ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡ್ಯ ಚುನಾವಣಾ ಕರ್ತವ್ಯಕ್ಕೆ 8,648 ಸಿಬ್ಬಂದಿ ನೇಮಕ: ಜಿಲ್ಲಾ ಚುನಾವಣಾಧಿಕಾರಿ

ಏ.18ರಂದು ಅಧಿಕಾರಿಗಳಿಗೆ ತರಬೇತಿ, 22 ಮತಗಟ್ಟೆಗಳ ವಿಳಾಸ ಬದಲಾವಣೆಗೆ ಅನುಮೋದನೆ
Last Updated 10 ಏಪ್ರಿಲ್ 2023, 13:49 IST
ಅಕ್ಷರ ಗಾತ್ರ

ಮಂಡ್ಯ: ‘ಮೇ 10ರಂದು ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯಾದ್ಯಂತ 1,798 ಮತಗಟ್ಟೆಗಳಿದ್ದು 8,648 ಸಿಬ್ಬಂದಿ ಕರ್ತವ್ಯ ನಿರ್ವಹಣೆ ಮಾಡಲಿದ್ದಾರೆ’ ಎಂದು ಜಿಲ್ಲಾ ಚುನಾವಣಾಧಿಕಾರಿ ಡಾ.ಎಚ್‌.ಎನ್‌.ಗೋಪಾಕೃಷ್ಣ ಸೋಮವಾರ ಹೇಳಿದರು.

‘ಪ್ರತಿ ಮತಗಟ್ಟೆಯಲ್ಲಿ ಒಬ್ಬರು ಅಧ್ಯಕ್ಷಾಧಿಕಾರಿ, ಮೂವರು ಮತದಾನ ಅಧಿಕಾರಿ ಹಾಗೂ ಭದ್ರತಾ ಸಿಬ್ಬಂದಿ ಕರ್ತವ್ಯ ನಿರ್ವಹಣೆ ಮಾಡಲಿದ್ದಾರೆ. ಎಲ್ಲಾ ಸಿಬ್ಬಂದಿಗೂ ಏ.18ರಂದು ಪ್ರಥಮ ಹಂತದ ತರಬೇತಿ ಆಯೋಜಿಸಲಾಗಿದೆ. ಚುನಾವಣಾ ಪ್ರಕ್ರಿಯೆ, ಮತಯಂತ್ರಗಳ ಬಳಕೆ ಸಂಬಂಧ ಮಾರ್ಗದರ್ಶನ ಮಾಡಲಾಗುವುದು’ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರದ ಪ್ರತಿ ಮತಗಟ್ಟೆಯಲ್ಲಿಯೂ ಕ್ಷೇತ್ರದ ಸಂಖ್ಯೆ, ಮತಗಟ್ಟೆ ಹೆಸರು, ಮತಗಟ್ಟೆ ವಿಳಾಸ, ಅಲ್ಲಿ ಕರ್ತವ್ಯ ನಿರ್ವಹಣೆ ಮಾಡುವ ಅಧಿಕಾರಿ ವಿಳಾಸವನ್ನು ಮತದಾನ ಕೇಂದ್ರದಲ್ಲಿ ನಮೂದಿಸಲು ನಿರ್ದೇಶನ ಮಾಡಲಾಗಿದೆ. ಈ ಪ್ರಕ್ರಿಯೆ ಮುಕ್ತಾಯ ಹಂತದಲ್ಲಿದ್ದು ಮತದಾರರಿಗೆ ಯಾವುದೇ ಗೊಂದಲ ಉಂಟಾಗದಂತೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ’ ಎಂದರು.

‘ಮತಗಟ್ಟೆಗಳ ಸ್ಥಳ, ವಿಳಾಸ ಬದಲಾವಣೆ ಕೋರಿ ಮುಖ್ಯ ಚುನಾವಣಾಧಿಕಾರಿಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಅದರಂತೆ ಚುನಾವಣಾ ಆಯೋಗ ಪ್ರಸ್ತಾವನೆಗೆ ಅನುಮೋದನೆ ನೀಡಿದೆ. ಒಟ್ಟು 1798 ಕ್ಷೇತ್ರಗಳಲ್ಲಿ 12 ಮತಗಟ್ಟೆಗಳ ಸ್ಥಳ, 22 ಮತಗಟ್ಟೆಗಳ ವಿಳಾಸ ಬದಲಾವಣೆ ಮಾಡಲಾಗಿದೆ’ ಎಂದರು.

‘ಮಳವಳ್ಳಿ, ಮದ್ದೂರು ಕ್ಷೇತ್ರದ 2 ಮತಗಟ್ಟೆಗಳ ಸ್ಥಳ, 2 ಮತಗಟ್ಟೆಗಳ ವಿಳಾಸ ಬದಲಾವಣೆ ಮಾಡಲಾಗಿದೆ. ಮೇಲುಕೋಟೆ ಕ್ಷೇತ್ರದಿಂದ 2 ಮತಗಟ್ಟೆಗಳ ಸ್ಥಳ, 3 ಮತಗಟ್ಟೆಗಳ ವಿಳಾಸ ಬದಲಾವಣೆ ಮಾಡಲಾಗಿದೆ. ಮಂಡ್ಯ ಕ್ಷೇತ್ರದ 6 ಮತಗಟ್ಟೆಗಳ ಸ್ಥಳ, 15 ಮತಗಟ್ಟೆಗಳ ವಿಳಾಸ ಬದಲಾವಣೆ ಮಾಡಲಾಗಿದೆ. ಉಳಿದ ಕ್ಷೇತ್ರಗಳಲ್ಲಿ ಯಾವುದೇ ಬದಲಾವಣೆ ಇಲ್ಲ’ ಎಂದರು.

‘ಮತದಾರರ ಪಟ್ಟಿಗೆ ಹೊಸದಾಗಿ ಸೇರ್ಪಡೆಯಾಗಿರುವ 66,981 ಮತದಾರರಿಗೆ ಭಾವಚಿತ್ರವಿರುವ ಗುರುತಿನ ಚೀಟಿ ಸರಬರಾಜು ಮಾಡುವ ಪ್ರಕ್ರಿಯೆ ಪ್ರಗತಿಯಲ್ಲಿದೆ. ಈಗಾಗಲೇ 53,656 ಗುರುತಿನ ಚೀಟಿ ಸರಬರಾಜಾಗಿದ್ದು ಅಂಚೆ ಮೂಲಕ ಕಳುಹಿಸಲಾಗುತ್ತಿದೆ. ವಿಳಂಬವಾದ ಮತದಾರರು ತಮ್ಮ ವ್ಯಾಪ್ತಿಯ ಅಂಚೆ ಕಚೇರಿಯನ್ನು ಸಂಪರ್ಕಿಸಬೇಕು’ ಎಂದರು.

‘ಮಾದರಿ ನೀರಿ ಸಂಹಿತೆ ಅನುಷ್ಠಾನಗೊಳಿಸಲು ಚುನಾವಣಾ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಯ ವಾಹನಗಳಿಗೆ ಜಿಪಿಎಸ್‌ ಅಳವಡಿಸಲಾಗಿದೆ. ಚುನಾವಣಾ ತಂಡಗಳು 24 ಗಂಟೆಯೂ ಕರ್ತವ್ಯ ನಿರ್ವಹಿಸುತ್ತವೆ. ಜಿಲ್ಲಾಧಿಕಾರಿ ಕಚೇರಿ ಹಾಗೂ ಇತರ ತಾಲ್ಲೂಕು ಕೇಂದ್ರಗಳಲ್ಲಿ ತೆರದಿರುವ ಕಂಟ್ರೋಲ್‌ ರೂಂಗಳು ದಿನವಿಡೀ ಕರ್ತವ್ಯ ನಿರ್ವಹಿಸುತ್ತವೆ’ ಎಂದರು.

‘ಮತದಾರರಿಗೆ ಮತದಾನ ಮಾಡಲು ಅವಶ್ಯಕವಾಗುವಂತೆ ವೋಟರ್‌ ಚೀಟಿಯನ್ನು ಡೌನ್‌ಲೋಡ್‌ ಮಾಡಿಕೊಳ್ಳುವ ಅವಕಾಶ ಕಲ್ಪಿಸಲಾಗುವುದು ಈ ಸಂಬಂಧ ಚುನಾವಣಾ ಆಯೋಗದ ನಿರ್ದೇಶನದಂತೆ ನಡೆದುಕೊಳ್ಳಲಾಗುವುದು. ಜಿಲ್ಲೆಯಲ್ಲಿ 7 ಮಂದಿ ರೌಡಿಶೀಟರ್‌ಗಳನ್ನು ಗಡಿಪಾರು ಮಾಡಲಾಗಿದೆ. 667 ಆಯುಧಗಳನ್ನು ಠಾಣಾ ಸುಪರ್ದಿಗೆ ನೀಡಲಾಗಿದೆ’ ಎಂದರು.

‘ಜಿಲ್ಲೆಯ ವಿವಿಧೆಡೆ ಹಳ್ಳಿಗಳಲ್ಲಿ, ಬಡಾವಣೆಗಳಲ್ಲಿ ಮತದಾನ ಬಹಿಷ್ಕಾರದ ಎಚ್ಚರಿಕೆ ನೀಡುತ್ತಿರುವುದು ಗಮನಕ್ಕೆ ಬಂದಿದೆ. ಆಯಾ ಸ್ಥಳಗಳಿಗೆ ಖುದ್ದು ಭೇಟಿಯಾಗಿ ಮಾತನಾಡಿದ್ದೇವೆ, ಅವರ ಮನವಿ ಆಲಿಸಿ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದ್ದೇವೆ. ಯಾರೂ ಮತದಾನದ ಬಹಿಷ್ಕರಿಸುವ ಮಾತುಗಳನ್ನು ಆಡಬಾರದು ಎಂದು ಮಾರ್ಗದರ್ಶನ ಮಾಡಿದ್ದೇವೆ’ ಎಂದರು.

‘ವಿವಿಧ ಕ್ಷೇತ್ರಗಳಿಗೆ ಚುನಾವಣಾ ಆಯೋಗ ಐವರು ಚುನಾವಣಾ ವೆಚ್ಚ ವೀಕ್ಷಕರನ್ನು ನೇಮಕ ಮಾಡಿದೆ. ಅವರು ಏ.13ರಂದು ಜಿಲ್ಲೆಗೆ ಬರುತ್ತಿದ್ದಾರೆ. ಅವರಿಗೆ ಎಲ್ಲಾ ರೀತಿಯ ಸೌಲಭ್ಯ ಒದಗಿಸಲಾಗಿದೆ’ ಎಂದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎನ್‌.ಯತೀಶ್‌ ಮಾತನಾಡಿ ‘ಚುನಾವಣೆ ಘೋಷಣೆಯಾದ ನಂತರ ಇಲ್ಲಿಯವರೆಗೂ ₹ 38 ಲಕ್ಷ ನಗದು ಸೇರಿ ₹ 1.13 ಕೋಟಿ ಮೌಲ್ಯದ ಮದ್ಯ, ಉಡುಗೊರೆ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ₹ 50 ಲಕ್ಷ ಮೌಲ್ಯದ ಮದ್ಯ, ₹ 6 ಸಾವಿರ ಮೌಲ್ಯದ ಡ್ರಗ್ಸ್‌, ₹ 25 ಲಕ್ಷ ಮೌಲ್ಯದ ಉಡುಗೊರೆ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ’ ಎಂದರು.

‘ಮದ್ದೂರು ಬಳಿ ಎಕ್ಸ್‌ಪ್ರೆಸ್‌ ವೇಯಲ್ಲಿ ತೆರೆದಿರುವ ಚೆಕ್‌ಪೋಸ್ಟ್‌ನಲ್ಲಿ ವಾಹನಗಳು ವೇಗವಾಗಿ ಚಲಿಸುವ ಕಾರಣ ಅಪಘಾತವಾಗುವ ಅಪಾಯ ಎದುರಾಗಿತ್ತು. ಇದನ್ನು ಮನಗಂಡು ದೂರದಲ್ಲೇ ಕೆಂಪುದೀಪ ಬೆಳಗಿಸಿ, ಚೆಕ್‌ಪೋಸ್ಟ್‌ ಇದೆ ಎಂಬ ಎಚ್ಚರಿಕೆಯ ಫಲಕ ಅಳವಡಿಸಿ ವಾಹನ ತಪಾಸಣೆ ಮಾಡುತ್ತಿದ್ದೇವೆ’ ಎಂದರು.

**

ಪ್ರಚಾರಕ್ಕೆ ಮಕ್ಕಳನ್ನು ಬಳಸಿದರೆ ಕ್ರಮ

‘ಚುನಾವಣಾ ಪ್ರಚಾರ ಕಾರ್ಯದಲ್ಲಿ ಮಕ್ಕಳನ್ನು ಬಳಸಿಕೊಳ್ಳುವುದು ಶಿಕ್ಷಾರ್ಹ ಅಪರಾಧವಾಗಿದೆ. ಯಾವುದೇ ಅಭ್ಯರ್ಥಿ, ಯಾವುದೇ ಪಕ್ಷ ಮಕ್ಕಳನ್ನು ದುರುಪಯೋಗ ಮಾಡಿಕೊಂಡರೆ ಅವರ ವಿರುದ್ಧ ಪ್ರಕರಣ ದಾಖಲು ಮಾಡಿ ಕ್ರಮ ಜರುಗಿಸಲಾಗುವುದು’ ಎಂದು ಡಾ.ಎಚ್‌.ಎನ್‌.ಗೋಪಾಲಕೃಷ್ಣ ಎಚ್ಚರಿಕೆ ನೀಡಿದರು.

‘ಜಿಲ್ಲೆಯ ವಿವಿಧೆಡೆ ಮಕ್ಕಳನ್ನು ದುರ್ಬಳಕೆ ಮಾಡಿಕೊಂಡರೆ ಚುನಾವಣಾಧಿಕಾರಿಗಳಿಗೆ ದೂರು ನೀಡಬೇಕು, ಕಂಟ್ರೋಲ್‌ ರೂಂಗಳಿಗೆ ಕರೆ ಮಾಡಿ ಮಾಹಿತಿ ನೀಡಿದರೂ ಅದನ್ನು ಗಂಭೀರವಾಗಿ ಪರಿಗಣಿಸಲಾಗುವುದು’ ಎಂದರು.

***

ಹೆಸರು ಸೇರ್ಪಡೆ ಮುಕ್ತಾಯ

‘ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಪ್ರಕ್ರಿಯೆ ಏ.10, ಮಧ್ಯರಾತ್ರಿ 12 ಗಂಟೆಗೆ ಮುಕ್ತಾಯಗೊಂಡಿದೆ. ಸ್ವೀಕೃತ ಅರ್ಜಿಗಳನ್ನು ಏ.20, ಮಧ್ಯಾಹ್ನ 3 ಗಂಟೆವರೆಗೆ ವಿಲೇವಾರಿ ಮಾಡಲಾಗುವುದು’ ಎಂದು ಜಿಲ್ಲಾ ಚುನಾವಣಾಧಿಕಾರಿ ಹೇಳಿದರು.

‘7ದಿನಗಳ ನೋಟಿಸ್‌ ಅವಧಿ ನಂತರ ಮೂರು ದಿನಗಳಲ್ಲಿ ದಾಖಲೆ ಪರಿಶೀಲನೆ ಮಾಡಬೇಕಾದ ಹಿನ್ನೆಲೆಯಲ್ಲಿ ಏ.10ಕ್ಕೆ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಅವಧಿಯನ್ನು ಕೊನೆಗೊಳಿಸಲಾಗಿದೆ’ ಎಂದರು.

***

ರಾಯಭಾರಿ ಭೇಟಿ 13ಕ್ಕೆ

‘ಮತದಾರರ ಜಾಗೃತಿ ಸಮಿತಿ, ಜಿಲ್ಲಾಡಳಿತವು ಈ ಬಾರಿ ಮತದಾರರ ರಾಯಭಾರಿಯನ್ನಾಗಿ ಜಿಲ್ಲೆಯ ಯುವ ಪ್ರತಿಭೆ, ಚಿತ್ರನಟ ನೀನಾಸಂ ಸತೀಶ್‌ ಅವರನ್ನು ಆಯ್ಕೆ ಮಾಡಿದೆ. ಅವರು ಏ.13ರಂದು ನಗರಕ್ಕೆ ಭೇಟಿ ನೀಡುತ್ತಿದ್ದು ಮಂಡ್ಯ ವಿವಿ ಆವರಣದಲ್ಲಿ ನಡೆಯಲಿರುವ ಮತದಾರರ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ’ ಎಂದು ಡಾ.ಎಚ್.ಎನ್‌.ಗೋಪಾಲಕೃಷ್ಣ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT