ಶುಕ್ರವಾರ, ನವೆಂಬರ್ 15, 2019
22 °C
ಶಾಸಕರ ರಾಜೀನಾಮೆ ಆಡಿಯೊ, ನೈತಿಕ ಹೊಣೆ ಹೊರಲು ಕಾಂಗ್ರೆಸ್‌ ಒತ್ತಾಯ

ಅಮಿತ್‌ ಶಾ, ಬಿಎಸ್‌ವೈ ರಾಜೀನಾಮೆಗೆ ಒತ್ತಾಯ

Published:
Updated:
Prajavani

ಮಂಡ್ಯ: ಶಾಸಕರಿಗೆ ಆಮಿಷವೊಡ್ಡಿ ರಾಜೀನಾಮೆ ಕೊಡಿಸಿರುವ ವಿಷಯ ಆಡಿಯೊ ಮೂಲಕ ಬಯಲಾಗಿದೆ. ಇದರ ಹೊಣೆ ಹೊತ್ತು ಕೇಂದ್ರ ಸಚಿವ ಅಮಿತ್‌ ಶಾ, ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಕೂಡಲೇ ರಾಜೀನಾಮೆ ಕೊಡಬೇಕು ಎಂದು ಒತ್ತಾಯಿಸಿ ಕಾಂಗ್ರೆಸ್‌ ಜಿಲ್ಲಾ ಘಟಕದ ಸದಸ್ಯರು ಸೋಮವಾರ ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಿದರು.

ಉತ್ತರ ಕರ್ನಾಟಕದಲ್ಲಿ ನೆರೆ ಹಾನಿಯಿಂದ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರಿಗೆ ಪರಿಹಾರ ನೀಡಿ ಜೀವನ ಭದ್ರತೆ ನೀಡುವ ಬದಲು ಬಿಜೆಪಿ ಮುಖಂಡರು ತಮ್ಮ ರಾಜಕೀಯ ನೆಲೆ ಬಗ್ಗೆ ಚರ್ಚಿಸುತ್ತಿದ್ದಾರೆ. ಸಂತ್ರಸ್ತರ ಕಷ್ಟಕ್ಕೆ ಧಾವಿಸಿ ಪರಿಹಾರ ನೀಡಬೇಕು ಎಂಬ ಸಾಮಾನ್ಯ ಜ್ಞಾನವೂ ಇಲ್ಲದ ರಾಜಕಾರಣ ಮಾಡುತ್ತಿದ್ದಾರೆ. ಶಾಸಕರಿಗೆ ಹಣ ಕೊಟ್ಟು ರಾಜೀನಾಮೆ ಕೊಡಿಸಿರುವುದು ಜಗಜ್ಜಾಹೀರಾಗಿದೆ. ಈ ಹಿನ್ನೆಲೆಯಲ್ಲಿ ಯಡಿಯೂರಪ್ಪ ಸರ್ಕಾರವನ್ನು ವಜಾಗೊಳಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಕಾಂಗ್ರೆಸ್‌– ಜೆಡಿಎಸ್‌ ಸಮ್ಮಿಶ್ರ ಸರ್ಕಾರ ಪತನವಾಗಲು ಬಿಜೆಪಿ ಮುಖಂಡರೇ ಕಾರಣ. ಸಮ್ಮಿಶ್ರ ಸರ್ಕಾರದ ಆಡಳಿತ ಒಪ್ಪದ ಕಾರಣ ರಾಜೀನಾಮೆ ಕೊಟ್ಟು ನಮಗೆ ಸಹಕಾರ ನೀಡಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ. ಆದರೆ ಸರ್ಕಾರ ಅಧಿಕಾರಕ್ಕೆ ಬಂದ ನೂರು ದಿನದಲ್ಲಿ ಅವರ ನಿಜ ಬಂಡವಾಳ ಬಯಲಾಗಿದೆ. ತೇಪೆ ಹಚ್ಚುವ ಕೆಲಸ ಬಿಟ್ಟು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

ಸತ್ಯವನ್ನು ಹೆಚ್ಚು ದಿನ ಮುಚ್ಚಿಡಲು ಸಾಧ್ಯವಿಲ್ಲ. ಒಂದಲ್ಲ ಒಂದು ದಿನ ಅದು ಹೊರಗೆ ಬಂದೇ ಬರುತ್ತದೆ ಎಂಬುದಕ್ಕೆ ಆಡಿಯೊ, ವಿಡಿಯೊಗಳು ಹೊರ ಬಂದಿರುವುದೇ ಸಾಕ್ಷಿ. ಇದನ್ನು ಯಡಿಯೂರಪ್ಪ ಅವರೇ ಒಪ್ಪಿಕೊಂಡಿದ್ದಾರೆ. ಆಡಿಯೊದಲ್ಲಿ ಬಹಿರಂಗವಾಗಿರುವ ವಿಷಯಗಳನ್ನು ಸಾಕ್ಷಿಯಾಗಿ ಪರಿಗಣಿಸಲು ಸುಪ್ರೀಂ ಕೋರ್ಟ್‌ ಕೂಡ ಒಪ್ಪಿಗೆ ನೀಡಿದೆ. ಹೀಗಾಗಿ ಅಮಿತ್‌ ಶಾ ಹಾಗೂ ಯಡಿಯೂರಪ್ಪ ಅವರು ಅಧಿಕಾರದಲ್ಲಿ ಮುಂದುವರಿಯಲು ಯಾವುದೇ ನೈತಿಕತೆ ಇಲ್ಲ ಎಂದು ದೂರಿದರು.

ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಸಿ.ಡಿ.ಗಂಗಾಧರ್‌, ಕಾರ್ಯದರ್ಶಿ ಹಾಲಹಳ್ಳಿ ರಾಮಲಿಂಗಯ್ಯ, ಮುಖಂಡರಾದ ಎಚ್‌.ಕೆ.ರುದ್ರಪ್ಪ, ಚಂದ್ರು, ಪುಟ್ಟೇಗೌಡ, ಚಿದಂಬರ್‌, ಸಿ.ಎಂ.ದ್ಯಾವಪ್ಪ, ಬೋರೇಗೌಡ, ಮಹಿಳಾ ಘಟಕದ ಅಧ್ಯಕ್ಷೆ ಅಂಜನಾ ಶ್ರೀಕಾಂತ್‌, ವಿಜಲಕ್ಷ್ಮಿರಘುನಂದನ್‌, ಪೂರ್ಣಿಮಾ, ಗೀತಾ, ಪವಿತ್ರಾ ಇದ್ದರು.

ಪ್ರತಿಕ್ರಿಯಿಸಿ (+)