ಒತ್ತಡ ಮುಕ್ತ ಜೀವನದಿಂದ ಆತ್ಮಹತ್ಯೆ ತಡೆ: ಮನೋರೋಗ ತಜ್ಞ ಡಾ.ಕೆ.ಎಸ್‌.ಅಶೋಕ್‌

7
ಜಾಗೃತಿ ಜಾಥಾ

ಒತ್ತಡ ಮುಕ್ತ ಜೀವನದಿಂದ ಆತ್ಮಹತ್ಯೆ ತಡೆ: ಮನೋರೋಗ ತಜ್ಞ ಡಾ.ಕೆ.ಎಸ್‌.ಅಶೋಕ್‌

Published:
Updated:
Deccan Herald

ಮಂಡ್ಯ: ‘ದುರಾಸೆ ಇದ್ದರೆ ದೇಹ ಹಾಗೂ ಮನಸ್ಸಿಗೆ ಹೆಚ್ಚು ಒತ್ತಡವಾಗುತ್ತದೆ. ಯುವಜನರು ಒತ್ತಡ ಮುಕ್ತ ಜೀವನ ನಡೆಸಬೇಕು. ವಾಸ್ತವವನ್ನು ಅರಿಯುವ ಮನೋಭಾವ ಬೆಳೆಸಿಕೊಂಡರೆ ಆತ್ಮಹತ್ಯೆ ಪ್ರಕರಣಗಳು ನಡೆಯುವುದಿಲ್ಲ’ ಎಂದು ಮಿಮ್ಸ್‌ ಆಸ್ಪತ್ರೆ ಮನೋರೋಗ ವಿಭಾಗದ ಮುಖ್ಯಸ್ಥ ಡಾ.ಕೆ.ಎಸ್.ಅಶೋಕ್‌ಕುಮಾರ್ ಹೇಳಿದರು.

ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಜಿಲ್ಲಾ ತರಬೇತಿ ಕೇಂದ್ರದಲ್ಲಿ ಸೋಮವಾರ ನಡೆದ ‘ವಿಶ್ವ ಆತ್ಮಹತ್ಯೆ ತಡೆ ದಿನಾಚರಣೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಆತ್ಮಹತ್ಯೆ ಎನ್ನುವುದು ತಮ್ಮನ್ನು ತಾವು ಕೊಲೆ ಮಾಡಿಕೊಳ್ಳುವುದೇ ಆಗಿದೆ. ದುಡುಕು ನಿರ್ಧಾರದಿಂದಾಗಿ ಇಂತಹ ಘಟನೆಗಳು ಹೆಚ್ಚಾಗುತ್ತಿವೆ. ಯೋಜನೆ ರೂಪಿಸಿ ಆತ್ಮಹತ್ಯೆ ಮಾಡಿಕೊಳ್ಳುವವರೂ ಇದ್ದಾರೆ. ದುಡುಕಿನ ಆತ್ಮಹತ್ಯೆ ಮಾಡಿಕೊಳ್ಳುವವರಿಗೆ ಕೆಲವು ಸಮಸ್ಯೆಗಳಿರುತ್ತವೆ. ಅವುಗಳಿಗೆ ಪರಿಹಾರ ಸಿಕ್ಕರೆ ಆತ್ಮಹತ್ಯೆಯಿಂದ ಪಾರಾಗುತ್ತಾರೆ. ಆದರೆ ಯೋಜನೆ ರೂಪಿಸಿ ಆತ್ಮಹತ್ಯೆಗೆ ಪ್ರಯತ್ನ ಮಾಡುವವರನ್ನು ಮನೋವೈದ್ಯರಲ್ಲಿ ಚಿಕಿತ್ಸೆ ಕೊಡಿಸಬೇಕು. ಆತ್ಮಹತ್ಯೆಗೆ ಆರ್ಥಿಕ ತೊಂದರೆ, ಸಾಂಸಾರಿಕ ತೊಂದರೆ, ವ್ಯವಹಾರದಲ್ಲಿ ನಷ್ಟ, ಆತ್ಮೀಯರ ಅಗಲಿಕೆ, ಮಾದಕ ವ್ಯಸನ ಹೀಗೆ ಹಲವು ಅಂಶಗಳು ಕಾರಣವಾಗಿವೆ’ ಎಂದರು.

‘ವಿಶ್ವದಲ್ಲಿ ಪ್ರತಿವರ್ಷ 8 ಲಕ್ಷ ಜನ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಅದರಲ್ಲಿ 1.40 ಲಕ್ಷ ಜನ ನಮ್ಮ ದೇಶದವರೇ ಇದ್ದಾರೆ. ಇಡೀ ದೇಶದಲ್ಲಿ ಕರ್ನಾಟಕ ಮೂರನೇ ಸ್ಥಾನದಲ್ಲಿದೆ. ಮನೆಯಲ್ಲಿ ಉತ್ತಮ ವಾತಾವರಣ ಸೃಷ್ಟಿಸಿದರೆ ಆತ್ಮಹತ್ಯೆ ಪಿಡುಗನ್ನು ತೊಡೆದುಹಾಕಬಹುದು. ಹೀಗಾಗಿ ಮಕ್ಕಳಿಗೆ ಪೋಷಕರು ಹೆಚ್ಚು ಒತ್ತಡ ಹೇರದೆ ಅವರ ಆಸಕ್ತಿ ಅಭಿರುಚಿಗೆ ತಕ್ಕಂತೆ ಬೆಳೆಸಬೇಕು. ಜಿಲ್ಲೆಯಲ್ಲಿ ರೈತರು ಹೆಚ್ಚಾಗಿ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಜೀವನದ ಯಾವುದೇ ಸಮಸ್ಯೆಗೆ ಆತ್ಮಹತ್ಯೆಯೊಂದೇ ಪರಿಹಾರವಲ್ಲ ಎಂಬುದನ್ನು ಅರಿಯಬೇಕು’ ಎಂದರು.

‘ಆತ್ಮಹತ್ಯೆ ತಡೆಗಟ್ಟಲು ಒಬ್ಬರಿಂದ ಸಾಧ್ಯವಿಲ್ಲ. ಎಲ್ಲರೂ ಒಗ್ಗೂಡಿ ಆತ್ಮಹತ್ಯೆ ತಡೆಗಟ್ಟಲು ಶ್ರಮಿಸಬೇಕು. ನಮ್ಮ ಸುತ್ತಲಿನ ಜನರ ನಿತ್ಯ ಚಟುವಟಿಕೆಗಳು ಬದಲಾದಾಗ ಅವರನ್ನು ಆತ್ಮೀಯತೆಗೆ ತೆಗೆದುಕೊಂಡು ಆತ್ಮಸ್ಥೈರ್ಯ ತುಂಬಬೇಕು. ಸಮಸ್ಯೆಗಳಿದ್ದರೆ ಪರಿಹಾರಕ್ಕೆ ಬೆಂಬಲಿಸಬೇಕು. ವಾಸ್ತವದ ಅರಿವು ಹೊಂದುವಂತೆ ಮಾಡಬೇಕು. ಇದು ಆರೋಗ್ಯ ಇಲಾಖೆಯ ಪ್ರತಿಯೊಬ್ಬರ ಕರ್ತವ್ಯವಾಗಿದೆ’ಎಂದರು.

ಹಿರಿಯ ಸಿವಿಲ್ ನ್ಯಾಯಾಧೀಶ ಮನ್ಸೂರ್ ಅಹಮದ್ ಜಮಾನ್ ಮಾತನಾಡಿ ‘ವಿಶ್ವದಲ್ಲಿ 40 ಸೆಕೆಂಡ್‌ಗೆ ಒಬ್ಬರಂತೆ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಮಕ್ಕಳ ಪರೀಕ್ಷೆ ಫಲಿತಾಂಶ ಬಂದಾಗ ಕೆರೆ, ಬಾವಿ, ದೊಡ್ಡ ಟ್ಯಾಂಕ್‌ಗಳ ಹತ್ತಿರ ಪೊಲೀಸರು ಕಾವಲಿರಬೇಕು. ಸ್ಪರ್ಧಾತ್ಮಕ ಜಗತ್ತಿನಲ್ಲಿ ಮಕ್ಕಳಿಗೆ ಹೆಚ್ಚು ಒತ್ತಡ ಹಾಕದೆ ಜೀವನ ರೂಪಿಸಿಕೊಳ್ಳಲು ಪೋಷಕರು ಸಹಾಯ ಮಾಡಬೇಕು. ಮಾನಸಿಕವಾಗಿ ದೃಢತೆ ಕಂಡುಕೊಳ್ಳಲು ನೆರವಾಗಬೇಕು. ಮದ್ಯಪಾನ ಹಾಗೂ ಮಾದಕ ವ್ಯಸನಗಳಿಂದ ದೂರವಿರುವಂತೆ ನೋಡಿಕೊಳ್ಳಬೇಕು’ ಎಂದರು.

ಕಾರ್ಯಕ್ರಮಕ್ಕೂ ಮೊದಲು ಆರೋಗ್ಯ ಇಲಾಖೆ ಸಿಬ್ಬಂದಿ, ಆರೋಗ್ಯ ಸಹಾಯಕಿಯರು, ಆಶಾ ಕಾರ್ಯಕರ್ತರು ನಗರದ ಸಂಜಯ ವೃತ್ತದಿಂದ ಜಿಲ್ಲಾ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಕಚೇರಿವರೆಗೆ ಜಾಗೃತಿ ಜಾಥಾ ನಡೆಸಿದರು.

ಜಿಲ್ಲಾ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಅಧಿಕಾರಿ ಡಾ.ಎಂ.ನಾಗರಾಜು, ಮಾನಸಿಕ ಆರೋಗ್ಯ ಕಾರ್ಯಕ್ರಮ ಅಧಿಕಾರಿ ಡಾ.ಕೆ.ಪಿ.ಅಶ್ವಥ್, ಮಿಮ್ಸ್‌ ಸಮುದಾಯ ವೈದ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಬಿ.ಆರ್.ಹರೀಶ್, ಜಿಲ್ಲಾ ತರಬೇತಿ ಕೇಂದ್ರದ ಪ್ರಾಚಾರ್ಯ ಡಾ.ಜಿ.ಶಶಿಧರ್ ಬಸವರಾಜು, ವೈದ್ಯಾಧಿಕಾರಿಗಳಾದ ಡಾ.ಅನಿಲ್‌ಕುಮಾರ್, ಡಾ.ಭವಾನಿಶಂಖರ್, ಡಾ.ಶಶಿಧರ್, ಡಾ.ಬಾಲಕೃಷ್ಣ ಇದ್ದರು.

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !