ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹450 ಕೋಟಿ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ: ಸಚಿವ ಸಿ.ಎಸ್‌.ಪುಟ್ಟರಾಜು

70ನೇ ಗಣರಾಜ್ಯೋತ್ಸವ
Last Updated 26 ಜನವರಿ 2019, 15:11 IST
ಅಕ್ಷರ ಗಾತ್ರ

ಮಂಡ್ಯ: ‘ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಸಾವಿರಾರು ಕೋಟಿ ವೆಚ್ಚದ ಯೋಜನೆ ತಯಾರಿಸಲಾಗಿದೆ. ಸಾಲಮನ್ನಾ, ಕೃಷಿಭಾಗ್ಯ, ತುಂತುರು, ಸೂಕ್ಷ್ಮ ಹಾಗೂ ಹನಿ ನೀರಾವರಿ ಯೋಜನೆ ಮೂಲಕ ಕೃಷಿಗೆ ಉತ್ತೇಜನ ನೀಡಲಾಗಿದೆ. ₹ 450 ಕೋಟಿ ವೆಚ್ಚದಲ್ಲಿ 496 ಕಿ.ಮೀ ರಸ್ತೆ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ಅನುಮೋದನೆ ದೊರೆತಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್‌.ಪುಟ್ಟರಾಜು ಘೋಷಿಸಿದರು.

70ನೇ ಗಣರಾಜ್ಯೋತ್ಸವದ ಅಂಗವಾಗಿ ಶನಿವಾರ ಜಿಲ್ಲಾ ಕ್ರೀಡಾಂಗಣದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

‘ಜಿಲ್ಲೆಯ ಗ್ರಾಮೀಣ ಭಾಗಕ್ಕೆ ಬಸ್‌ ಸಂಚಾರ ಒದಗಿಸಲು 28 ಹೊಸ ಬಸ್‌ ಓಡಿಸಲಾಗುತ್ತಿದೆ. ಪಾಂಡವಪುರ, ಮಳವಳ್ಳಿ, ಹಲಗನಹಳ್ಳಿ ಬಸ್ ಡಿಪೊ ಆವರಣದಲ್ಲಿ ಕಾಂಕ್ರೀಟ್ ನೆಲಹಾಸು ನಿರ್ಮಾಣಕ್ಕೆ ₹ 3.83 ಕೋಟಿ ಒದಗಿಸಲಾಗಿದೆ. ಪ್ರತಿ ತಾಲ್ಲೂಕು ಬಸ್‌ ನಿಲ್ದಾಣದಲ್ಲಿ ₹ 13 ಲಕ್ಷ ವೆಚ್ಚದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಿಸಲಾಗಿದೆ. ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳಾದ ಗಗನಚುಕ್ಕಿ ಜಲಪಾತ, ಶ್ರೀರಂಗಪಟ್ಟಣ, ಮೇಲುಕೋಟೆ, ಕೊಕ್ಕರೆ ಬೆಳ್ಳೂರು ಸೇರಿ ಪ್ರಮುಖ ಪ್ರವಾಸಿ ತಾಣಗಳಿಗೆ ರಸ್ತೆ ಸಂಪರ್ಕ ಹಾಗೂ ಮೂಲ ಸೌಕರ್ಯ ಒದಗಿಸಲು ₹ 24 ಕೋಟಿ ಅನುದಾನ ಮಂಜೂರಾಗಿದ್ದು, ಕಾಮಗಾರಿ ಪ್ರಾರಂಭಿಸಲಾಗುವುದು’ ಎಂದರು.

ಜಿಲ್ಲಾ ಕ್ರೀಡಾಂಗಣದಲ್ಲಿ ಮಕ್ಕಳ ಕಲರವ ಮುಗಿಲು ಮುಟ್ಟಿತ್ತು. ನೃತ್ಯ ಚಿತ್ತಾರ, ದೇಶಭಕ್ತಿ ಗೀತೆಗಳ ಆಲಾಪ, ಯೋಗ ಸಾಧನೆ, ಸಾಧಕರ ಪಿರಮಿಡ್‌ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳು ಮಕ್ಕಳ ಮನಸ್ಸು ಅರಳಿಸಿದವು.

ಜಿಲ್ಲಾ ಉಸ್ತುವಾರಿ ಸಚಿವರು ಧ್ವಜವಂದನೆ ಸ್ವೀಕರಿಸುವಾಗ ಜಿಲ್ಲಾ ಸಶಸ್ತ್ರ ಮೀಸಲು ಪಡೆ, ಪೊಲೀಸ್‌ ಸಿಬ್ಬಂದಿ, ಅಬಕಾರಿ, ಗೃಹ ರಕ್ಷಕ ದಳ, ಎನ್‌ಸಿಸಿ, ಸ್ಕೌಟ್ಸ್ ಮತ್ತು ಗೈಡ್ಸ್ ಸೇರಿ ಎನ್‌ಸಿಸಿ, ಎಸ್‌ಎಸ್‌ಎಸ್‌ ಸ್ವಯಂ ಸೇವಕರು ಸೇರಿ ಶಾಲಾ ಕಾಲೇಜುಗ 40ಕ್ಕೂ ಹೆಚ್ಚು ತಂಡಗಳು ಶಿಸ್ತಿನ ಪಥಸಂಚಲನ ನಡೆಸಿದರು. ಕಾರ್ಮೆಲ್ ಕಾನ್ವೆಂಟ್‌ನ 800 ವಿದ್ಯಾರ್ಥಿಗಳು ರೈತರರಿಗೆ ಆತ್ಮಸ್ಥೈರ್ಯ ನೀಡುವ ರೈತಪರ ಗೀತೆಗಳಿಗೆ ನೃತ್ಯ ಪ್ರದರ್ಶನ ಮಾಡಿದರು. ನಗರದ ವಿವಿಧ 9 ಸರ್ಕಾರಿ ಶಾಲೆಯ 700 ಮಕ್ಕಳು ಲೇಜಿಮ್ ನೃತ್ಯ ಪ್ರದರ್ಶಿಸಿದರು. ಆಯ್ದ ಪ್ರೌಢಶಾಲೆಗಳ 550 ವಿದ್ಯಾರ್ಥಿಗಳಿಂದ ಡ್ರಿಲ್ ಹಾಗೂ ಆದರ್ಶ ವಿದ್ಯಾಶಾಲೆಯ 500 ವಿದ್ಯಾರ್ಥಿಗಳಿಂದ ದೇಶಭಕ್ತಿಗೀತೆಗೆ ನೃತ್ಯ ಪ್ರದರ್ಶನ ನಡೆಯಿತು.

ಕ್ರೀಡೆಯಲ್ಲಿ ಸಾಧನೆ ಮಾಡಿದ ಜಿಲ್ಲೆಯ ಆಟಗಾರರಾದ ಅನಿಲ್‌ಕುಮಾರ್, ರಾಜೇಂದ್ರ ಪ್ರಸಾದ್, ಹಂಸವೇಣಿ, ಆರ್.ಎನ್.ಹಂಸ, ಎಂ.ಮೇಘನಾ, ಸೃಷ್ಟಿ, ಕೆ.ಎನ್.ನಾಗೇಗೌಡ, ಬಿ.ಎ.ಪ್ರಶಾಂತ್, ಜಾನ್ವಿ, ರಾಜೇಗೌಡ ಅವರನ್ನು ಅಭಿನಂದಿಸಲಾಯಿತು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರಿಗೆ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಲಾಯಿತು.

ನವೆಂಬರ್‌ ತಿಂಗಳಲ್ಲಿ ಲೋಕಸಭೆ ಉಪ ಚುನಾವಣೆ ಇದ್ದ ಕಾರಣ ಗಣರಾಜ್ಯೋತ್ಸವದಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಲಾಯಿತು. ಎಂ.ಸಿ.ಲಂಕೇಶ್‌, ವಿಜಯಕುಮಾರಿ, ಶಿವಣ್ಣೇಗೌಡ, ನರಸಿಂಹಯ್ಯ, ದೇವರಾಜು, ಎಚ್.ಎಲ್.ರಮೇಶ್, ಚಂದ್ರಶೇಖರ್, ರವಿ ಸಾವಂದಿಪುರ, ಮಾನಸ, ಬೋರೇಗೌಡ, ಕೆ.ಶಿವು, ಸುರೇಶ್, ದಕ್ಷಿಣಮೂರ್ತಿ, ಬಿ.ಪಿ.ಪ್ರಕಾಶ್, ಎಂ.ಎಸ್.ಗಿರೀಶ್, ಎ.ಪಿ.ರಮೇಶ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ವಿವಿಧ ಇಲಾಖೆಯ ಅಧಿಕಾರಿಗಳಿಗೆ ಸರ್ವೋತ್ತಮ ಪ್ರಶಸ್ತಿ ಪ್ರದಾನ ಮಾಡಲಾಯಿತು. ಜಿಲ್ಲಾ ಆಯುಷ್ ವೈದ್ಯಾಧಿಕಾರಿ ಡಾ.ಪುಷ್ಪಾ, ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಎಂ.ಎನ್.ರಾಜಸುಲೋಚನಾ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಿ.ವಿ.ನಂದೀಶ್, ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ನಾರಾಯಣ್, ಜಿಲ್ಲಾಧಿಕಾರಿ ಕಚೇರಿ ವಾಹನ ಚಾಲಕ ಎಂ.ಮಹಾಂತಪ್ಪ, ಜಿಪಂ ಅಧೀಕ್ಷಕ ವೇದಕುಮಾರ್‌ ಅವರು ಪ್ರಶಸ್ತಿ ಪಡೆದರು.

ಶಾಸಕ ಎಂ.ಶ್ರೀನಿವಾಸ್, ಜಿಪಂ ಅಧ್ಯಕ್ಷೆ ನಾಗರತ್ನಾ ನಸ್ವಾಮಿ, ಉಪಾಧ್ಯಕ್ಷೆ ಪಿ.ಕೆ.ಗಾಯತ್ರಿ, ವಿಧಾನಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ, ಜಿಲ್ಲಾಧಿಕಾರಿ ಎನ್.ಮಂಜುಶ್ರೀ, ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜು, ಜಿಪಂ ಸಿಇಒ ಕೆ.ಯಾಲಕ್ಕಿಗೌಡ, ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಪಿ.ವಿಜಯ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿರಿ ಬಲರಾಮೇಗೌಡ ಇದ್ದರು.

ಕ್ರೀಡೆ: ಶಾಲೆಗಳಿಗೆ ₹ 1ಲಕ್ಷ
‘ನಮ್ಮೂರ ಶಾಲೆ ನಮ್ಮೂರ ಯುವಜನರು’ ಯೋಜನೆ ಅಡಿ ₹ 1 ಲಕ್ಷ ಪ್ರೋತ್ಸಾಹಧನಕ್ಕೆ ಆಯ್ಕೆಯಾದ ಉತ್ತಮ ಕ್ರೀಡಾಪಟುಗಳನ್ನು ಹೊಂದಿರುವ ಶಾಲೆಗಳನ್ನು ಘೋಷಿಸಲಾಯಿತು. ಬಸರಾಳು ಸರ್ಕಾರಿ ಪ್ರೌಢಶಾಲೆ, ಕೆಆರ್‌ಪೇಟೆ ತಾಲ್ಲೂಕು ಅಕ್ಕಿಹೆಬ್ಬಾಳು ಸರ್ಕಾರಿ ಪ್ರೌಢಶಾಲೆ, ಮಳವಳ್ಳಿ ತಾಲ್ಲೂಕು ಯತ್ತಂಬಾಡಿ ಸರ್ಕಾರಿ ಪ್ರೌಢಶಾಲೆ, ಶ್ರೀರಂಗಪಟ್ಟಣ ತಾಲ್ಲೂಕಿನ ಅರಕೆರೆ ಸರ್ಕಾರಿ ಪ್ರೌಢಶಾಲೆ, ಮದ್ದೂರು ತಾಲ್ಲೂಕಿನ ಅಣ್ಣೂರು ಸರ್ಕಾರಿ ಪ್ರೌಢಶಾಲೆ, ನಾಗಮಂಗಲ ತಾಲ್ಲೂಕು ಪಿ.ನೇರಳೆಕೆರೆ ಸರ್ಕಾರಿ ಪ್ರೌಢಶಾಲೆ ಹಾಗೂ ಪಾಂಡವಪುರ ತಾಲ್ಲೂಕಿನ ಚಿಟ್ಟನಹಳ್ಳಿ ಸರ್ಕಾರಿ ಪ್ರೌಢಶಾಲೆಗಳು ಪ್ರೋತ್ಸಾಹಧನ ಪಡೆಯಲು ಆಯ್ಕೆಯಾದವು.

ಬಹುಮಾನ ವಿತರಣೆ

ಪಥಸಂಚಲನದಲ್ಲಿ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಪ್ರಥಮ, ಅಬಕಾರಿ ದಳ ದ್ವಿತೀಯ, ಗೃಹ ರಕ್ಷಕ ದಳ ತೃತೀಯ ಸ್ಥಾನ ಪಡೆದವು. ಎನ್‌ಸಿಸಿ ವಿಭಾಗದಲ್ಲಿ ಪಿಇಎಸ್ ಕಾಲೇಜು ಬಾಲಕಿಯರ ತಂಡ ಪ್ರಥಮ, ಪಿಇಎಸ್ ಕಾಲೇಜು ಬಾಲಕರ ತಂಡ ದ್ವಿತೀಯ ಹಾಗೂ ಸರ್ಕಾರಿ ಬಾಲಕರ ಕಾಲೇಜು ತೃತೀಯ ಸ್ಥಾನ ಪಡೆದವು. ಸ್ಕೌಟ್ಸ್ ಮತ್ತು ಗೈಡ್ಸ್ ತಂಡದಲ್ಲಿ ರೋಟರಿ ಶಾಲೆ ಬಹುಮಾನ ಗಳಿಸಿತು. ಪ್ರೌಢಶಾಲಾ ವಿಭಾಗದಲ್ಲಿ ಕಾರ್ಮೆಲ್ ಕಾನ್ವೆಂಟ್ ಪ್ರಥಮ, ಸೇಂಟ್‌ ಜೋಸೆಫ್‌ ಶಾಲೆ ಮತ್ತು ಎಂಇಎಸ್ ಪ್ರೌಢಶಾಲೆ ದ್ವಿತೀಯ, ಸೇಂಟ್‌ ಜಾನ್ ಪ್ರೌಢಶಾಲೆ ತೃತೀಯ ಹಾಗೂ ಅಭಿನವ ಭಾರತಿ ಪ್ರೌಢಶಾಲೆ ಸಮಾಧಾನಕರ ಬಹುಮಾನ ಪಡೆದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT