ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

21 ಮಕ್ಕಳ ದತ್ತಕ ಪಕ್ರಿಯೆ ಪೂರ್ಣ: ಡಾ.ಎಚ್‌.ಎನ್‌.ಗೋಪಾಲಕೃಷ್ಣ

ಅನಾಥ ಭಾವ ಕಳಚಿ ಪೋಷಕರ ಮಡಿಲು ಸೇರಿದ ಜಿಲ್ಲೆಯ ಬಾಲಕ, ಬಾಲಕಿಯರು
Last Updated 3 ಫೆಬ್ರುವರಿ 2023, 14:12 IST
ಅಕ್ಷರ ಗಾತ್ರ

ಮಂಡ್ಯ: ಕಳೆದೆರಡು ವರ್ಷಗಳಿಂದ ಜಿಲ್ಲೆಯ ವಿವಿಧೆಡೆ ಅನಾಥರಾಗಿದ್ದ, ಪರಿತ್ಯಕ್ತಗೊಂಡಿದ್ದ, ಸಿಕ್ಕಿದ್ದ 21 ಮಕ್ಕಳ ದತ್ತಕ ಪ್ರಕ್ರಿಯೆಯನ್ನು ಜಿಲ್ಲಾ ದಂಡಾಧಿಕಾರಿಯೂ ಆದ ಜಿಲ್ಲಾಧಿಕಾರಿ ಪೂರ್ಣಗೊಳಿಸಿದ್ದಾರೆ. ಆ ಮೂಲಕ ‘ಅನಾಥ’ ಭಾವ ಕಳಚಿಕೊಂಡ ಬಾಲಕ– ಬಾಲಕಿಯರು ಪೋಷಕರ ಮಡಿಲ ಸೇರಿದ್ದಾರೆ.

2022 ನವೆಂಬರ್‌ 7ರಂದು 10 ಮಕ್ಕಳನ್ನು ದತ್ತು ನೀಡಲಾಗಿತ್ತು, ಫೆ.3ರಂದು ಜಿಲ್ಲಾಧಿಕಾರಿ ಡಾ.ಎಚ್‌.ಎನ್‌.ಗೋಪಾಲಕೃಷ್ಣ ಅವರು ಮತ್ತೆ 10 ಮಕ್ಕಳ ದತ್ತಕ ಪತ್ರಿಕೆ ಪೂರ್ಣಗೊಳಿಸಿದ್ದಾರೆ. ಒಟ್ಟು ಜಿಲ್ಲೆಯಲ್ಲಿ 21 ಮಕ್ಕಳನ್ನು ದತ್ತು ನೀಡಿದಂತಾಗಿದೆ. ಬಾಲನ್ಯಾಯ ಕಾಯ್ದೆಯ ತಿದ್ದುಪಡಿ ನಂತರ ಅತ್ಯಂತ ಶೀಘ್ರಗತಿಯಲ್ಲಿ ದತ್ತು ಪ್ರಕ್ರಿಯೆ ಪೂರ್ಣಗೊಳಿಸಲಾಗಿದ್ದು ಮಕ್ಕಳನ್ನು ಪೋಷಕರ ಸುಪರ್ದಿಗೆ ನೀಡಲಾಗಿದೆ.

ಸರ್ಕಾರದ ಅನುದಾನದಲ್ಲಿ ನಡೆಯುತ್ತಿರುವ ದತ್ತು ಸಂಸ್ಥೆಗಳ ಪೋಷಣೆಯಲ್ಲಿದ್ದ ಮಕ್ಕಳನ್ನು ಪೋಷಕರ ಇಚ್ಛೆಯಂತೆ ಅವರ ಸುಪರ್ದಿಗೆ ಒಪ್ಪಿಸಿ ಆದೇಶ ಹೊರಡಿಸಲಾಗಿದೆ. ಕೇಂದ್ರ ಸರ್ಕಾರದ ಕೇಂದ್ರೀಯ ದತ್ತು ಸ್ವೀಕಾರ ಪ್ರಾಧಿಕಾರದ (ಸಿಎಆರ್‌ಎ) ಮಾರ್ಗಸೂಚಿ ಅನ್ವಯ ಮಕ್ಕಳನ್ನು ದತ್ತು ಪಡೆಯಲು ಸಲ್ಲಿಸಿದ್ದ ಅರ್ಜಿಗಳ ಜೇಷ್ಠತೆ ಆಧಾರದ ಮೇಲೆ ದತ್ತಕ ಪ್ರಕ್ರಿಯೆ ಪೂರ್ಣಗೊಳಿಸಲಾಗಿದೆ.

2021ಕ್ಕೂ ಮೊದಲು ಮಕ್ಕಳ ದತ್ತಕ ಪ್ರಕ್ರಿಯೆಯನ್ನು ಜಿಲ್ಲಾ ಸಿವಿಲ್‌ ನ್ಯಾಯಾಲಯ ನಿರ್ವಹಣೆ ಮಾಡುತ್ತಿತ್ತು. ದೇಶದಾದ್ಯಂತ ಸಲ್ಲಿಕೆಯಾಗುತ್ತಿದ್ದ ಅರ್ಜಿಗಳ ಸಂಖ್ಯೆ ಹೆಚ್ಚುತ್ತಿದ್ದ ಹಿನ್ನೆಲೆಯಲ್ಲಿ ಬಾಲನ್ಯಾಯ ಕಾಯ್ದೆಗೆ 2021ರಲ್ಲಿ ತಿದ್ದುಪಡಿ ತಂದು ದತ್ತಕ ನಿರ್ವಹಣಾ ಜವಾಬ್ದಾರಿಯನ್ನು ಜಿಲ್ಲಾ ದಂಡಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿಗೆ ವಹಿಸಲಾಗಿದೆ. ಕಾಯ್ದೆಗೆ ತಿದ್ದುಪಡಿ ತಂದ ನಂತರ ಜಿಲ್ಲೆಯಲ್ಲಿ 21 ಮಕ್ಕಳ ದತ್ತು ಪಕ್ರಿಯೆ ಪೂರ್ಣಗೊಳಿಸಲಾಗಿದೆ.

ದತ್ತಕ ಪ್ರಕ್ರಿಯೆ ಹೇಗೆ ನಡೆಯುತ್ತದೆ?: ತಂದೆ–ತಾಯಿಯಿಂದ ತ್ಯಜಿಸಲ್ಪಟ್ಟ ಮಕ್ಕಳು, ಸಾಕಲಾರದೆ ತಂದೆ ತಾಯಿಯೇ ಸರ್ಕಾರಕ್ಕೆ ಒಪ್ಪಿಸಿದ ಮಕ್ಕಳು, ಅನಾಥವಾಗಿ ಸಿಕ್ಕ ಮಕ್ಕಳನ್ನು ಮಕ್ಕಳು ಮತ್ತು ಮಹಿಳಾ ಅಭಿವೃದ್ಧಿ ಇಲಾಖೆ ಅಡಿ ಬರುವ ಬಾಲಮಂದಿರಗಳಲ್ಲಿ ರಕ್ಷಣೆ ಮಾಡಲಾಗುತ್ತದೆ. ಈ ಕುರಿತು ವಿಚಾರಣೆ ನಡೆಸುವ ಮಕ್ಕಳ ಕಲ್ಯಾಣ ಸಮಿತಿ (ಸಿಡಬ್ಲ್ಯುಸಿ) 60 ದಿನದೊಳಗೆ ಮಕ್ಕಳ ಆಶ್ರಯದ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳುತ್ತದೆ.

ದತ್ತು ಪಕ್ರಿಯೆ ಪೂರ್ಣಗೊಳ್ಳುವವರೆಗೂ ಸರ್ಕಾರದ ಅನುದಾನದಲ್ಲಿ ನಡೆಯುವ ದತ್ತು ಸಂಸ್ಥೆಗಳಲ್ಲಿ ಆಶ್ರಯ ಒದಗಿಸಲಾಗಿರುತ್ತದೆ. ಕೇಂದ್ರೀಯ ದತ್ತು ಸ್ವೀಕಾರ ಪ್ರಾಧಿಕಾರದ ಅಧಿಕೃತ ವೆಬ್‌ಸೈಟ್‌ (www.cara,nic.in)ನಲ್ಲಿ ಅರ್ಜಿ ಸಲ್ಲಿಸಿದ ದತ್ತು ಆಕಾಂಕ್ಷಿಗಳ ಮಾಹಿತಿ ಪಡೆ ದತ್ತಕ ಪ್ರಕ್ರಿಯೆ ಆರಂಭಿಸಲಾಗುತ್ತದೆ.

ದತ್ತು ಪಡೆಯಲು ಇಚ್ಛಿಸುವ ಪೋಷಕರ ಅರ್ಹತೆ, ವಯಸ್ಸು, ಆರ್ಥಿಕ ಸ್ಥಿತಿ ಹಾಗೂ ಇನ್ನಿತರ ಮಾಹಿತಿಯನ್ನು ಸಮಗ್ರ ಅಧ್ಯಯನ ಮಾಡಲಾಗುತ್ತದೆ. ದತ್ತು ಪಡೆಯಲಿಚ್ಛಿಸುವ ಪತಿ–ಪತ್ನಿ ವಯಸ್ಸು ಕೂಡಿಸಿದಾಗ 85ರೊಳಗಿದ್ದರೆ 2 ವರ್ಷದೊಳಗಿನ ಮಗು ದತ್ತು ಪಡೆಯಲು ಅರ್ಹರು, 90 ವರ್ಷದೊಳಗಿದ್ದರೆ 2–4 ವರ್ಷದ ಮಗು, 100ರೊಳಗಿದ್ದರೆ 4–8 ವರ್ಷದ ಮಗುವನ್ನು ದತ್ತು ಪಡೆಯಲು ಅರ್ಹರಾಗಿರುತ್ತಾರೆ.

‘ಮಕ್ಕಳಿಗೆ ಆಶ್ರಯ ನೀಡಿರುವ ದತ್ತು ಸಂಸ್ಥೆಯ ಸಿಬ್ಬಂದಿ ಹಾಗೂ ಜಿಲ್ಲಾ ಮಟ್ಟದಲ್ಲಿರುವ ದತ್ತು ಸಮಿತಿ ಸದಸ್ಯರು ಅರ್ಜಿದಾರರ ಸಮಗ್ರ ಅಧ್ಯಯನ ನಡೆಸಿ ವರದಿ ನೀಡುತ್ತಾರೆ. ಆ ವರದಿ ಆಧರಿಸಿ ದತ್ತು ಪೂರ್ವ ಪೋಷಣೆಗೂ ಅವಕಾಶ ನೀಡಲಾಗಿರುತ್ತದೆ. ನಂತರ ಎಲ್ಲಾ ಪಕ್ರಿಯೆ ಪೂರ್ಣಗೊಂಡ ನಂತರ ಅಧಿಕೃತವಾಗಿ ನೋಂದಣಿ ಮೂಲಕ ಮಕ್ಕಳನ್ನು ಪೋಷಕರ ವಶಕ್ಕೆ ನೀಡಲಾಗುತ್ತದೆ’ ಎಂದು ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದರು.

ಸಹಜೀವನ ಜೋಡಿಗೆ ಅವಕಾಶವಿಲ್ಲ: ಮಕ್ಕಳಿಲ್ಲದ ದಂಪತಿ ದತ್ತು ಪಡೆಯಬಹುದು. ಮಕ್ಕಳಿದ್ದರೂ ಆರೋಗ್ಯವಂತ ದಂಪತಿ ಇಚ್ಛಿಸಿದರೆ ದತ್ತು ಪಡೆಯಲು ಅರ್ಹರಾಗಿರುತ್ತಾರೆ. ಅವಿವಾಹಿತೆ, ವಿಧವೆ, ವಿಚ್ಛೇದಿತ ಮಹಿಳೆ ಗುಂಡು ಅಥವಾ ಹೆಣ್ಣು ಮಗುವನ್ನು ದತ್ತು ಪಡೆಯಬಹುದು. ವಿಧುರ, ಅವಿವಾಹಿತ, ವಿಚ್ಛೇದನ ಪಡೆದ ವ್ಯಕ್ತಿ ಗುಂಡು ಮಗುವನ್ನು ಮಾತ್ರ ದತ್ತು ಪಡೆಯಬಹುದು. ಸಹ ಜೀವನ ಸಂಬಂಧದಲ್ಲಿ ಇರುವ ಜೋಡಿ (ಲಿವ್‌–ಇನ್‌ ರಿಲೇಷನ್‌) ಮಗುವನ್ನು ದತ್ತು ಪಡೆಯಲು ಅವಕಾಶ ಇಲ್ಲ.

**
ಅನಧಿಕೃತವಾಗಿ ಮಕ್ಕಳನ್ನು ಸಾಕುವುದು ಶಿಕ್ಷಾರ್ಹ ಅಪರಾಧವಾಗಿರುತ್ತದೆ. ಬಾಲ ನ್ಯಾಯ ಕಾಯ್ದೆಯ ಅನುಸಾರ ದಂಪತಿಗಳು ದತ್ತು ಪಡೆಯುವುದು ಕಡ್ಡಾಯ.
–ಡಾ.ಎಚ್‌.ಎನ್‌.ಗೋಪಾಲಕೃಷ್ಣ, ಜಿಲ್ಲಾ ದಂಡಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT