ಶ್ರೀರಂಗಪಟ್ಟಣ: ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ಬಂಧನ ಖಂಡಿಸಿ ಎಎಪಿ ಕಾರ್ಯಕರ್ತರು ಸೋಮವಾರ ಪಟ್ಟಣದ ಮಿನಿ ವಿಧಾನಸೌಧದ ಎದುರು ಪ್ರತಿಭಟನೆ ನಡೆಸಿದರು.
ಕೇಂದ್ರ ಸರ್ಕಾರ, ಗೃಹ ಸಚಿವ ಮತ್ತು ಸಿಬಿಐ ವಿರುದ್ಧ ಘೋಷಣೆ ಕೂಗಿದರು. ಸಿಸೋಡಿಯಾ ಅವರನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.
ದೆಹಲಿ ಸರ್ಕಾರ ದೇಶದಲ್ಲೇ ಮಾದರಿ ಆಡಳಿತ ನಡೆಸುತ್ತಿದೆ. ಉತ್ತಮ ಶಿಕ್ಷಣ, ಉಚಿತ ಸಾರಿಗೆ ವ್ಯವಸ್ಥೆ, ವಿದ್ಯುತ್, ಕುಡಿಯುವ ನೀರು ಒದಗಿಸುವ ಮೂಲಕ ಜನ ಸ್ನೇಹಿ ಆಡಳಿತ ನೀಡುತ್ತಿದೆ. ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಜನಪ್ರಿಯತೆ ಸಹಿಸದೆ ದೆಹಲಿ ಸರ್ಕಾರವನ್ನು ಅಸ್ಥಿರಗೊಳಿಸುವ ಕೇಂದ್ರ ಸರ್ಕಾರ ಹುನ್ನಾರ ನಡೆಸುತ್ತಿದೆ ಎಂದು ಪಕ್ಷದ ಮುಖಂಡ ಹಾಗೂ ವಕೀಲ ಸಿ.ಎಸ್.ವೆಂಕಟೇಶ್ ಆಕ್ರೋಶ ವ್ಯಕ್ತಪಡಿಸಿದರು.
ಕೇಜ್ರಿವಾಲ್ ಪ್ರಧಾನಿಯಾಗುತ್ತಾರೆ ಎಂಬ ಆತಂಕ ಬಿಜೆಪಿಗೆ ಶುರುವಾಗಿದೆ. ಹಾಗಾಗಿ ಕೇಜ್ರಿವಾಲ್ ಮತ್ತು ಅವರ ಸಚಿವ ಸಂಪುಟದ ಸಹೋದ್ಯೋಗಿಗಳ ವಿರುದ್ಧ ಸಿಬಿಐ, ಇ.ಡಿಯಂತಹ ತನಿಖಾ ಸಂಸ್ಥೆಗಳನ್ನು ಪ್ರಯೋಗಿಸುತ್ತಿದ್ದಾರೆ. ಇದರಿಂದ ಪಕ್ಷ ಮತ್ತು ಕೇಜ್ರಿವಾಲ್ ಅವರ ವರ್ಚಸ್ಸು ಕುಂದಿಸಲು ಸಾಧ್ಯವಿಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಸಿಸೋಡಿಯಾ ಅವರನ್ನು ತಕ್ಷಣ ಬಿಡುಗಡೆ ಮಾಡಬೇಕು. ಇಲ್ಲದಿದ್ದರೆ ಪ್ರತಿಭಟನೆ ತೀವ್ರಗೊಳಿಸುತ್ತೇವೆ ಎಂದು ವೆಂಕಟೇಶ್ ಎಚ್ಚರಿಸಿದರು.
ಪಕ್ಷದ ಮುಖಂಡರಾದ ಚಿಕ್ಕತಮ್ಮೇಗೌಡ, ಅಮ್ರಿನ್ ತಾಜ್, ಕಡತನಾಳು ಜಯಶಂಕರ್, ಅರಕೆರೆ ಆನಂದ್, ಪಾನಿಪೂರಿ ರವಿ, ಚಿಕ್ಕತಮ್ಮೇಗೌಡ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ತಾಲ್ಲೂಕು ಆಡಳಿತದ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.