ಅಲ್ಲಾಪಟ್ಟಣ: ಕುಡಿಯುವ ನೀರಿಗೆ ಹಾಹಾಕಾರ!

6

ಅಲ್ಲಾಪಟ್ಟಣ: ಕುಡಿಯುವ ನೀರಿಗೆ ಹಾಹಾಕಾರ!

Published:
Updated:

ಶ್ರೀರಂಗಪಟ್ಟಣ: ತಾಲ್ಲೂಕಿನ ಅಲ್ಲಾಪಟ್ಟಣ ಗ್ರಾಮದಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದ್ದು, ಮಹಿಳೆಯರು ಮತ್ತು ಮಕ್ಕಳು ತೋಟಗಳಿಂದ ನೀರು ಹೊತ್ತು ತರುತ್ತಿದ್ದಾರೆ.

ಗ್ರಾಮದಲ್ಲಿ ವಾರಕ್ಕೆ ಒಮ್ಮೆ ನಲ್ಲಿಗಳ ಮೂಲಕ ನೀರು ಬಿಡುತ್ತಿದ್ದು ಕುಡಿಯುವ ನೀರಿಗೆ ತತ್ವಾರ ಉಂಟಾಗಿದೆ. ಇನ್ನು ಬಟ್ಟೆ, ಪಾತ್ರೆ ತೊಳೆಯಲು ಜನರು ಪರದಾಡುತ್ತಿದ್ದಾರೆ. ದನ ಕರುಗಳಿಗೆ ಕುಡಿಯಲು ನೀರಿಗೆ ತೊಂದರೆಯಾಗಿದೆ. ಒಂದೂವರೆ ವರ್ಷದಿಂದ ಸರಿಯಾಗಿ ಕುಡಿಯುವ ನೀರು ಕೊಡುತ್ತಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.

‘ಗ್ರಾಮದಲ್ಲಿ 4 ಕೊಳವೆ ಬಾವಿಗಳಿದ್ದು ಮೂರು ಕೆಟ್ಟಿವೆ. ಒಂದರಲ್ಲಿ ಅಲ್ಪಸ್ವಲ್ಪ ನೀರು ಜಿನುಗುತ್ತದೆ. ಹಾಗಾಗಿ ಕೊಳವೆ ಬಾವಿಗಳು ಇದ್ದರೂ ಪ್ರಯೋಜನ ಇಲ್ಲವಾಗಿದೆ. ದೊಡ್ಡ ಟ್ಯಾಂಕ್‌ನಿಂದ ನಲ್ಲಿಗಳ ಮೂಲಕ ಅಪರೂಪಕ್ಕೆ ಬರುವ ನೀರು ಮೂರು ಬೀದಿಗಳಿಗೆ ಮಾತ್ರ ಹರಿಯುತ್ತಿದೆ. ಇತರ ಬೀದಿಗಳ ಜನರಿಗೆ ಕನಿಷ್ಠ ಒಂದು ಬಿಂದಿಗೆ ನೀರೂ ಸಿಗುತ್ತಿಲ್ಲ. ರೈತರ ಕೊಳವೆ ಬಾವಿಗಳಿಂದ ನೀರು ಹೊತ್ತು ತಂದು ಕುಡಿಯುತ್ತಿದ್ದೇವೆ. ಲಭ್ಯ ಇರುವ ನೀರನ್ನು ನಲ್ಲಿಗಳಿಗೆ ಸಮರ್ಪಕವಾಗಿ ಹರಿಸುವಲ್ಲಿ ವಾಟರ್‌ಮನ್‌ ವಿಫಲರಾಗಿದ್ದಾರೆ. ಕೇಳಿದವರಿಗೆ ಹಾರಿಕೆ ಉತ್ತರ ನೀಡುತ್ತಾರೆ’ ಎಂದು ಗ್ರಾಮದ ಶ್ರೀಕಂಠು, ಕುಮಾರ್‌ ಹೇಳಿದ್ದಾರೆ.

‘ಅಲ್ಲಾಪಟ್ಟಣದಲ್ಲಿ ಒಂದೂವರೆ ವರ್ಷದಿಂದ ಕುಡಿಯುವ ನೀರಿನ ಸಮಸ್ಯೆ ಇದೆ. ನೀರು ಕೊಡುವಂತೆ ಶಾಸಕ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದೇವೆ. ಆದರೆ ಯಾರೊಬ್ಬರೂ ನಮ್ಮ ಸಮಸ್ಯೆ ಕೇಳುತ್ತಿಲ್ಲ. ಇನ್ನು ಮೂರು ದಿನಗಳ ಒಳಗೆ ನಮಗೆ ಕುಡಿಯಲು ಸಮರ್ಪಕವಾಗಿ ನೀರು ಕೊಡದಿದ್ದರೆ ತಾಲ್ಲೂಕು ಕಚೇರಿ ಎದುರು ಧರಣಿ ಕೂರುತ್ತೇವೆ’ ಎಂದು ಅವರು ಎಚ್ಚರಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಮುಂಡುಗದೊರೆ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಮನೋಹರ್‌, ‘ಅಲ್ಲಾಪಟ್ಟಣ ಗ್ರಾಮದ ತಗ್ಗು ಪ್ರದೇಶಗಳಲ್ಲಿರುವ ಮನೆಗಳಿಗೆ ನೀರು ತಲುಪುತ್ತಿಲ್ಲ ಎಂದು ಗ್ರಾಮಸ್ಥರು ದೂರು ತರುತ್ತಿದ್ದಾರೆ. ಕೆಲವು ಮನೆಗಳ ಮುಂದೆ ಆಳವಾದ ಗುಂಡಿ ತೆಗೆದಿರುವುದರಿಂದ ನೀರು ಪೋಲಾಗುತ್ತಿದೆ. ಗುಂಡಿಗಳನ್ನು ಮುಚ್ಚಿಸಿ ನೀರು ಪೋಲಾಗದಂತೆ ವಾಲ್ವ್‌ಗಳನ್ನು ಅಳವಡಿಸಲಾಗುವುದು. ಸರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲ ಎಂಬ ದೂರುಗಳ ಹಿನ್ನೆಲೆಯಲ್ಲಿ ವಾಟರ್‌ಮನ್‌ಗೆ ನೋಟಿಸ್‌ ನೀಡಲಾಗಿದೆ’ ಎಂದು ಹೇಳಿದ್ದಾರೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !