ಮಂಗಳವಾರ, ಆಗಸ್ಟ್ 20, 2019
27 °C
ಕಬ್ಬಿಣಕ್ಕೆ ಆಕಾರ ಕೊಡುವವರಿಗೆ ತಮ್ಮ ಮಕ್ಕಳಿಗೆ ಜೀವನ ಕೊಡಲಾಗುತ್ತಿಲ್ಲ

ಕುಲುಮೆಯಲ್ಲಿ ಕರಗುತ್ತಿದೆ ಮಕ್ಕಳ ಶಿಕ್ಷಣ

Published:
Updated:
Prajavani

ಮಂಡ್ಯ: ಮಹಾರಾಷ್ಟ್ರದ 20 ಕುಟುಂಬ ಗಳು ನಗರದ ಫ್ಯಾಕ್ಟರಿ ವೃತ್ತದ ಬಳಿ ಬೀಡುಬಿಟ್ಟಿದ್ದು, ರೈತರಿಗೆ ಅಗತ್ಯವಾದ ಕಬ್ಬಿಣದ ವಸ್ತುಗಳನ್ನು ಸಿದ್ಧಪಡಿಸಿ ಮಾರಾಟ ಮಾಡುತ್ತಿದ್ದಾರೆ. ಆದರೆ, ಕುಟುಂಬದ ಮಕ್ಕಳು ಕಬ್ಬಿಣದ ಕುಲುಮೆಯ ಜೊತೆಯಲ್ಲಿಯೇ ಕೆಲಸ ಮಾಡುತ್ತಾ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ.

ಶಿಕ್ಷಣ ಪ್ರತಿಯೊಂದು ಮಗುವಿನ ಸಂವಿಧಾನ ಬದ್ಧವಾಗಿ ಶಿಕ್ಷಣ ಸಿಗಬೇಕು. ಶಿಕ್ಷಣ ಕೊಡಿಸುವುದು ಪೋಷಕರ ಕರ್ತವ್ಯ. ಆದರೆ, ಇಲ್ಲಿ ಬೀಡುಬಿಟ್ಟಿರುವವರ ಮಕ್ಕಳು ಶಿಕ್ಷಣದಿಂದ ಸಂಪೂರ್ಣವಾಗಿ ವಂಚಿತರಾಗಿದ್ದು, ಶಾಲೆಯ ಮುಖವನ್ನೇ ನೋಡಿಲ್ಲ. ಕೆಲ ಮಕ್ಕಳು 10 ವರ್ಷಕ್ಕೇ ಸುತ್ತಿಗೆ ಹಿಡಿದುಕೊಂಡು ಕಬ್ಬಿಣ ಬಡಿಯುತ್ತಿದ್ದಾರೆ. ಶಿಕ್ಷಣ ವಂಚಿತರಾದ ಮಕ್ಕಳು ತಮಗೆ ಅರಿವಿಲ್ಲದಂತೆಯೇ ಬಾಲ ಕಾರ್ಮಿಕರಾಗಿದ್ದಾರೆ. ಮಕ್ಕಳಿಗೆ ಸಿಗಬೇಕಾದ ಮೂಲ ಸೌಕರ್ಯಗಳಿಂದ ವಂಚಿತರಾಗುತ್ತಿದ್ದಾರೆ.‌

ಕಳೆದ ಮೂರು ದಿನಗಳಿಂದ ಬೀಡು ಬಿಟ್ಟಿರುವ ಕುಟುಂಬಗಳು ಮಹಾರಾಷ್ಟ್ರದ ಔರಂಗಾಬಾದ್ ಹಾಗೂ ಜಲ್ನಾ ಜಿಲ್ಲೆಯವರಾಗಿದ್ದಾರೆ. ಸ್ಥಳೀಯ ವಾಗಿ ಗುಜರಿಯಲ್ಲಿ ಸಿಗುವ ತುಕ್ಕು ಬಾರದಿರುವ ಕಬ್ಬಿಣ ಕೊಂಡುಕೊಳ್ಳುವ ಇವರು, ಅದನ್ನು ಊದುಕುಲುಮೆಯಲ್ಲಿ ಕಾಯಿಸಿ ವಸ್ತುವಿನ ಆಕಾರ ನೀಡುತ್ತಾರೆ. ಕೊಡಲಿ, ಕುಡುಗೋಲು, ಮಚ್ಚು, ಕೋಲು ಗುದ್ದಲಿ, ಹಾರೆ, ಸಲಕೆ, ಚಾಕು ಸೇರಿದಂತೆ ಅನೇಕ ಕಬ್ಬಿಣದ ವಸ್ತುಗಳನ್ನು ಸಿದ್ಧಪಡಿಸಿ ಮಾರಾಟ ಮಾಡುತ್ತಾರೆ. ಆದರೆ, ತಮ್ಮ ಮಕ್ಕಳಿಗೆ ಸುಭದ್ರ ಜೀವನಕ್ಕೆ ಆಕಾರ ಕೊಡಲಾಗದೆ, ಮಕ್ಕಳನ್ನೂ ತಮ್ಮ ಕಾಯಕಕ್ಕೆ ತಳ್ಳುತ್ತಿದ್ದಾರೆ.

‘ನಾವು ದೀಪಾವಳಿ ಸಂದರ್ಭದಲ್ಲಿ ಮಾತ್ರ ಹಬ್ಬದ ಆಚರಣೆಗೆ ಊರಿಗೆ ಹೋಗುತ್ತೇವೆ. ಆಗ ಮೂರರಿಂದ ನಾಲ್ಕು ತಿಂಗಳು ಊರಿನಲ್ಲಿ ವಾಸವಿರುತ್ತೇವೆ. ನಾವು ಊರಿನಲ್ಲಿದ್ದ ಸಂದರ್ಭದಲ್ಲಿ ಮಾತ್ರ ಮಕ್ಕಳು ಶಾಲೆಗೆ ಹೋಗುತ್ತಾರೆ. ಹೊಟ್ಟೆಪಾಡಿಗಾಗಿ ಎಂಟು ತಿಂಗಳ ಕಾಲ ಊರಿನಿಂದ ಹೊರಗಿರುವ ನಾವು ಮಕ್ಕಳನ್ನು ಓದಿಸುವುದು ಅಸಾಧ್ಯವಾಗಿದೆ. ಊರಿನಲ್ಲಿ ಮಕ್ಕಳನ್ನು ಬಿಟ್ಟು ಬರೋಣವೆಂದರೆ, ಅಲ್ಲಿ ಯಾರೂ ಇಲ್ಲ. ಹೀಗಾಗಿ, ನಮ್ಮ ಜೊತೆಯಲ್ಲಿಯೇ ಕರೆದುಕೊಂಡು ಬರುತ್ತೇವೆ. ಕೆಲ ಮಕ್ಕಳು ಶಾಲೆಯ ಮೆಟ್ಟಿಲನ್ನೇ ಹತ್ತಿಲ್ಲ. ಅವರೂ ನಮ್ಮಂತೆ ಹೆಬ್ಬೆಟ್ಟು ಒತ್ತುವಂತಾಗಿದೆ’ ಎಂದು ಸಂಗೀತಾ ಬಾಯಿ ಹೇಳಿದರು.

ಜಿಲ್ಲೆಯಲ್ಲಿ ಒಂದು ಸಾವಿರಕ್ಕಿಂತ ಹೆಚ್ಚು ಅಲೆಮಾರಿ ಕುಟುಂಬಗಳು ಇವೆ. ತಾತ್ಕಾಲಿಕವಾಗಿ ನೆಲೆಯೂರುವ ಇವರು, ತಮ್ಮ ವ್ಯಾಪಾರ ಮುಗಿಸಿಕೊಂಡು ವಾಪಸ್‌ ತೆರಳುತ್ತಾರೆ. ಜಿಲ್ಲೆಯಲ್ಲಿ ಕಬ್ಬು ಕಡಿಯಲು ಬರುವ ಉತ್ತರ ಕರ್ನಾಟಕದ ಕುಟುಂಬಗಳ ಸಂಖ್ಯೆಯೂ ಹೆಚ್ಚಿದ್ದು, ಅವರ ಮಕ್ಕಳ ಸ್ಥಿತಿಯೂ ಇವರಿಗಿಂತ ಭಿನ್ನವಾಗಿಲ್ಲ. ಜಿಲ್ಲಾಡಳಿತ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಶಿಕ್ಷಣ ಇಲಾಖೆಯು ಈ ಮಕ್ಕಳಿಗೆ ಶಿಕ್ಷಣ ಒದಗಿಸಬೇಕಿದೆ.

ಈ ಮಕ್ಕಳಿಗೆ ಶಿಕ್ಷಣ ನೀಡಲಿ

ಅಲೆಮಾರಿ ಕುಟುಂಬದ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಾರೆ. ಪೂರ್ವಿಕರ ಕೆಲಸವನ್ನು ಅನಿವಾರ್ಯವಾಗಿ ಅವಲಂಬಿಸಬೇಕಿದೆ. ರಾಜ್ಯದ 70,116 ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ. ಜಿಲ್ಲಾಡಳಿತ ಹಾಗೂ ಸಂಬಂಧಿಸಿದ ಅಧಿಕಾರಿಗಳು ಈ ಕುರಿತು ಕ್ರಮವಹಿಸಬೇಕು. ಅಲೆಮಾರಿ ಮಕ್ಕಳಿಗೆ ಶಿಕ್ಷಣ ನೀಡಬೇಕು ಎಂದು ಸಹಾಯಕ ಪ್ರಾಧ್ಯಾಪಕ ಡಾ.ಎಂ.ವೈ.ಶಿವರಾಂ ಆಗ್ರಹಿಸಿದ್ದಾರೆ.

ಅಲೆಮಾರಿ ಮಕ್ಕಳಿಗೆ ಬಿಸಿಯೂಟ

ಅಲೆಮಾರಿ ಕುಟುಂಬಗಳಿಗೆ ಸರ್ಕಾರದಿಂದ ತಾತ್ಕಾಲಿಕ ವಸತಿ ಕಲ್ಪಿಸಿ ಕೊಡಲು ಅವಕಾಶವಿದೆ. ಸಣ್ಣ ಮಕ್ಕಳಿಗೆ ಅಂಗನವಾಡಿ ಕೇಂದ್ರಗಳಿಂದ ಬೆಳಿಗ್ಗೆ ಉಪಾಹಾರ ಮತ್ತು ಮಧ್ಯಾಹ್ನದ ಬಿಸಿಯೂಟ ಒದಗಿಸಬಹುದು. ಕಬ್ಬಿಣ ಕೆಲಸಕ್ಕೆ ಬಂದಿರುವ ಕುಟುಂಬದ ಮಕ್ಕಳಿಗೆ ಅಂಗನವಾಡಿ ಕೇಂದ್ರಗಳಿಂದ ಊಟ ಪೂರೈಸಲು ಕ್ರಮ ಕೈಗೊಳ್ಳಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಎಸ್.ರಾಜಮೂರ್ತಿ ಹೇಳಿದರು.

Post Comments (+)