ಬುಧವಾರ, ನವೆಂಬರ್ 13, 2019
18 °C

25ರಿಂದ ತಾಲ್ಲೂಕಿನಾದ್ಯಂತ ಪ್ರವಾಸ: ಮಧು ಬಂಗಾರಪ್ಪ

Published:
Updated:
Prajavani

ಸೊರಬ: ತಾಲ್ಲೂಕಿನಲ್ಲಿ ಬಗರ್ ಹುಕುಂ ಸಾಗುವಳಿದಾರರ ಪರವಾಗಿ ಹಾಗೂ ಸಾರ್ವಜನಿಕರ ಕುಂದು ಕೊರತೆಗಳ ಬಗ್ಗೆ ಸರ್ಕಾರದ ಗಮನ ಸೆಳೆಯಲು ಅ.25ರಿಂದ ತಾಲ್ಲೂಕಿನಾದ್ಯಂತ ಪ್ರವಾಸ ಮಾಡಲಾಗುವುದು ಎಂದು ಮಾಜಿ ಶಾಸಕ ಮಧು ಬಂಗಾರಪ್ಪ ಹೇಳಿದರು.

ಶುಕ್ರವಾರ ತಾಲ್ಲೂಕಿನಲ್ಲಿ ಅನಾರೋಗ್ಯಕ್ಕೆ ಒಳಗಾದ ವಿವಿಧ ಗ್ರಾಮಗಳ ಮುಖಂಡರ ಮನೆಗಳಿಗೆ, ಇತ್ತೀಚೆಗೆ ಜೋಳದ ಗುಡ್ಡೆ, ಉದ್ರಿ ಗ್ರಾಮದಲ್ಲಿ ಯುವಕರು ಕೆರೆಯಲ್ಲಿ ಈಜಲು ಹೋಗಿ ಮುಳಗಿ ಮೃತಪಟ್ಟ ಕುಟುಂಬಗಳ ಮನೆಗೆ ಹಾಗೂ ಕಬ್ಬೂರು ಗ್ರಾಮದ ಹಿಂದುಳಿದ ಸಮುದಾಯಗಳ ಮುಖಂಡ ಪಕ್ಕೀರಪ್ಪ ಅವರ ಮನೆಗೆ ಶುಕ್ರವಾರ ಭೇಟಿ ನೀಡಿ ಸಾಂತ್ವನ ಹೇಳಿದರು.

ಒಂದು ವರ್ಷದಿಂದ ತಾಲ್ಲೂಕಿನಲ್ಲಿ ಅಭಿವೃದ್ಧಿ ಕೆಲಸಗಳು ಕುಂಠಿತಗೊಂಡಿದ್ದು, ತಾವು ಶಾಸಕರಾಗಿದ್ದ ಅವಧಿಯಲ್ಲಿ ಬಡವರ ಹಾಗೂ ರೈತರ ಹಿತಕಾಯಲು ಅನೇಕ ಯೋಜನೆಗಳ ಮೂಲಕ ಅಭಿವೃದ್ಧಿಗೆ ಒತ್ತು ನೀಡಲಾಗಿತ್ತು. ಬಗರ್ ಹುಕುಂ ಜಮೀನು ಮುಂಜುರಾತಿ, ಗಂಗಾ ಕಲ್ಯಾಣ, ಆಶ್ರಯ ಮನೆಗಳ ನಿರ್ಮಾಣ ಹಾಗೂ ನಿವೇಶನಗಳಿಗೆ ಹಕ್ಕು ಪತ್ರ ಸೇರಿದಂತೆ ಹಲವಾರು ಕಾಮಗಾರಿಗಳನ್ನು ಮಾಡಲಾಗಿತ್ತು. ಬಿಜೆಪಿ ಸರ್ಕಾರ ಬಂದ ಮೇಲೆ ರೈತರಿಗೆ ನೀಡಿದ ಜಮೀನು ಹಾಗೂ ನಿವೇಶನಗಳಿಗೆ ನೀಡಿದ ಹಕ್ಕು ಪತ್ರಗಳನ್ನು ವಜಾಗೊಳಿಸುವಂತೆ ಆದೇಶ ನೀಡಿರುವುದು ರೈತಾಪಿ ವರ್ಗಕ್ಕೆ ಮಾಡಿದ ದ್ರೋಹ ಎಂದು ಟೀಕಿಸಿದರು.

‘ಪಟ್ಟಣದ ಸರ್ವೆ ನಂ.113ರಲ್ಲಿ ಸಾವಿರಾರು ಕುಟುಂಬಗಳು ಮನೆ ಕಟ್ಟಿಕೊಂಡು ವಾಸವಾಗಿದ್ದು, ಮೂಲ ಸೌಕರ್ಯ ಕಲ್ಪಿಸಿ ನನ್ನ ಅವಧಿಯಲ್ಲಿ 94ಸಿ ಅಡಿಯಲ್ಲಿ ನಿವೇಶನ ಹಕ್ಕು ಪತ್ರ ನೀಡಲಾಗಿದೆ. ಸರ್ಕಾರದಿಂದ ಮುಂಜೂರಾದ ಹಕ್ಕ ಪತ್ರ ಪಡೆದ ಫಲಾನುಭವಿಗಳ ಹೆಸರಿಗೆ ಖಾತೆ ಮಾಡಿ ಕೊಡಬೇಕು. ಅಲ್ಲದೇ, ಈಗಾಗಲೇ ಬಗರ್ ಹುಕುಂ ಸಾಗುವಳಿದಾರರಿಗೆ ಮಂಜೂರಾದ ಭೂಮಿಯ ಹಕ್ಕು ಪತ್ರಗಳನ್ನು ಇಲ್ಲದ ನೆಪಗಳನ್ನು ಒಡ್ಡಿ ಸರ್ಕಾರ ವಜಾ ಗೊಳಿಸಲು ಮುಂದಾಗಬಾರದು. ಜನರ ಸಮಸ್ಯೆಗಳನ್ನು ಅರಿತು ಆಡಳಿತಕ್ಕೆ ಚುರುಕು ಮುಟ್ಟಿಸಲು ಸದಾ ಸಿದ್ಧನಿದ್ದೇನೆ’ ಎಂದು ತಿಳಿಸಿದರು.

ತಾಲ್ಲೂಕು ಜೆಡಿಎಸ್ ಅಧಕ್ಷ ಎಚ್ ಗಣಪತಿ ವಕ್ತಾರ ಎಂ.ಡಿ ಶೇಖರ್, ಎಪಿಎಂಸಿ ಅಧ್ಯಕ್ಷ ಕೆ. ಅಜ್ಜಪ್ಪ, ಸದಸ್ಯ ಜೆ. ಪ್ರಕಾಶ್, ತಾಲ್ಲೂಕು ಪಂಚಾಯಿತಿ ಸದಸ್ಯ ನಾಗರಾಜ, ಜಿ, ಕೆರಿಯಪ್ಪ, ಕಲ್ಲಪ್ಪ, ಕೃಷ್ಣಪ್ಪ, ಬಸವಾರಾಜ, ವೀರಭದ್ರಪ್ಪ ಇದ್ದರು.

ಪ್ರತಿಕ್ರಿಯಿಸಿ (+)