ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ತಿ ಕರ ಪಾವತಿಗೆ ಪರದಾಟ

ಹೆಚ್ಚುವರಿ ಮತ್ತು ಸಂಚಾರಿ ಕೌಂಟರ್‌ ಆರಂಭಿಸಲು ಒತ್ತಾಯ
Last Updated 10 ಏಪ್ರಿಲ್ 2018, 9:11 IST
ಅಕ್ಷರ ಗಾತ್ರ

ಕಲಬುರ್ಗಿ: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಆಸ್ತಿ ಹೊಂದಿರುವವರು ಆಸ್ತಿ ಕರ ಪಾವತಿಗೆ ಪರದಾಡುವಂತಾಗಿದೆ ಎಂಬ ದೂರು ವ್ಯಾಪಕವಾಗಿ ಕೇಳಿಬರುತ್ತಿದೆ.ಏಪ್ರಿಲ್‌ 30ರ ಒಳಗಾಗಿ ಆಸ್ತಿ ಕರ ಪಾವತಿಸಿದರೆ ಶೇ 5ರಷ್ಟು ರಿಯಾಯಿತಿ ನೀಡಲಾಗುತ್ತಿದೆ. ಹೀಗಾಗಿ ಹೆಚ್ಚಿನವರು ಆಸ್ತಿ ಕರ ಪಾವತಿಗೆ ಮುಂದಾಗಿದ್ದಾರೆ.

‘ಗುಲಬರ್ಗಾ ಒನ್‌’ ಕೇಂದ್ರಗಳಲ್ಲಿ ಆಸ್ತಿ ಕರ ಸ್ವೀಕರಿಸುತ್ತಿಲ್ಲ. ಮಹಾನಗರ ಪಾಲಿಕೆಯ ಆವರಣದಲ್ಲಿರುವ ಬ್ಯಾಂಕ್‌ ಆಫ್‌ ಇಂಡಿಯಾ ಶಾಖೆಯ ಕೌಂಟರ್‌ನಲ್ಲಿ ಮಾತ್ರ ಪಾವತಿಗೆ ಅವಕಾಶ ಇದೆ. ಇದರಿಂದ ಸರದಿ ಸಾಲಿನಲ್ಲಿ ಗಂಟೆಗಟ್ಟಲೆ ನಿಲ್ಲಬೇಕಾದ ಅನಿವಾರ್ಯತೆ ಎದುರಾಗಿದೆ ಎನ್ನುವುದು ಬಹುಪಾಲು ಜನರ ಅಳಲು.

‘ಗುಲಬರ್ಗಾ ಒನ್‌ ಕೇಂದ್ರಗಳಲ್ಲಿ ನೀರು, ಮೊಬೈಲ್‌, ವಿದ್ಯುತ್‌ ಮತ್ತಿತರ ಬಿಲ್‌ಗಳನ್ನು ಪಡೆಯುತ್ತಾರೆ. ಆಸ್ತಿ ಕರ ಸಂದಾಯಕ್ಕೆ ಅವಕಾಶ ಇಲ್ಲ. ಅಲ್ಲಿಯ ಸಿಬ್ಬಂದಿಯನ್ನು ಪ್ರಶ್ನಿಸಿದರೆ ತಮಗೆ ಮಾಹಿತಿ ಇಲ್ಲ ಎನ್ನುತ್ತಾರೆ. ಯಾರನ್ನು ಸಂಪರ್ಕಿಸಬೇಕು ಎಂಬ ಮಾಹಿತಿಯೂ ಅಲ್ಲಿ ಸಿಗುವುದಿಲ್ಲ’ ಎನ್ನುತ್ತಾರೆ ಇಲ್ಲಿಯ ಶಾಸ್ತ್ರಿನಗರ ನಿವಾಸಿಯಾಗಿರುವ ನಿವೃತ್ತ ಬ್ಯಾಂಕ್‌ ಅಧಿಕಾರಿ ಕೆ.ಎಸ್‌. ಉದಯಶ್ರೀನಿವಾಸ್‌.

‘ಪಾಲಿಕೆ ಆವರಣದಲ್ಲಿರುವ ಕೌಂಟರ್‌ನಲ್ಲಿ ಆಸ್ತಿ ಕರ ಮತ್ತು ರಿಯಾಯಿತಿ, ಬಾಕಿಯ ಬಗ್ಗೆ ಮಾಹಿತಿ ಇರುವ ಮುದ್ರಿತ ಪ್ರತಿ ಕೊಡಲಾಗುತ್ತದೆ. ಅದನ್ನು ಪಡೆಯಲು ಸಾಕಷ್ಟು ಜನ ಸರದಿಯಲ್ಲಿ ನಿಂತಿರುತ್ತಾರೆ. ಹಿರಿಯ ನಾಗರಿಕರು, ಮಹಿಳೆಯರಿಗೆ ತೊಂದರೆಯಾಗುತ್ತದೆ. ಮಹಾನಗರ ಪಾಲಿಕೆಯವರು ಸಹಾಯ ಕೇಂದ್ರವನ್ನು ಆರಂಭಿಸಬೇಕು. ಇಲ್ಲವೆ ದೂರವಾಣಿಯಲ್ಲಿ ಮಾಹಿತಿ ಕೊಡುವ ವ್ಯವಸ್ಥೆಯನ್ನಾದರೂ ಮಾಡಬೇಕು’ ಎಂಬುದು ಅವರ ಆಗ್ರಹ.

‘ಹಿಂದೆ ಮನೆ ಮನೆಗೆ ರಸೀದಿ ತಂದು ಕೊಡುತ್ತಿದ್ದರು. ಈಗ ಕರ ಎಷ್ಟಿದೆ ಎಂಬ ಮಾಹಿತಿ ಬೇಕಾದರೂ ನಾವು ಪಾಲಿಕೆಯ ಕಚೇರಿಯಲ್ಲಿನ ಕೌಂಟರ್‌ಗೇ ಹೋಗಬೇಕು’ ಎಂದು ಅವರು ಹೇಳುತ್ತಾರೆ.

‘ನಗರದಲ್ಲಿ ನಾಲ್ಕು ‘ಗುಲಬರ್ಗಾ ಒನ್‌’ ಕೇಂದ್ರಗಳಿವೆ. ಅಲ್ಲಿ ಆಸ್ತಿ ಕರ ಸ್ವೀಕರಿಸಿದರೆ ಅನುಕೂಲ. ರಾಷ್ಟ್ರೀಕೃತ ಬ್ಯಾಂಕ್‌ ಶಾಖೆಗಳಲ್ಲಿ ಸೌಲಭ್ಯ ಕಲ್ಪಿಸಿದರೂ ಸರಿ. ಇದೆಲ್ಲ ಸಾಧ್ಯವಿಲ್ಲ ಎಂದಾದರೆ ಮಹಾನಗರ ಪಾಲಿಕೆಯೇ ಮೊಬೈಲ್‌ ಕೌಂಟರ್‌ ಆರಂಭಿಸಬೇಕು. ಆಯಾ ಪ್ರದೇಶಗಳಿಗೆ ನಿಗದಿತ ದಿನದಂದು ಬಂದು ಕರ ಪಡೆಯಬೇಕು. ಹೀಗಾದರೆ, ಕರದಾತರಿಗೂ ಅನುಕೂಲ. ಪಾಲಿಕೆಗೂ ಕರ ವಸೂಲಿ ಸರಳವಾಗಲಿದೆ’ ಎಂದು ಅವರು ಸಲಹೆ ನೀಡುತ್ತಾರೆ.

‘ಪಾಲಿಕೆಯ ಸಿಬ್ಬಂದಿಗೆ ವೇತನ ಪಾವತಿಸಲೂ ಹಣದ ಕೊರತೆ ಇದೆ ಎಂದು ಹೇಳಲಾಗುತ್ತಿದೆ. ಆದರೆ, ಕರ ಪಾವತಿ ವ್ಯವಸ್ಥೆ ಸರಳೀಕರಣಗೊಳಿಸಿದರೆ ಪಾಲಿಕೆ ಆರ್ಥಿಕ ಮುಗ್ಗಟ್ಟಿನಿಂದ ಪಾರಾಗಬಹುದು’ ಎಂದು ಅವರು ಹೇಳುತ್ತಾರೆ.

ಶೀಘ್ರ ಪರಿಹಾರ: ‘ಮಹಾನಗರ ಪಾಲಿಕೆಯಲ್ಲಿ ಆರು ಕೌಂಟರ್‌ಗಳಿವೆ. ಕರ ಮಾಹಿತಿಯ ಮುದ್ರಿತ ಪ್ರತಿ ನೀಡುವ ಕೌಂಟರ್‌ನಲ್ಲಿ ನಿತ್ಯ ಹೆಚ್ಚಿನ ಸರದಿ ಇರುವುದು ನಿಜ. ಈ ಸಮಸ್ಯೆಗೆ ಶೀಘ್ರ ಪರಿಹಾರ ದೊರೆಯಲಿದೆ’ ಎನ್ನುವುದು ಮಹಾನಗರ ಪಾಲಿಕೆಯ ಉಪ ಆಯುಕ್ತ (ಅಭಿವೃದ್ಧಿ) ಆರ್‌.ಪಿ. ಜಾಧವ ಅವರ ವಿವರಣೆ.

‘ಐದು ಬ್ಯಾಂಕ್‌ಗಳಲ್ಲಿ ಮಾತ್ರ ವ್ಯವಹರಿಸುವಂತೆ ಸರ್ಕಾರ ನಿರ್ದೇಶನ ನೀಡಿದೆ. ಆದರೂ ಕರದಾತರಿಗೆ ಅನುಕೂಲ ಕಲ್ಪಿಸಲು ಒಂದು ತಿಂಗಳ ಮಟ್ಟಿಗೆ ಗುಲಬರ್ಗಾ ಒನ್‌ ಕೇಂದ್ರಗಳಲ್ಲಿ ತೆರಿಗೆ ಸ್ವೀಕಾರದ ವ್ಯವಸ್ಥೆ ಮುಂದುವರಿಯಲಿದೆ. ಆ ನಂತರ ಪಾಲಿಕೆಯಲ್ಲಿನ ಬ್ಯಾಂಕ್‌ ಆಫ್‌ ಇಂಡಿಯಾ ಶಾಖೆಯಲ್ಲಿನ ಕೌಂಟರ್‌ ಸಹ ಬಂದ್‌ ಆಗಲಿದೆ. ಸರ್ಕಾರದ ನಿರ್ದೇಶನದಂತೆ ಐದು ಬ್ಯಾಂಕ್‌ಗಳ ಶಾಖೆಯಲ್ಲಿ ಕರ ಪಾವತಿಗೆ ವ್ಯವಸ್ಥೆ ಕಲ್ಪಿಸಲಾಗುವುದು’ ಎಂದು ಅವರು ಹೇಳಿದರು.

**

‘ಗುಲಬರ್ಗಾ ಒನ್‌’ ಇಲ್ಲವೆ ಬ್ಯಾಂಕ್‌ಗಳ ಶಾಖೆಗಳಲ್ಲಿ ಆಸ್ತಿ ಕರ ಪಾವತಿಗೆ ವ್ಯವಸ್ಥೆ ಕಲ್ಪಿಸಬೇಕು. ಈ ನಿಟ್ಟಿನಲ್ಲಿ ಮಹಾನಗರ ಪಾಲಿಕೆ ಕ್ರಮಕೈಗೊಳ್ಳಬೇಕು – ಕೆ.ಎಸ್‌. ಉದಯ ಶ್ರೀನಿವಾಸ,ನಿವೃತ್ತ ಬ್ಯಾಂಕ್‌ ಅಧಿಕಾರಿ.

**

‘ಗುಲಬರ್ಗಾ ಒನ್‌’ ಕೇಂದ್ರಗಳಲ್ಲಿಯೂ ಆಸ್ತಿ ಕರ ಪಾವತಿಗೆ ಮಂಗಳವಾರದಿಂದಲೇ ಅವಕಾಶ ಕಲ್ಪಿಸಲಾಗುವುದು. ಸಾರ್ವಜನಿಕರೂ ಅಲ್ಲಿಯೂ ಆಸ್ತಿಕರ ಪಾವತಿಸಬಹುದು –  ಆರ್‌.ಪಿ. ಜಾಧವ, ಉಪ ಆಯುಕ್ತ.

**

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT