು ಇಲ್ಲಿ ಓದುತ್ತಿದ್ದಾರೆ. ಇವರೆಲ್ಲಾ ಪರಿಶಿಷ್ಟ ಜಾತಿಗೆ ಸೇರಿದವರು. ಈ ಪುಟ್ಟ ಶಾಲೆಗೆ ಒಬ್ಬರು ಮುಖ್ಯಗುರು. ಇನ್ನಿಬ್ಬರು ಸಹ ಶಿಕ್ಷಕರು. ಇವರ ಪರಿಶ್ರಮ ಹಾಗೂ ಸ್ಥಳೀಯರ ಸಹಾಯದಿಂದ ಈ ನಿಸರ್ಗದ ಶಾಲೆಯ ಮಕ್ಕಳ ಕಲಿಕೆಗೆ ಪ್ರೋತ್ಸಾಹ ಉತ್ತೇಜನಕಾರಿಯಾಗಿದೆ ಎಂದು ಶಾಲೆಗೆ ಭೇಟಿ ನೀಡಿದ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿರುವುದು ವಿಶೇಷ.

ಮೂರು ವರ್ಷಗಳಿಂದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಇಲ್ಲಿನ ಮಕ್ಕಳು ಜಿಲ್ಲಾ ಮಟ್ಟದಲ್ಲಿ ಮೇಲುಗೈ ಸಾಧಿಸಿದ್ದಾರೆ. ಅಭ್ಯಾಸದಲ್ಲೂ ಮುಂದಿದ್ದು, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸದಾ ಮುಂದಿದ್ದಾರೆ ಎಂಬ ಪ್ರಶಂಸೆಯೂ ಈ ಶಾಲೆಗಿದೆ. ಸಂದರ್ಶನ ಪುಸ್ತಕದಲ್ಲಿ ಅಧಿಕಾರಿಯೊಬ್ಬರು ಇದು ‘ಸ್ವರ್ಗದ ಶಾಲೆ’ ಎಂದು ಬಣ್ಣಿಸಿದ್ದಾರೆ.

ಸಾಂಸ್ಕೃತಿಕ ಕಲರವ:

ಈ ಶಾಲೆಯಲ್ಲಿ ಸಾಂಸ್ಕೃತಿಕ ಕಲರವ ನಿರಂತರ. ಚರ್ಚಾ ಸ್ಪರ್ಧೆ, ರಸಪ್ರಶ್ನೆ, ಆಟೋಟಗಳಿಂದ ಮಕ್ಕಳ ಮನಸ್ಸನ್ನು ಚಟುವಟಿಕೆಯಿಂದ ಜಾಗೃತಗೊಳಿಸಲು ಸಾಧ್ಯ ಎಂದು ನಂಬಿರುವ ಅವಜಿ, ಸದಾ ಒಂದಿಲ್ಲೊಂದು ಕಾರ್ಯಕ್ರಮ ಸಂಘಟಿಸುತ್ತಾರೆ. ಇದಕ್ಕೆಂದೇ ಬಯಲು ರಂಗವೇದಿಕೆ ನಿರ್ಮಿಸಿದ್ದಾರೆ.

ಪ್ರತಿ ಶನಿವಾರ ತೆರೆದ ಪುಸ್ತಕ ಕಾರ್ಯಕ್ರಮದಡಿ ಮಕ್ಕಳಿಗೆ ಸಾಹಿತ್ಯಿಕ ಕೃತಿಗಳನ್ನು ಪರಿಚಯಿಸಿ, ಓದುವಂತೆ ಪ್ರೇರೇಪಿಸುತ್ತಾರೆ. ನಂತರ ಸಿಹಿ ನೀಡಿ ಮಕ್ಕಳ ಖುಷಿ ಹೆಚ್ಚಿಸುತ್ತಾರೆ.

ಕೈತೋಟ:  ಶಾಲಾ ಆವರಣದಲ್ಲೇ ಕೈತೋಟವಿದೆ. ಬಿಸಿಯೂಟಕ್ಕೆ ಬೇಕಾಗುವ ತರಕಾರಿಗಳನ್ನು ಇಲ್ಲಿಯೇ ಬೆಳೆಯುತ್ತಾರೆ. ಕೊತ್ತಂಬರಿ ಸೊಪ್ಪು, ನುಗ್ಗೆ, ಕರಿಬೇವು ಇತ್ಯಾದಿ ಇಲ್ಲಿನ ಪ್ರಮುಖ ಬೆಳೆ.

ಶಿಕ್ಷಣ ಇಲಾಖೆ ಜಿಲ್ಲಾ ಮಟ್ಟದ ಹಸಿರು ಶಾಲೆ ಪರಿಸರ ಪ್ರಶಸ್ತಿಯನ್ನು ಈ ಶಾಲೆಗೆ ನೀಡಿದೆ. ಮುಖ್ಯ ಶಿಕ್ಷಕ ಪಂಡಿತ ಅವಜಿಯವರಿಗೆ ತಾಲ್ಲೂಕು, ಜಿಲ್ಲಾ ಆದರ್ಶ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಿದೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !