ಭಾನುವಾರ, ಆಗಸ್ಟ್ 1, 2021
21 °C
ದಿನದಿಂದ ದಿನಕ್ಕೆ ಇಳಿಯುತ್ತಿರುವ ಕೋವಿಡ್ ಪ್ರಕರಣಗಳು; ಸಾಮಾನ್ಯ ರೋಗಿಗಳ ಚಿಕಿತ್ಸಾ ಬಳಕೆಗೆ ಚಿಂತನೆ

ಮಂಡ್ಯ: ಆಸ್ಪತ್ರೆಗಳಲ್ಲಿ ಶೇ 75ರಷ್ಟು ಹಾಸಿಗೆಗಳು ಖಾಲಿ

ಶರತ್.ಎಂ.ಆರ್. Updated:

ಅಕ್ಷರ ಗಾತ್ರ : | |

Prajavani

ಮಂಡ್ಯ: ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆಯಲ್ಲಿ ಗಣನೀಯವಾಗಿ ಇಳಿಕೆ ಕಂಡಿದ್ದು, ಹಾಸಿಗೆ ಬೇಡಿಕೆಯೂ ಕಡಿಮೆ ಆಗಿದೆ. ಕೊರೊನಾ ಚಿಕಿತ್ಸೆಗೆ ನಿಗದಿಪಡಿಸಿದ್ದ ಶೇ 75ಕ್ಕೂ ಅಧಿಕ ಹಾಸಿಗೆಗಳು ಖಾಲಿ ಇವೆ. ಕೋವಿಡ್‌ ಚಿಕಿತ್ಸೆಗೆ ನಿಗದಿಪಡಿಸಿರುವ 1,142 ಹಾಸಿಗೆಗಳಲ್ಲಿ 366 ಮಂದಿ ಮಾತ್ರ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮೇ ತಿಂಗಳಿನಲ್ಲಿ ದಿನವೊಂದಕ್ಕೆ ಒಂದೂವರೆ ಸಾವಿರಕ್ಕೂ ಅಧಿಕ ಪ್ರಕರಣಗಳು ದಾಖಲಾಗುತ್ತಿದ್ದವು. ರೋಗಿಗಳು ಹಾಸಿಗೆ ಇಲ್ಲದೆ ಆಸ್ಪತ್ರೆಯ ಹೊರಗೆ ಆಂಬ್ಯುಲೆನ್ಸ್‌ನಲ್ಲಿ, ಮಿಮ್ಸ್‌ ಆಸ್ಪತ್ರೆ ಕೋವಿಡ್‌ ವಾರ್ಡ್‌ ಕಾರಿಡಾರ್‌ನಲ್ಲಿ ಕಾಯುತ್ತಾ ಕುಳಿತು ಕೊಳ್ಳುತ್ತಿದ್ದರು. ಆಟೊ, ಆಂಬುಲೆನ್ಸ್‌ ಗಳಲ್ಲೇ ಆಮ್ಲಜನಕ ಸಿಲಿಂಡರ್‌ ಹಾಕಿ ಕೂರಿಸಿದ್ದ ದೃಶ್ಯಗಳು ಹಾಸಿಗೆ ಸಮಸ್ಯೆಯನ್ನು ಸಾರಿ ಹೇಳುತ್ತಿದ್ದವು. 

ಕೋವಿಡ್ ಗುಣಲಕ್ಷಣ ಇರುವವರಿಗೂ ಕೋವಿಡ್ ಆರೈಕೆ ಕೇಂದ್ರದಲ್ಲಿ ಹಾಸಿಗೆ ಸಿಗದೆ ಮನೆ ಆರೈಕೆಯಲ್ಲಿ ಇರಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಎಲ್ಲಿ ಹಾಸಿಗೆ ಖಾಲಿ ಇದೆ, ಎಲ್ಲಿ ದಾಖಲಾಗಬೇಕು ಎಂಬ ಮಾಹಿತಿ ಇಲ್ಲದೆ ಪರದಾಡುತ್ತಿದ್ದರು. ಹಾಸಿಗೆ ನಿರ್ವಹಣೆ ಬಗ್ಗೆ ಸಾಕಷ್ಟು ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಅವರನ್ನು ಹಾಸಿಗೆ ನಿರ್ವಹಣೆ ಮೇಲುಸ್ತುವಾರಿಯನ್ನಾಗಿ ನೇಮಕ ಮಾಡಲಾಗಿತ್ತು.

ನಂತರ ಎನ್ಐಸಿ ಸಹಯೋಗ ದೊಂದಿಗೆ ಸೆಂಟ್ರಲೈಜ್ ತಂತ್ರಾಂಶ ರೂಪಿಸಿ, ನೋಡಲ್ ಅಧಿಕಾರಿ, ಕಂಪ್ಯೂಟರ್ ಆಪರೇಟರ್‌ಗಳನ್ನು ನೇಮಿಸಿ, ಸಮರ್ಪಕವಾಗಿ ಹಾಸಿಗೆ ನಿರ್ವಹಣೆ ಮಾಡಲಾಯಿತು. ನಂತರ ಸಿಎಚ್‌ಬಿಎಂಎಸ್‌ ತಂತ್ರಾಂಶವನ್ನು ಅಳವಡಿಸಿಕೊಳ್ಳಲಾಗಿದೆ. ಆದರೂ ಆಮ್ಲಜನಕ ಹಾಸಿಗೆಗಳ ಬೇಡಿಕೆ ಹೆಚ್ಚಿದ್ದ ಸಂದರ್ಭದಲ್ಲಿ ಮಿಮ್ಸ್‌ನಲ್ಲಿ 150 ಹೆಚ್ಚುವರಿ ಆಮ್ಲಜನಕ ಹಾಸಿಗೆಗಳನ್ನು ಹಾಕಲಾಗಿತ್ತು. ಆದರೆ ಆಮ್ಲಜನಕ ಕೊರತೆಯಿಂದ ಅದು ತೆರೆಯಲೇ ಇಲ್ಲದಿರುವುದು ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಿತ್ತು.

ಜಿಲ್ಲೆಯಲ್ಲಿ 7 ಸರ್ಕಾರಿ ಆಸ್ಪತ್ರೆ, 4 ಖಾಸಗಿ ಆಸ್ಪತ್ರೆಗಳು ಸೇರಿದಂತೆ 11 ಆಸ್ಪತ್ರೆಗಳಲ್ಲಿ ಕೋವಿಡ್ ಸೋಂಕಿತರ ಚಿಕಿತ್ಸೆಗಾಗಿ 1142 ಹಾಸಿಗೆಗಳನ್ನು ನಿಗದಿಪಡಿಸಲಾಗಿತ್ತು. 478 ಸಾಮಾನ್ಯ ಹಾಸಿಗೆ, 28 ಐಸಿಯು, 83 ಐಸಿಯುವಿ, 553 ಎಚ್‌ಡಿಯು ಸೇರಿದಂತೆ 1,142 ಹಾಸಿಗೆಗಳಲ್ಲಿ 366 ಮಂದಿ ಚಿಕಿತ್ಸೆ ಪಡೆಯುತ್ತಿದ್ದು, 776 ಹಾಸಿಗೆಗಳು ಖಾಲಿ ಇವೆ.

ನಗರದ ಮಿಮ್ಸ್, ಆರು ತಾಲ್ಲೂಕು ಆಸ್ಪತ್ರೆ, ನಾಗಮಂಗಲ ತಾಲ್ಲೂಕಿನಲ್ಲಿನ ಏಮ್ಸ್, ಮಂಡ್ಯದ ಸ್ಯಾಂಜೋ, ಮಂಡ್ಯ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ, ಮದ್ದೂರು ತಾಲ್ಲೂಕಿನ ಜಿ. ಮಾದೇಗೌಡ ಆಸ್ಪತ್ರೆಗಳಲ್ಲಿನ 478 ಸಾಮಾನ್ಯ ಹಾಸಿಗೆಗಳಲ್ಲಿ 66, 28 ಐಸಿಯುನಲ್ಲಿ 22, 83 ಐಸಿಯುವಿನಲ್ಲಿ 70, 553 ಎಚ್‌ಡಿಯುನಲ್ಲಿ 208 ಮಂದಿ ಸೇರಿದಂತೆ 366 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದಂತೆ 412 ಸಾಮಾನ್ಯ ಹಾಸಿಗೆ, 6 ಐಸಿಯು, 13 ಐಸಿಯುವಿ, 345 ಎಚ್‌ಡಿಯು ಬೆಡ್‌ಗಳು ಸೇರಿದಂತೆ 776 ಬೆಡ್‌ಗಳು ಖಾಲಿ ಇವೆ.

ಇಡೀ ಜಿಲ್ಲೆಯಲ್ಲಿ ದಿನವೊಂದಕ್ಕೆ 1,300-1,500ರಷ್ಟು ಪ್ರಕರಣಗಳು ವರದಿಯಾಗುತ್ತಿದ್ದವು. ಅಂದು ಶೇ 33ರಷ್ಟು ಪಾಸಿಟಿವಿಟಿ ಇತ್ತು. ಜೂನ್ ಎರಡನೇ ವಾರದಿಂದ ಈಚೆಗೆ 500ರ ಆಸುಪಾಸಿನಲ್ಲಿ ಇದ್ದು, ಶನಿವಾರ 206 ಪ್ರಕರಣಗಳು ವರದಿಯಾಗಿದ್ದು, ಪಾಸಿಟಿವಿಟಿ ದರ ಶೇ 5ಕ್ಕಿಂತ ಕಡಿಮೆಯಾಗಿದೆ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಸಂಜಯ್ ತಿಳಿಸಿದರು.

ಸರ್ಕಾರಿ ಆಸ್ಪತ್ರೆಯಲ್ಲದೆ ಜಿಲ್ಲೆಯಲ್ಲಿನ 29 ಕೋವಿಡ್ ಕೇರ್ ಸೆಂಟರ್‌ಗಳಲ್ಲಿ ಚಿಕಿತ್ಸೆಗಾಗಿ 4,392 ಹಾಸಿಗೆಗಳನ್ನು ನಿಗದಿ ಪಡಿಸಲಾಗಿತ್ತು. ಪ್ರಸ್ತುತ 11 ಕೋವಿಡ್ ಕೇರ್ ಸೆಂಟರ್ ಚಾಲನೆಯಲ್ಲಿದ್ದು, ಒಟ್ಟು 1,200 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹೇಳಿದರು.

***

ಮೇ 2ನೇ ವಾರದಲ್ಲಿ ಹಾಸಿಗೆ ನಿರ್ವಹಣೆಗೆ ತಂತ್ರಾಂಶ ಅಳವಡಿಸಲಾಯಿತು. ಇದರಿಂದ ರೋಗಿಗಳ ದಾಖಲು, ಡಿಸ್ಚಾರ್ಜ್‌ಗೆ ಸಹಕಾರಿಯಾಯಿತು.

- ದಿವ್ಯಾ ಪ್ರಭು, ಜಿಲ್ಲಾ ನೋಡಲ್ ಅಧಿಕಾರಿ, ಹಾಸಿಗೆ ನಿರ್ವಹಣೆ

***

ತಾಲ್ಲೂಕು ಆಸ್ಪತ್ರೆಗಳಲ್ಲಿ ಶೇ 50 ರಷ್ಟು ಹಾಸಿಗೆಗಳನ್ನು ಕೋವಿಡ್‌ ರೋಗಿಗಳಿಗೆ ಬಳಸಲಾಗುತ್ತಿತ್ತು. ಈಗ ಈ ಹಾಸಿಗೆಗಳನ್ನು ಸಾಮಾನ್ಯ ರೋಗಿಗಳ ಚಿಕಿತ್ಸೆಗೆ ಬಳಸಲಾಗುವುದು ‌

- ಡಾ.ಟಿ.ಎನ್‌. ಧನಂಜಯ, ಜಿಲ್ಲಾ ಆರೋಗ್ಯಾಧಿಕಾರಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು