ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾವುದೇ ಸರ್ಕಾರ ಬಂದರೂ ಮಂತ್ರಿಗಿರಿ?

ರಾಜಕೀಯ ಲೆಕ್ಕಾಚಾರ ಆರಂಭ; ಜಿಲ್ಲೆಯ ಸಿ.ಸಿ ಪಾಟೀಲ, ಲಮಾಣಿ ಹೆಸರು ಮುನ್ನೆಲೆಗೆ
Last Updated 17 ಮೇ 2018, 9:25 IST
ಅಕ್ಷರ ಗಾತ್ರ

ಗದಗ: ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ, ಜಿಲ್ಲೆಯಲ್ಲಿ ಯಾರಿಗೆ ಸಚಿವ ಸ್ಥಾನ ಸಿಗಬಹುದು ಎಂಬ ಲೆಕ್ಕಾಚಾರ ಪ್ರಾರಂಭವಾಗಿದೆ.

ಜಿಲ್ಲೆಯಲ್ಲಿ ಸಹ ಮಿಶ್ರ ಜನಾದೇಶ ಬಂದಿದೆ. 3 ಕ್ಷೇತ್ರದಲ್ಲಿ ಬಿಜೆಪಿ ಮತ್ತು 1 ಕಡೆ ಕಾಂಗ್ರೆಸ್‌ ಗೆಲುವು ಪಡೆದಿದೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆ ಮಾಡಲಿ ಅಥವಾ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚನೆಯಾಗಲಿ, ಜಿಲ್ಲೆಗೆ ಒಬ್ಬರು ಮಂತ್ರಿ ಸ್ಥಾನ ಪಡೆಯುವುದು ಬಹುತೇಕ ಖಚಿತ ಎಂಬ ಚರ್ಚೆಗಳು ನಡೆಯುತ್ತಿವೆ.

ಜಿಲ್ಲೆಯ ಶಿರಹಟ್ಟಿ, ನರಗುಂದ ಹಾಗೂ ರೋಣ ಕ್ಷೇತ್ರದಲ್ಲಿ ರಾಮಣ್ಣ ಲಮಾಣಿ, ಸಿ.ಸಿ. ಪಾಟೀಲ ಹಾಗೂ ಕಳಕಪ್ಪ ಬಂಡಿ ಗೆಲುವಿನ ನಗೆ ಬೀರಿದ್ದಾರೆ. ಬಿಜೆಪಿ ಸರ್ಕಾರ ರಚನೆಯಾದರೆ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಆಪ್ತರಾಗಿರುವ ಸಿ.ಸಿ. ಪಾಟೀಲ ಅವರಿಗೆ ಸಚಿವ ಸ್ಥಾನ ಸಿಗಲಿದೆ ಎಂಬ ಲೆಕ್ಕಾಚಾರ ಬಿಜೆಪಿ ವಲಯದಲ್ಲಿ ನಡೆಯುತ್ತಿದೆ.

ಜಿಲ್ಲೆಯಲ್ಲಿ ಕೇವಲ ಗದಗ ಕ್ಷೇತ್ರದಲ್ಲಿ ಮಾತ್ರ ಕಾಂಗ್ರೆಸ್ ಅಧಿಕಾರ ಉಳಿಸಿಕೊಂಡಿದೆ. ಹಿಂದಿನ ಅವಧಿಯಲ್ಲಿ ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದ ಎಚ್.ಕೆ. ಪಾಟೀಲ ಅವರು ಪ್ರಯಾಸ ಪಟ್ಟು ಸ್ಥಾನ ಉಳಿಸಿಕೊಂಡಿದ್ದಾರೆ.

ರಾಜ್ಯದಲ್ಲಿ ಒಂದು ವೇಳೆ ಕಾಂಗ್ರೆಸ್–ಜೆಡಿಎಸ್ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದರೆ ಎಚ್.ಕೆ. ಪಾಟೀಲ ಅವರು ಮತ್ತೆ ಸಚಿವರಾಗುತ್ತಾರೆ ಎಂದು ಕಾಂಗ್ರೆಸ್ ಕಾರ್ಯಕರ್ತರು ಬೀಗುತ್ತಿದ್ದಾರೆ.

ಜಿಲ್ಲೆಯ ನಾಲ್ಕು ವಿಧಾನಸಭಾ ಮತಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ನೈಜ ಜನಾದೇಶ ಪಡೆದಿದ್ದು ಶಿರಹಟ್ಟಿ (ಮೀಸಲು) ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಾಮಣ್ಣ ಲಮಾಣಿ ಮಾತ್ರ. ಕಳೆದ ಬಾರಿ ಕೂದಲೆಳೆ ಅಂತರದಿಂದ (315 ಮತ) ಸೋತಿದ್ದ ಅವರು, ಈ ಬಾರಿ 29,993 ಮತಗಳ ಅಂತರದಿಂದ ಗೆದ್ದಿದ್ದಾರೆ.

ಹೀಗಾಗಿ ರಾಜ್ಯದಲ್ಲಿ ಒಂದು ವೇಳೆ ಬಿಜೆಪಿ ಸರ್ಕಾರ ರಚನೆಯಾದರೆ ಲಮಾಣಿ ಅವರನ್ನು ಮಂತ್ರಿ ಮಾಡುವಂತೆ ಪಕ್ಷದ ಮೇಲೆ ಒತ್ತಡ ಹೇರಲು ಲಂಬಾಣಿ ಸಮುದಾಯದವರು ನಿರ್ಧರಿಸಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ.

ಯಾವುದೇ ಸರ್ಕಾರ ಬಂದರೂ, ಜಿಲ್ಲೆಯಲ್ಲಿ ಒಬ್ಬರಿಗೆ ಮಂತ್ರಿಗಿರಿ ಸಿಗುವುದು ನಿಶ್ಚಿತ ಎನ್ನಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT