ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿಕೆಟ್‌ ಗಿಟ್ಟಿಸುವಲ್ಲಿ ರಾಮದಾಸ್‌ ಯಶಸ್ವಿ

ಬಿಜೆಪಿ ಟಿಕೆಟ್‌: ಇನ್ನೂ ನಿರ್ಧಾರವಾಗದ ‘ವರುಣಾ’
Last Updated 21 ಏಪ್ರಿಲ್ 2018, 10:41 IST
ಅಕ್ಷರ ಗಾತ್ರ

ಮೈಸೂರು: ವಿಧಾನಸಭಾ ಚುನಾವಣೆಗೆ ಮೈಸೂರು ಜಿಲ್ಲಾ ವ್ಯಾಪ್ತಿಯ 6 ಕ್ಷೇತ್ರಗಳ ಬಿಜೆಪಿ ಟಿಕೆಟ್‌ ಪ್ರಕಟವಾಗಿದ್ದು, ಎಸ್‌.ಎ.ರಾಮದಾಸ್‌ ಅವರು ಕೊನೆ ಗಳಿಗೆಯಲ್ಲಿ ಟಿಕೆಟ್‌ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಇದರ ನಡುವೆಯೇ ಕೃಷ್ಣರಾಜ ಕ್ಷೇತ್ರದಲ್ಲಿ ಅಸಮಾಧಾನದ ಹೊಗೆ ಎದ್ದಿದೆ. ಟಿಕೆಟ್‌ ಆಕಾಂಕ್ಷಿಯಾಗಿದ್ದ ಎಚ್.ವಿ.ರಾಜೀವ್‌ ಅವರು ಶನಿವಾರ ಕಾರ್ಯಕರ್ತರು ಹಾಗೂ ಬೆಂಬಲಿಗರ ಸಭೆ ಕರೆದಿದ್ದಾರೆ. ಸಭೆಯಲ್ಲಿ ಅಭಿಪ್ರಾಯ ಪಡೆದು ಮುಂದಿನ ನಿರ್ಧಾರ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ.

ರಾಮದಾಸ್‌ ಅವರ ಸ್ಪರ್ಧೆ ಬಗ್ಗೆ ಕ್ಷೇತ್ರದಲ್ಲಿ ಪಕ್ಷದ ಕೆಲ ಮುಖಂಡರಿಂದ ವಿರೋಧ ವ್ಯಕ್ತವಾಗಿತ್ತು. ಟಿಕೆಟ್‌ ನೀಡದಂತೆ ವಿಧಾನ ಪರಿಷತ್‌ ಮಾಜಿ ಸದಸ್ಯ ಗೋ.ಮಧುಸೂದನ್‌ ಅವರು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಪತ್ರ ಕೂಡ ಬರೆದಿದ್ದರು.

‘ಕ್ಷೇತ್ರದಲ್ಲಿ ಯಾವುದೇ ವಿರೋಧ ಇರಲಿಲ್ಲ. ಆದರೆ, ಕೆಲ ವ್ಯಕ್ತಿಗಳು ವಿರೋಧ ವ್ಯಕ್ತಪಡಿಸಿದ್ದರು. ಇವೆಲ್ಲ ಸಹಜ. ರಾಜೀವ್‌ ಅವರು ಒಳ್ಳೆಯ ವಿಚಾರಕ್ಕೆ ಸಭೆ ನಡೆಸುತ್ತಿರಬಹುದು’ ಎಂದು ರಾಮದಾಸ್‌ ಪ್ರತಿಕ್ರಿಯಿಸಿದರು.

ಪಾಲಿಕೆ ಕಚೇರಿಯಲ್ಲಿರುವ ಕೃಷ್ಣರಾಜ ಕ್ಷೇತ್ರ ಚುನಾವಣಾಧಿಕಾರಿ ಕಚೇರಿಯಲ್ಲಿ ಅವರು ಶನಿವಾರ ನಾಮಪತ್ರ ಸಲ್ಲಿಸಲಿದ್ದಾರೆ. ಚಾಮರಾಜ ಕ್ಷೇತ್ರದಲ್ಲೂ ಅಸಮಾಧಾನ ಹೊಗೆಯಾಡುತ್ತಿದೆ. ಈ ಕ್ಷೇತ್ರದಿಂದ ಮುಡಾ ಮಾಜಿ ಅಧ್ಯಕ್ಷ ಎಲ್‌.ನಾಗೇಂದ್ರ ಅವರಿಗೆ ಟಿಕೆಟ್‌ ಲಭಿಸಿದೆ. ಅವರು ಕಳೆದ ಬಾರಿ ಸ್ಪರ್ಧಿಸಿ ಮೂರನೇ ಸ್ಥಾನ ಪಡೆದಿದ್ದರು. ಈ ಕ್ಷೇತ್ರದಿಂದ ನಗರ ಘಟಕದ ಅಧ್ಯಕ್ಷ ಡಾ.ಬಿ.ಎಚ್‌.ಮಂಜುನಾಥ್‌, ಡಿ.ಮಾದೇಗೌಡ ಪ್ರಬಲ ಆಕಾಂಕ್ಷಿಗಳಾಗಿದ್ದರು.

ಆದರೆ, ವರುಣಾ ಕ್ಷೇತ್ರದ ನಡೆ ರಹಸ್ಯವಾಗಿದೆ. ಯಡಿಯೂರಪ್ಪ ಅವರ ಪುತ್ರ ಬಿ.ವೈ.ವಿಜಯೇಂದ್ರ ಅವರು ಈ ಕ್ಷೇತ್ರದಲ್ಲಿ ಮನೆ ಮಾಡಿ ಈಗಾಗಲೇ ಪ್ರಚಾರ ಆರಂಭಿಸಿದ್ದಾರೆ. ಹೀಗಿದ್ದೂ ಟಿಕೆಟ್‌ ಘೋಷಣೆ ವಿಳಂಬವಾಗಿದೆ. ಜಿಲ್ಲೆಯಲ್ಲಿ ಇದೊಂದು ಕ್ಷೇತ್ರ ಬಾಕಿ ಉಳಿದುಕೊಂಡಿದೆ.

ಈಚೆಗೆ ಬಿಜೆಪಿ ಸೇರಿದ್ದ ಎಸ್‌.ಶಂಕರ್‌ ಅವರಿಗೆ ನಿರೀಕ್ಷೆಯಂತೆ ತಿ.ನರಸೀಪುರ ಮೀಸಲು ಕ್ಷೇತ್ರದ ಟಿಕೆಟ್‌ ಒಲಿದಿದೆ. ಅವರು ಈ ಕ್ಷೇತ್ರದ ಅಭ್ಯರ್ಥಿ ಎಂದು ಯಡಿಯೂರಪ್ಪ ಈ ಮೊದಲೇ ಘೋಷಿಸಿದ್ದರು.

ಚಾಮುಂಡೇಶ್ವರಿಗೆ ಗೋಪಾಲ ರಾವ್‌

ಮೈಸೂರು: ಕುತೂಹಲದ ಕಣವಾಗಿರುವ ಚಾಮುಂಡೇಶ್ವರಿ ಕ್ಷೇತ್ರ ಸೇರಿದಂತೆ ಪ್ರಮುಖ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿರುವ ಬಿಜೆಪಿ ಕ್ರಮ ಅಚ್ಚರಿ ಮೂಡಿಸಿದೆ.

ಚಾಮುಂಡೇಶ್ವರಿಯಲ್ಲಿ ಗೋಪಾಲ ರಾವ್‌ ಅವರಿಗೆ ಪಕ್ಷದ ಟಿಕೆಟ್‌ ನೀಡಲಾಗಿದೆ. ಈ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಜೆಡಿಎಸ್‌ನ ಜಿ.ಟಿ.ದೇವೇಗೌಡ ಸ್ಪರ್ಧೆಗಿಳಿದಿದ್ದಾರೆ.

‘ಘಟಾನುಘಟಿಗಳು ಎಂಬುದನ್ನು ನಾನು ಒಪ್ಪುವುದಿಲ್ಲ. ಸ್ಪರ್ಧೆಗಿಳಿದ ಮೇಲೆ ಎಲ್ಲರೂ ಸಾಮಾನ್ಯರೇ. ಕ್ಷೇತ್ರದವನೇ ಆದ ನನಗೆ ಜನರ ನಾಡಿಮಿಡಿತ ಚೆನ್ನಾಗಿ ಪರಿಚಯವಿದೆ’ ಎಂದು ಗೋಪಾಲರಾವ್‌ ಅವರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.‌

ಬ್ರಾಹ್ಮಣ ಸಮುದಾಯಕ್ಕೆ ಸೇರಿರುವ ಅವರು ಬಿಜೆಪಿ ರಾಷ್ಟ್ರೀಯ ಪರಿಷತ್‌ ಸದಸ್ಯ ಕೂಡ. ಈ ಹಿಂದೆ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾಗಿ, ಪಕ್ಷದ ಜಿಲ್ಲಾ ವಕ್ತಾರರಾಗಿ ಕೆಲಸ ಮಾಡಿದ್ದಾರೆ.

ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ರಮೇಶಕುಮಾರ್‌ ಅವರಿಗೆ ಹುಣಸೂರು ಕ್ಷೇತ್ರದ ಟಿಕೆಟ್‌ ನೀಡಲಾಗಿದೆ. ಪಕ್ಷದ ಜಿಲ್ಲಾ ವಕ್ತಾರ ಗೋಪಾಲ್‌ ಅವರ ಪತ್ನಿ ಶ್ವೇತಾ ಕೆ.ಆರ್‌.ನಗರದಿಂದ ಸ್ಪರ್ಧಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT