ಮಂಗಳವಾರ, ಸೆಪ್ಟೆಂಬರ್ 22, 2020
26 °C
ಕೊಪ್ಪದಲ್ಲಿ ಕಾವೇರಿದ ಪ್ರತಿಭಟನೆ, ಮಾನವ ಸರಪಳಿ ರಚನೆ

ನಾಲೆಗಳಿಗೆ ನೀರು ಬಿಡಲು ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೊಪ್ಪ: ರೈತರ ಬೆಳೆಗಳಿಗೆ ಕೆಆರ್‌ಎಸ್ ಅಣೆಕಟ್ಟೆಯಿಂದ ನೀರು ಹರಿಸಬೇಕು ಎಂದು ಒತ್ತಾಯಿಸಿ ರಾಜ್ಯ ರೈತ ಸಂಘ, ಜಯ ಕರ್ನಾಟಕ ಸಂಘಟನೆಗಳ ಸದಸ್ಯರು ಹಾಗೂ ವಿದ್ಯಾರ್ಥಿಗಳು ಕೊಪ್ಪದಲ್ಲಿ ರಸ್ತೆ ತಡೆ ನಡೆಸಿ ಸೋಮವಾರ ಪ್ರತಿಭಟಿಸಿದರು. ಮಾನವ ಸರಪಳಿ ರಚಿಸಿ, ಬಳಿಕ ಪ್ರತಿಭಟನಾ ಮೆರವಣಿಗೆ ನಡೆಸಿದರು.

ರಾಜ್ಯ ಸರ್ಕಾರ, ಜಿಲ್ಲಾಡಳಿತ, ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಶಾಸಕರ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ರೈತ ಸಂಘದ ಗೌರವಾಧ್ಯಕ್ಷ ಕೀಳಘಟ್ಟ ನಂಜುಂಡಯ್ಯ ಮಾತನಾಡಿ, ‘ರೈತರು ಬೆಳೆದಿರುವ ಕೋಟ್ಯಂತರ ರೂಪಾಯಿ ಮೌಲ್ಯದ ಭತ್ತ, ಕಬ್ಬು, ರಾಗಿ, ರೇಷ್ಮೆ ಸೇರಿದಂತೆ ಇನ್ನಿತರ ಬೆಳೆಗಳು ಒಣಗುತ್ತಿವೆ. ರೈತರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ. ರೈತರು ಮಕ್ಕಳನ್ನು ಶಾಲಾ– ಕಾಲೇಜುಗಳಿಗೆ ಸೇರಿಸಲು ಸಾಧ್ಯವಾಗುತ್ತಿಲ್ಲ. ಜೀವನ ನಿರ್ವಹಣೆಗೂ ಕಷ್ಟವಾಗುತ್ತಿದೆ. ಕೂಡಲೇ ನೀರು ಹರಿಸಿ ರೈತರ ಹಿತ ಕಾಪಾಡಬೇಕು. ಇಲ್ಲದಿದ್ದರೆ, ಸರ್ಕಾರಿ ಕಚೇರಿಗಳಿಗೆ ಜಾನುವಾರುಗಳನ್ನು ಕಟ್ಟಿ, ಸರ್ಕಾರಿ ಕಚೇರಿಗಳಿಗೆ ಬೀಗ ಹಾಕಿ ಕಾನೂನು ಭಂಗ ಚಳವಳಿ ಮಾಡಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

ವಿ.ಸಿ. ನಾಲೆಗೆ ನೀರು ಹರಿಸದಿದ್ದರೆ ರೈತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚಲಿವೆ. ಸರ್ಕಾರ ರೈತರ ಜೀವನದಲ್ಲಿ ಚೆಲ್ಲಾಟವಾಡಬಾರದು. ತಕ್ಷಣ ನೀರು ಹರಿಸಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಮೂಡ್ಯ ಚನ್ನೇಗೌಡ, ರಮೇಶ್, ಶಿವಕುಮಾರ್, ಚಿಕ್ಕದೊಡ್ಡಿ ಜಗದೀಶ್, ಹುರುಗಲವಾಡಿ ಉಮೇಶ್, ಆಬಲವಾಡಿ ಪುಟ್ಟಸ್ವಾಮಿ, ಕುಮಾರ್, ಜಯ ಕರ್ನಾಟಕ ಸಂಘಟನೆಯ ಮುಖಂಡರಾದ ಮಹಮ್ಮದ್ ಇಲಿಯಾಜ್, ರವಿ, ಜಬಿವುಲ್ಲಾ, ನರಸೇಗೌಡ ಹಾಗೂ ಕುಮಾರ ಪಾಲ್ಗೊಂಡಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.