ಮಂಗಳವಾರ, ನವೆಂಬರ್ 12, 2019
28 °C
ಇಲಾಖೆಗಳಿಗೆ ಮನವಿ ಕೊಟ್ಟು ಬೇಸತ್ತಿದ್ದ ಕೃಷಿಕ

ಶ್ರೀರಂಗಪಟ್ಟಣ: ಸ್ವಂತ ಹಣದಿಂದಲೇ ರಸ್ತೆ ದುರಸ್ತಿ ಮಾಡಿಸಿದ ರೈತ!

Published:
Updated:
Prajavani

ಶ್ರೀರಂಗಪಟ್ಟಣ: ರಸ್ತೆ ಅಭಿವೃದ್ಧಿಪಡಿಸುವಂತೆ ನೀರಾವರಿ ಮತ್ತು ಲೋಕೋಪಯೋಗಿ ಇಲಾಖೆಗೆ ಮನವಿ ಕೊಟ್ಟು ಬೇಸತ್ತ ರೈತರೊಬ್ಬರು ಸ್ವಂತ ಹಣದಿಂದ ರಸ್ತೆಯನ್ನು ದುರಸ್ತಿ ಮಾಡಿಸಿದ್ದಾರೆ.

ತಾಲ್ಲೂಕಿನ ದೊಡ್ಡಪಾಳ್ಯ ಗ್ರಾಮದ ಜಯರಾಮೇಗೌಡ ಶನಿವಾರ ₹ 10 ಸಾವಿರ ಖರ್ಚು ಮಾಡಿ ರಸ್ತೆಯ ಗುಂಡಿ ಮುಚ್ಚಿಸಿ ಸಮತಟ್ಟು ಮಾಡಿಸಿದರು. ಜೆಸಿಬಿ ಯಂತ್ರವನ್ನು ಬಾಡಿಗೆಗೆ ತಂದು ಎರಡು ಕಿ.ಮೀ.ನಷ್ಟು ರಸ್ತೆಯನ್ನು ತಾತ್ಕಾಲಿಕವಾಗಿ ಮಟ್ಟಸ ಮಾಡಿಸಿದರು. ಬೆಳಿಗ್ಗೆ 7ರಿಂದ ಮಧ್ಯಾಹ್ನ 12 ಗಂಟೆಗೆ ವರೆಗೆ ರಸ್ತೆ ದುರಸ್ತಿ ಕಾರ್ಯ ನಡೆಯಿತು. ಮಣ್ಣಿನ ರಸ್ತೆಯ ಕೊರಕಲು, ದಿಬ್ಬಗಳನ್ನು ಸರಿ ಮಾಡಿಸಿದ್ದು, ಎತ್ತಿನಗಾಡಿ ಹಾಗೂ ವಾಹನಗಳು ಓಡಾಡಲು ಅನುಕೂಲ ಮಾಡಿಕೊಟ್ಟಿದ್ದಾರೆ.

‘ದೊಡ್ಡಪಾಳ್ಯದಿಂದ ಅಲ್ಲಾಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ, ಸಿಡಿಎಸ್‌ ನಾಲೆ ಏರಿಯ ರಸ್ತೆ ತೀರಾ ಹದಗೆಟ್ಟಿತ್ತು. ಈ ಬಗ್ಗೆ ನೀರಾವರಿ ಮತ್ತು ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಹಲವು ವರ್ಷಗಳಿಂದ ಹೇಳುತ್ತಲೇ ಇದ್ದೇವೆ. ಯಾರೂ ಇತ್ತ ಗಮನಹರಿಸಲಿಲ್ಲ. ರೈತರ ಪಡಿಪಾಟಲು ಹೇಳತೀರದಾಗಿತ್ತು. ಹಾಗಾಗಿ ಸ್ವಂತ ಹಣದಿಂದ ರಸ್ತೆಯನ್ನು ತಾತ್ಕಾಲಿಕವಾಗಿ ಅಭಿವೃದ್ಧಿ ಮಾಡಿಸಿದ್ದೇನೆ’ ಎಂದು ಜಯರಾಮೇಗೌಡ ’ಪ್ರಜಾವಾಣಿ’ಗೆ ತಿಳಿಸಿದರು.

‘ಸಿಡಿಎಸ್‌ ನಾಲೆ ಏರಿಯ ಮೇಲೆ ಕಲ್ಲು ಗಣಿ ಮತ್ತು ಜಲ್ಲಿ ಕ್ರಷರ್‌ಗಳ ಟಿಪ್ಪರ್‌ಗಳು, ಟ್ರ್ಯಾಕ್ಟರ್‌ಗಳು ಓಡಾಡಲು ಆರಂಭಿಸಿದ ಮೇಲೆ ನಾಲೆ ಏರಿಯ ರಸ್ತೆ ಹದಗೆಟ್ಟಿದೆ. ಸೋನೆ ಮಳೆ ಬಿದ್ದರೂ ಮಂಡಿಯುದ್ದ ಗುಂಡಿಗಳು ನಿರ್ಮಾಣವಾಗುತ್ತದೆ. ಜಲ್ಲಿ ಲಾರಿ ಮತ್ತು ಟ್ರಾಕ್ಟರ್‌ಗಳ ಸಂಚಾರವನ್ನುಈ ಮಾರ್ಗದಲ್ಲಿ ನಿರ್ಬಂಧಿಸಬೇಕು’ ಎಂದು ಅವರು ಒತ್ತಾಯಿಸಿದ್ದಾರೆ.

ಪ್ರತಿಕ್ರಿಯಿಸಿ (+)