ಭಾನುವಾರ, 1 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಚ್‌ಡಿಕೆ ವಿರುದ್ಧ ಏಕವಚನ| ಹತ್ತಿದ ಏಣಿ ಮರೆತ ಚಲುವರಾಯಸ್ವಾಮಿ: ಆರೋಪ

Published 8 ಜುಲೈ 2023, 14:55 IST
Last Updated 8 ಜುಲೈ 2023, 14:55 IST
ಅಕ್ಷರ ಗಾತ್ರ

ಮದ್ದೂರು: ‘ಕೃಷಿ ಸಚಿವ ಚಲುವರಾಯಸ್ವಾಮಿ ಅವರು ಅಧಿವೇಶನದಲ್ಲಿ ಎಚ್.ಡಿ. ಕುಮಾರಸ್ವಾಮಿ ಅವರನ್ನು ಏಕವಚನದಲ್ಲಿ ಮಾತನಾಡುವ ಮೂಲಕ ಹತ್ತಿದ ಏಣಿಯನ್ನು ಮರೆತು ವರ್ತಿಸುತ್ತಿದ್ದಾರೆ’ ಎಂದು ಜಿಲ್ಲಾ ಜೆಡಿಎಸ್ ಉಪಾಧ್ಯಕ್ಷ ಬಿದರ ಕೋಟೆ ಕುಶ ಆರೋಪಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ರವರು ವಿಧಾನ ಸಭಾ ಚುನಾವಣೆಯಲ್ಲಿ ಗೆದ್ದ ಬಳಿಕ ಜಾತ್ಯತೀತ ಜನತಾದಳದ ವಿರುದ್ಧ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.

‘ಚುನಾವಣೆಯಲ್ಲಿ ಗೆದ್ದ 2 ತಿಂಗಳಲ್ಲಿಯೇ ನಾಗಮಂಗಲ ವಿಧಾನಸಭಾ ಕ್ಷೇತ್ರದಲ್ಲಿ ದ್ವೇಷದ ರಾಜಕಾರಣಕ್ಕೆ ಸಚಿವರು ಮುಂದಾಗಿದ್ದಾರೆಂದು ಆರೋಪಿಸಿದ ಅವರು, ನಾಗಮಂಗಲ ಘಟಕದ ಸಾರಿಗೆ ಸಂಸ್ಥೆ ನಿರ್ವಾಹಕ ಜಗದೀಶ್ ಅವರನ್ನು ಬೇರೆ ಕಡೆಗೆ ವರ್ಗಾವಣೆ ಮಾಡಿದ್ದು ರಾಜಕೀಯ ದ್ವೇಷವಲ್ಲವೇ’ ಎಂದು ಪ್ರಶ್ನಿಸಿದರು.

‘ಅಸ್ವಸ್ಥಗೊಂಡ ಜಗದೀಶ್ ಅವರನ್ನು ಮೈಸೂರಿನ ಆಸ್ಪತ್ರೆಗೆ ಸ್ಥಳಾಂತರ ಮಾಡಲು ಮಾಜಿ ಶಾಸಕ ಸುರೇಶ್ ಗೌಡ ತಡೆದರು ಎಂದು ಅಪಪ್ರಚಾರ ಮಾಡಿದ್ದೀರಿ, ವಾಸ್ತವವಾಗಿ ಮಾಜಿ ಶಾಸಕರು ಅಂದು ಕ್ಷೇತ್ರದಲ್ಲಿ ಇರಲಿಲ್ಲ ಎಂಬುದು ತಾವು ತಿಳಿದುಕೊಳ್ಳಬೇಕು ಎಂದ ಅವರು, ಸುರೇಶ್ ಗೌಡರ ಪುತ್ರಿ ಧನ್ಯತಾ ಆಸ್ಪತ್ರೆ ಬಳಿ ಹಾಜರಿದ್ದು, ನೊಂದ ನಿರ್ವಾಹಕನ ಕುಟುಂಬದವರನ್ನು ಸಂತೈಸಿಸಿ ಮೈಸೂರಿನ ಆಸ್ಪತ್ರೆಗೆ ಜಗದೀಶ್ ಅವರನ್ನು ಸ್ಥಳಾಂತಸಿದ್ದಾರೆ. ಆದರೆ ಮಾಜಿ ಶಾಸಕರ ಪಡೆ ತಡೆದಿದೆ ಎಂದು ಸುಳ್ಳು ಪ್ರಚಾರ ಮಾಡಿದ್ದೀರಿ’ ಎಂದು ಕಿಡಿ ಕಾರಿದರು.

‘ಇತ್ತೀಚೆಗೆ ನಡೆದ ಮನ್‌ಮುಲ್‌ನ ಅಧ್ಯಕ್ಷೀಯ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ ಇಬ್ಬರು ನಿರ್ದೇಶಕರನ್ನು ಅನರ್ಹಗೊಳಿಸುವ ಮೂಲಕ ಚುನಾವಣೆಗೆ ಬಾರದಂತೆ ತಡೆಯಲು ವಿನಾಕಾರಣ ನಿರ್ಬಂಧ ಹಾಕಿ ರಾಜಕೀಯ ಷಡ್ಯಂತ್ರ ನಡೆಸಿ ಜೆಡಿಎಸ್‌ ಅಧಿಕಾರ ಬರುವುದನ್ನು ತಪ್ಪಿಸಿ, ದ್ವೇಷದ ರಾಜಕಾರಣ ಮಾಡಿದ್ದೀರಿ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಮನಮುಲ್‌ನಲ್ಲಿ ಈ ಹಿಂದೆ ಅಧ್ಯಕ್ಷರಾಗಿದ್ದ ಮದ್ದೂರು ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕದಲೂರು ರಾಮಕೃಷ್ಣ ಅವರು ಅವರ ಅಧಿಕಾರಾವಧಿಯಲ್ಲಿ ₹ 72 ಕೋಟಿ ಭ್ರಷ್ಟಾಚಾರ ನಡೆಸಿರುವುದರ ಜೊತೆಗೆ ನೇಮಕಾತಿಯಲ್ಲೂ ಹಗರಣ ನಡೆಸಿದ ಅವರನ್ನು ಮತ್ತೆ ನೀವೇ ನಾಮನಿರ್ದೇಶನ ಗೊಳಿಸಿರುವುದು ನಿಮ್ಮ ರಾಜಕೀಯ ನಡತೆಯನ್ನು ತೋರಿಸುತ್ತದೆ’ ಎಂದು ಟೀಕಿಸಿದರು.

‘ಜೆಡಿಎಸ್‌ ಶಾಸಕಾಂಗ ನಾಯಕ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಸದನದಲ್ಲಿ ಏಕವಚನದಲ್ಲಿ ಮಾತನಾಡಿದ್ದೀರಿ, ಜೆಡಿಎಸ್‌ನಿಂದಲೇ ರಾಜಕೀಯ ಜನ್ಮ ಪಡೆದು ಬೆಳೆದು, ಆ ಪಕ್ಷದಿಂದಲೇ 2 ಬಾರಿ ಶಾಸಕರಾಗಿ, ಸಚಿವರಾಗಿ, ಒಂದು ಬಾರಿ ಸಂಸದರಾಗಿ ಆಯ್ಕೆಯಾಗಿದ್ದೀರಿ ಎಂಬುದನ್ನು ಮರೆತುಬಿಟ್ಟಿದ್ದೀರಾ. ಕುಮಾರಸ್ವಾಮಿ ಅವರ ಬಗ್ಗೆ ಮಾತನಾಡುವಾಗ ನಾಲಿಗೆ ಬಿಗಿ ಹಿಡಿದು ಮಾತನಾಡಿ’ ಎಂದು ಎಚ್ಚರಿಸಿದರು.

‘ಜೆಡಿಎಸ್ ವಿರುದ್ಧ ದ್ವೇಷದ ರಾಜಕಾರಣ ಮುಂದುವರಿಸಿದರೆ ಜೆಡಿಎಸ್ ಕಾರ್ಯಕರ್ತರು ಮತ್ತು ಮುಖಂಡರು ಸುಮ್ಮನಿರುವುದಿಲ್ಲ. ನಿಮ್ಮ ವರ್ತನೆ ಇದೇ ರೀತಿ ಮುಂದುವರಿದರೆ ರಾಜ್ಯವ್ಯಾಪಿ ಹೋರಾಟ ನಡೆಸಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು

ನಂತರ ಸಚಿವ ಚಲುವರಾಯಸ್ವಾಮಿ ಅವರ ಮಸಿ ಬಳಿದ ಭಾವಚಿತ್ರವನ್ನು ಪ್ರದರ್ಶಿಸಿ ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಮುಖಂಡರಾದ ಪ್ರಸನ್ನ, ಶಿವಲಿಂಗೇಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT