ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೊಲೀಸ್‌ ಸಿಬ್ಬಂದಿಯಿಂದ ಅಪಘಾತ: ನ್ಯಾಯಕ್ಕೆ ಒತ್ತಾಯ

Last Updated 6 ನವೆಂಬರ್ 2019, 19:30 IST
ಅಕ್ಷರ ಗಾತ್ರ

ಮಂಡ್ಯ: ಪೊಲೀಸ್‌ ಕಾನ್‌ಸ್ಟೆಬಲ್‌ವೊಬ್ಬರು ವ್ಯಕ್ತಿಯೊಬ್ಬರಿಗೆ ಅಪಘಾತ ಮಾಡಿ ಪರಾರಿಯಾಗಿದ್ದಾರೆ. ಗಾಯಾಳುವಿಗೆ ನ್ಯಾಯ ಹಾಗೂ ಸೂಕ್ತ ಪರಿಹಾರ ಕೊಡಿಸಬೇಕು ಎಂದು ಆಗ್ರಹಿಸಿ ಬುಧವಾರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿ ಮುಂದೆ ಅಣ್ಣೂರು ಗ್ರಾಮದ ಪ್ರತಿಭಟನೆ ನಡೆಸಿದರು.

ಎಸ್‌ಪಿ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಮಹೇಶ್‌ ಎಂಬುವವರು 2019ರ ಮಾ.16ರಂದು ಅಣ್ಣೂರು ಗ್ರಾಮದ ಶಂಕರೇಗೌಡ ಎಂಬುವವರ ಬೈಕ್‌ಗೆ ಡಿಕ್ಕಿ ಹೊಡೆದು ಅಪಘಾತ ಎಸಗಿದ್ದಾರೆ. ಈ ಕುರಿತು ಭಾರತೀನಗರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ. ಶಂಕರೇಗೌಡರ ಬಳಿ ಡಿಎಲ್‌, ಇನ್ಶೂರೆನ್ಸ್‌ ಇಲ್ಲ ಎಂಬುದನ್ನೇ ಬಂಡವಾಳ ಮಾಡಿಕೊಂಡು ಅನ್ಯಾಯ ಎಸಗುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಶಂಕರೇಗೌಡರು ತಮ್ಮ ಮೊಮ್ಮಕ್ಕಳನ್ನು ಶಾಲೆಗೆ ಬಿಟ್ಟು ಹಲಗೂರು ರಸ್ತೆಯಲ್ಲಿ ವಾಪಾಸ್‌ ಬೈಕ್‌ನಲ್ಲಿ ಬರುತ್ತಿದ್ದಾಗ ಇನ್ನೊಂದು ಬೈಕ್‌ನಲ್ಲಿ ಬರುತ್ತಿದ್ದ ಮಹೇಶ್‌ ಕೆಇಬಿ ಕಚೇರಿ ಹತ್ತಿರ ಡಿಕ್ಕಿ ಹೊಡೆದು ಪರಾರಿಯಾಗಿದ್ದಾರೆ. ಅಪಘಾತದಿಂದ ತೀವ್ರ ಪೆಟ್ಟುಗಳಾಗಿದ್ದು, ಈಗಾಗಲೇ ಚಿಕಿತ್ಸೆಗಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡಲಾಗಿದೆ. ಆಸ್ಪತ್ರೆಗೆ ದಾಖಲಿಸದೆ ಅಮಾನವೀಯತೆ ಮೆರೆದು ಶಂಕರೇಗೌಡರ ವಿರುದ್ಧವೇ ದೂರು ದಾಖಲಿಸಿ ಉದ್ಧಟತನ ಪ್ರದರ್ಶಿಸಿದ್ದಾರೆ ಎಂದು ದೂರಿದರು.

ಶಂಕರೇಗೌಡರಿಗೆ 60ವರ್ಷ ವಯಸ್ಸಾಗಿದ್ದು ವೃದ್ಧನ ವಿರುದ್ಧ ಮಹೇಶ್‌ ದಬ್ಬಾಳಿಕೆ ನಡೆಸುತ್ತಿದ್ದಾರೆ. ಇವರ ವಿರುದ್ಧ ದೂರು ದಾಖಲಿಸಿ ಕ್ರಮ ತೆಗೆದುಕೊಳ್ಳಬೇಕು. ಕಾನೂನು ರಕ್ಷಿಸಬೇಕಾದ ಪೊಲೀಸರೇ ತಮ್ಮ ಇಲಾಖೆಯ ಸಿಬ್ಬಂದಿ ತಪ್ಪನ್ನು ಮುಚ್ಚಿಕೊಳ್ಳಲು ಮುಂದಾಗಿದ್ದಾರೆ. ಸಮಾಜಕ್ಕೆ ತಪ್ಪು ಸಂದೇಶ ರವಾನಿಸಿದಂತಾಗಿದೆ. ಸಿಬ್ಬಂದಿ ಎನ್ನುವ ಕಾರಣಕ್ಕೆ ಅವರನ್ನು ರಕ್ಷಿಸುವ ಬದಲು ಸೂಕ್ತ ತನಿಖೆ ನಡೆಸಿ ಸತ್ಯಾಸತ್ಯತೆ ಪರಿಶೀಲನೆ ನಡೆಸಿ ನ್ಯಾಯ ಒದಗಿಸಿ ಪರಿಹಾರ ಕೊಡಿಸಬೇಕು ಎಂದು ಆಗ್ರಹಿಸಿದರು.

ಮನವಿ ಸ್ವೀಕರಿಸಿದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಪರಶುರಾಮ, ಇನ್ನೊಂದು ವಾರದಲ್ಲಿ ತನಿಖೆ ನಡೆಸಿ ಸಮಸ್ಯೆ ಬಗೆಹರಿಸಲಾಗುವುದು ಎಂದು ಭರವಸೆ ನೀಡಿದರು.

‌ಶ್ರುತಿ, ಭಾರತಿ, ಗೀತಾ, ಪ್ರೇಮಮ್ಮ, ಸುನಂದಮ್ಮ, ಸಿದ್ದೇಗೌಡ, ಶಿವರಾಂ, ಚಂದ್ರು, ಬೋರಾಪುರ ಶಂಕರೇಗೌಡ, ಮಂಜೇಗೌಡ, ರಾಜಣ್ಣ, ಇಂಡುವಾಳು ಬಸವರಾಜು ಇದ್ದರು. ಇದಕ್ಕೂ ಮುನ್ನ ಶಂಕರೇಗೌಡರ ಸಹೋದರ ರಾಜಣ್ಣ ಅವರು ಪತ್ರಿಕಾಗೋಷ್ಠಿ ನಡಸಿ ಸೂಕ್ತ ನ್ಯಾಯ ಒದಗಿಸುವಂತೆ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT