ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡ್ಯ: ಪ್ರಧಾನಿ ಮೋದಿ ಸ್ವಾಗತಕ್ಕೆ ಸಕಲ ಸಿದ್ಧತೆ

ಮದ್ದೂರು ತಾಲ್ಲೂಕು ಗೆಜ್ಜಲಗೆರೆ ಕಾಲೊನಿಯಲ್ಲಿ ವಿಶಾಲ ಮೈದಾನ ಸಿದ್ಧ, ಹೆಲಿಪ್ಯಾಡ್‌ ನಿರ್ಮಾಣ
Last Updated 4 ಮಾರ್ಚ್ 2023, 13:10 IST
ಅಕ್ಷರ ಗಾತ್ರ

ಮಂಡ್ಯ: ಬೆಂಗಳೂರು– ಮೈಸೂರು ದಶಪಥ ಕಾಮಗಾರಿ ಉದ್ಘಾಟನೆಗೆ ಮಾರ್ಚ್‌ 12ರಂದು ಆಗಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸ್ವಾಗತಿಸಲು ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದೆ.

ಕಾಮಗಾರಿ ಚಾಲನೆ ನಂತರ ಗೆಜ್ಜಲಗೆರೆ ಕಾಲೊನಿ ಸಮೀಪ ಸಮಾವೇಶ ನಡೆಯಲಿದ್ದು ಸಮರೋಪಾದಿಯಲ್ಲಿ ತಯಾರಿ ನಡೆಸಲಾಗುತ್ತಿದೆ. ಕಾಲೊನಿ ಬಳಿ ಇರುವ 20 ಎಕರೆಯಷ್ಟು ವಿಶಾಲವಾದ ಜಾಗವನ್ನು ಸಮತಟ್ಟು ಮಾಡಲಾಗುತ್ತಿದೆ. ಜಿಲ್ಲಾಡಳಿತ, ಮದ್ದೂರು ತಾಲ್ಲೂಕು ಆಡಳಿತದ ವತಿಯಿಂದ ಮೈದಾನದಲ್ಲಿ ಬೆಳೆದು ನಿಂತಿದ್ದ ಗಿಡಗಂಟಿ ತೆರವುಗೊಳಿಸಲಾಗುತ್ತಿದೆ.

ಆ ಪ್ರದೇಶದಲ್ಲಿ ನಿವೇಶನ ಹಂಚಿಕೆ ಮಾಡಲಾಗಿದ್ದು ಕಲ್ಲು ನೆಡಲಾಗಿತ್ತು. ತಾಲ್ಲೂಕು ಆಡಳಿತ ನಿವೇಶನ ಮಾಲೀಕರ ಮನವೊಲಿಸಿದ್ದು ಕಾರ್ಯಕ್ರಮ ಮುಗಿದ ನಂತರ ಮೊದಲಿನಂತೆಯೇ ಅಳತೆ ಮಾಡಿ ಕಲ್ಲು ನೆಟ್ಟು ಕೊಡಲಾಗುವುದು ಎಂದು ಭರವಸೆ ನೀಡಿದ್ದಾರೆ. ಗುಂಡಿಗಳನ್ನು ಮುಚ್ಚಿ ಮಟ್ಟಮಾಡುವ ಕಾರ್ಯ ಭರದಿಂದ ಸಾಗಿದೆ. ಜೆಸಿಬಿ, ಟ್ರ್ಯಾಕ್ಟರ್‌ಗಳು ನಿರಂತರವಾಗಿ ಕೆಲಸ ಮಾಡುತ್ತಿವೆ.

ವೇದಿಕೆ ಕಾರ್ಯಕ್ರಮ ಮಾತ್ರವಲ್ಲದೇ ವಾಹನಗಳ ನಿಲುಗಡೆಗೆ ಹೆದ್ದಾರಿ ಸಮೀಪದಲ್ಲೇ ಇರುವ 100 ಎಕರೆ ಜಾಗವನ್ನು ಗುರುತಿಸಲಾಗಿದೆ. ಅದರ ಸ್ವಚ್ಛತೆ, ಸಮತಟ್ಟು ಕಾರ್ಯ ಭಾನುವಾರದಿಂದ ಆರಂಭವಾಗಲಿದೆ. ವಾಹನಗಳ ಪಾರ್ಕಿಂಗ್‌ ಹಾಗೂ ಕಾರ್ಯಕ್ರಮಕ್ಕೆ ಬರುವ ಜನರಿಗೆ ಊಟದ ವ್ಯವಸ್ಥೆಯನ್ನು ಒಂದೇ ಕಡೆ ವ್ಯವಸ್ಥೆ ಮಾಡಲಾಗುತ್ತಿದೆ.

ಗೆಜ್ಜಲಗೆರೆಯಲ್ಲಿರುವ ಕಾಫಿ ಡೇ ಸಮೀಪದ ಜಾಗದಲ್ಲಿ ಹೆಲಿಪ್ಯಾಡ್‌ ನಿರ್ಮಾಣ ಕಾರ್ಯ ಕೂಡ ಸಾಗುತ್ತಿದ್ದು ಪ್ರಧಾನಿ ಅಲ್ಲಿಗೆ ಬಂದಿಳಿಯಲಿದ್ದಾರೆ. ಮೆರವಣಿಗೆ ಮೂಲಕ ಸಮೀಪದಲ್ಲೇ ಇರುವ ವೇದಿಕೆಗೆ ಬರಲಿದ್ದಾರೆ. ಹೆಲಿಪ್ಯಾಡ್‌ನಿಂದ ವೇದಿಕೆವರಿಗನ ರಸ್ತೆಯ ದುರಸ್ತಿ, ಡಾಂಬರೀಕರಣ ಕಾರ್ಯ ಸಮರೋಪಾದಿಯಲ್ಲಿ ನಡೆಯುತ್ತಿದೆ.

ಅಧಿಕಾರಿಗಳ ಸಭೆ: ಪ್ರಧಾನಿ ಕಾರ್ಯಕ್ರಮದ ಅಂಗವಾಗಿ ಜಿಲ್ಲಾಧಿಕಾರಿ ಡಾ.ಎಚ್‌.ಎನ್‌.ಗೋಪಾಲಕೃಷ್ಣ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಅಧಿಕಾರಿಗಳ ಸಭೆ ನಡೆಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ‘ಕಾರ್ಯಕ್ರಮದಲ್ಲಿ ಯಾವುದೇ ಲೋಪ ಉಂಟಾಗದಂತೆ ಅಚ್ಚುಕಟ್ಟಾಗಿ ನಿರ್ವಹಣೆ ಮಾಡಬೇಕು. ವಿವಿಧ ಇಲಾಖೆಗಳ ಅಧಿಕಾರಿಗಳನ್ನೊಳಗೊಂಡ ಸಮಿತಿ ರಚನೆ ಮಾಡಬೇಕು. ದಶಪಥ ಹೆದ್ದಾರಿಯ ಒಂದು ಭಾಗದಲ್ಲಿ ಸಾಂಕೇತಿಕವಾಗಿ ಉದ್ಘಾಟನೆ ನಡೆಯಲಿದೆ. ನಂತರ ಅವರು ನೇರವಾಗಿ ವೇದಿಕೆಗೆ ಬರಲಿದ್ದಾರೆ’ ಎಂದರು.

‘ವೇದಿಕೆ ಕಾರ್ಯಕ್ರಮದಲ್ಲಿ 1 ಲಕ್ಷಕ್ಕೂ ಹೆಚ್ಚು ಜನರು ಭಾಗವಹಿಸಲಿದ್ದಾರೆ. ವಾಹನ ನಿಲುಗಡೆ, ಕುಡಿಯುವ ನೀರು, ತಾತ್ಕಾಲಿಕ ‌ಶೌಚಾಲಯದ ವ್ಯವಸ್ಥೆಗಳಾಗಬೇಕು. ಆಂಬುಲೆನ್ಸ್‌, ವೈದ್ಯಕೀಯ ತಂಡ ಸಿದ್ಧವಿರಬೇಕು. ಪ್ರಧಾನಿ ಬರುವ ಮಾರ್ಗದಲ್ಲಿ ಭದ್ರತೆಗಾಗಿ ಬ್ಯಾರಿಕ್ಯಾಡ್‌ ವ್ಯವಸ್ಥೆ ಆಗಬೇಕು’ ಎಂದರು.

‘ನಾಡಗೀತೆ, ರಾಷ್ಟ್ರಗೀತೆ ಹಾಡಲು ನುರಿತ ಕಲಾವಿದರನ್ನು ಆಯ್ಕೆ ಮಾಡಿ ತರಬೇತಿ ನೀಡಬೇಕು. ದಶಪಥ ಹೆದ್ದಾರಿ ಉದ್ಘಾಟನಾ ಸ್ಥಳದಲ್ಲಿ ವಿವಿಧ ಕಲಾತಂಡಗಳ ಪ್ರದರ್ಶನ ಆಯೋಜಿಸಬೇಕು‌’ ಎಂದು ಅಧಿಕಾರಿಗಳೀಗೆ ಸೂಚಿಸಿದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎನ್‌.ಯತೀಶ್‌, ಜಿ.ಪಂ ಸಿಇಒ ಶಾಲಾ ಎಲ್ ಹುಲ್ಮನಿ , ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಎಚ್.ಎಲ್ ನಾಗರಾಜು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಶ್ರೀಧರ್, ಉಪವಿಭಾಗಾಧಿಕಾರಿ ‌ಕೀರ್ತನಾ ಇದ್ದರು.

***

ರೋಡ್‌ ಶೋ: 2 ದಿನದಲ್ಲಿ ನಿರ್ಧಾರ

ರಾಮನಗರ ಜಿಲ್ಲೆ ಹಾಗೂ ಮಂಡ್ಯ ಜಿಲ್ಲಾ ವ್ಯಾಪ್ತಿಯ ಎಕ್ಸ್‌ಪ್ರೆಸ್‌ವೇಯಲ್ಲಿ ಪ್ರಧಾನಿ ರೋಡ್‌ ಶೋ ನಡೆಸುವ ಸಾಧ್ಯತೆ ಇದೆ ಎಂದು ಬಿಜೆಪಿ ಮುಖಂಡರು ತಿಳಿಸಿದ್ದಾರೆ. ಆದರೆ, ರಾಜ್ಯ ಗೃಹ ಇಲಾಖೆ ಈ ಬಗ್ಗೆ ಅಂತಿಮ ನಿರ್ಧಾರ ಪ್ರಕಟಿಸಿಲ್ಲ.

ಪ್ರಧಾನಿ ಭದ್ರತಾ ತಂಡ ಹಾಗೂ ರಾಜ್ಯ ಗೃಹ ಇಲಾಖೆ ಈ ಬಗ್ಗೆ ಸಮಾಲೋಚನೆ ನಡೆಸುತ್ತಿದ್ದು ಇನ್ನೆರಡು ದಿನದಲ್ಲಿ ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ಸ್ಥಳೀಯವಾಗಿ ಪ್ರಧಾನಿ ಕಾರ್ಯಕ್ರಮಕ್ಕೆ 2 ಸಾವಿರಕ್ಕೂ ಹೆಚ್ಚು ಪೊಲೀಸ್‌ ಸಿಬ್ಬಂದಿಯನ್ನು ಭದ್ರತೆಯಲ್ಲಿ ನಿಯೋಜಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT