ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಓದೋ ಗಂಗಪ್ಪ ಹೊತ್ತು ಬಂದ ಬೆಂಬಲಿಗರು

Last Updated 25 ಏಪ್ರಿಲ್ 2018, 7:15 IST
ಅಕ್ಷರ ಗಾತ್ರ

ಹೂವಿನಹಡಗಲಿ: ಹಡಗಲಿ ಮೀಸಲು ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಓದೋ ಗಂಗಪ್ಪ ಮಂಗಳವಾರ ನಾಮಪತ್ರ ಸಲ್ಲಿಸಿದರು.

ಸೋಮವಾರ ಕೆಲವೇ ಜನರೊಂದಿಗೆ ತೆರಳಿ ಉಮೇದುವಾರಿಕೆ ಸಲ್ಲಿಸಿದ್ದ ಗಂಗಪ್ಪ, ಮಂಗಳವಾರ ಅಪಾರ ಬೆಂಬಲಿಗರೊಂದಿಗೆ ಮೆರವಣಿಗೆಯಲ್ಲಿ ತೆರಳಿ ಮತ್ತೊಂದು ನಾಮಪತ್ರ ಸಲ್ಲಿಸಿದರು.

ಬೆಳಿಗ್ಗೆ ಪಟ್ಟಣದ ಸಿಂಗಟಾಲೂರು ಏತ ನೀರಾವರಿ ಯೋಜನೆ ಕಾಲೊನಿಯ ಮಹಾಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಪಟ್ಟಣದ ಪ್ರಮುಖ ದೇವಸ್ಥಾನಗಳಿಗೆ ತೆರಳಿ ದರ್ಶನ ಪಡೆದರು.

ಮೈಲಾರಲಿಂಗೇಶ್ವರ ದೇವಸ್ಥಾನದಿಂದ ಓದೋ ಗಂಗಪ್ಪ ಅವರು ಸಹಸ್ರಾರು ಕಾರ್ಯಕರ್ತರು, ಬೆಂಬಲಿಗರೊಂದಿಗೆ ಮೆರವಣಿಗೆ ಪ್ರಾರಂಭಿಸಿದರು. ಸುಡುವ ಬಿಸಿಲನ್ನು ಲೆಕ್ಕಿಸದೇ ಅಪಾರ ಬೆಂಬಲಿಗರು ತಾಲ್ಲೂಕು ಕಚೇರಿ ತನಕ ಪಾದಯಾತ್ರೆಯಲ್ಲಿ ತೆರಳಿದರು. ಮೆರವಣಿಗೆಯ ಉದ್ದಕ್ಕೂ ಓದೋ ಗಂಗಪ್ಪ ಪರ ಘೋಷಣೆಗಳನ್ನು ಕೂಗಿದರು. ಬೆಂಬಲಿಗರು ಅಭಿಮಾನಕ್ಕಾಗಿ ಗಂಗಪ್ಪನವರನ್ನು ಭುಜದ ಮೇಲೆ ಹೊತ್ತುಕೊಂಡು ಮೆರವಣಿಗೆಯಲ್ಲಿ ಸಾಗಿದರು.

ಈ ವೇಳೆ ಜಿಲ್ಲಾ ಪಂಚಾಯ್ತಿ ಸದಸ್ಯ ಪಿ.ವಿಜಯಕುಮಾರ್, ಶಾರದ ಓದೋ ಗಂಗಪ್ಪ, ಮುಖಂಡರಾದ ಸಿ.ಈಶಪ್ಪ, ಎಸ್.ದೂದನಾಯ್ಕ, ಅಕ್ಕಿಹಾಲೇಶ್, ಕೊಳಚಿ ರುದ್ರಪ್ಪ, ವೈ.ಜಯಣ್ಣ, ಕೆ.ಸುರೇಶ ಇದ್ದರು.

ಮುರಳಿಕೃಷ್ಣ ಸ್ಪರ್ಧೆ

ಸಿರುಗುಪ್ಪ: ವಿಧಾನಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಲು ಕೊನೆಯ ದಿನವಾದ ಮಂಗಳವಾರ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಬಿ.ಮುರಳಿಕೃಷ್ಣ ನಾಮಪತ್ರ ಸಲ್ಲಿಸಿದರು.

ಅದೇ ಪಕ್ಷದ ಟಿಕೆಟ್‌ ವಂಚಿತ ಶಾಸಕ ಬಿ.ಎಂ.ನಾಗರಾಜ ಅವರ ಸಹೋದರ ಬಿ.ಎಂ.ವೆಂಕಟೇಶ್ ನಾಯಕ ಮತ್ತು ಪತ್ನಿ ಬಿ.ಎಂ.ಮಂಗಳಾ ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದರು. ಜೆಡಿಎಸ್‌ ಅಭ್ಯರ್ಥಿಯಾಗಿ ತೆಕ್ಕಲಕೋಟೆಯ ಎಚ್‌.ಮಾರುತಿ ನಾಮಪತ್ರ ಸಲ್ಲಿಸಿದರು.

ಕಾಂಗ್ರೆಸ್‌ ಪಕ್ಷದ ಕಚೇರಿಯಿಂದ ಮುರಳಿಕೃಷ್ಣ ರೋಡ್‌ಶೋ ನಡೆಸಿದರು. ಶಾಸಕ ಕೆ.ಸಿ.ಕೊಂಡಯ್ಯ, ರಾಜ್ಯ ಸಭಾ ಸದಸ್ಯ ನಾಸೀರ್ ಹುಸೇನ್, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಶಿವಯೋಗಿ, ಕಾಂಗ್ರೆಸ್‌ನ ಬಳ್ಳಾರಿ ಗ್ರಾಮೀಣ ಕ್ಷೇತ್ರದ ಅಭ್ಯರ್ಥಿ ಬಿ.ನಾಗೇಂದ್ರ, ಸಾಥ್‌ ನೀಡಿದರು.

ಶಾಸಕರ ಗೈರು: ಮುರಳಿ ಕೃಷ್ಣ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಹಾಲಿ ಶಾಸಕ ಬಿ.ಎಂ.ನಾಗರಾಜ ಅವರ ಗೈರು ಹಾಜರಿ ಎದ್ದು ಕಾಣುತ್ತಿತ್ತು. ಬಳ್ಳಾರಿ ಗ್ರಾಮೀಣ ಕಾಂಗ್ರೆಸ್‌ ಅಭ್ಯರ್ಥಿ ಬಿ.ನಾಗೇಂದ್ರ ಅವರು ಶಾಸಕರನ್ನು ಕರೆತರಲು ಹೋಗಿದ್ದರು. ಆದರೆ ಅವರು ಮನೆಯಲ್ಲಿ ಇರಲಿಲ್ಲ ಎನ್ನಲಾಗಿದೆ.

ಶಾಸಕರ ಸಹೋದರ ಪಕ್ಷೇತರ ಅಭ್ಯರ್ಥಿ: ಶಾಸಕ ಬಿ.ಎಂ.ನಾಗರಾಜರ ಸಹೋದರ ಬಿ.ಎಂ.ವೆಂಕಟೇಶ್‌ನಾಯಕ ಮತ್ತು ಪತ್ನಿ ಬಿ.ಎಂ.ಮಂಗಳಾ ಅವರು ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದು ಆಶ್ಚರ್ಯ ಮೂಡಿಸಿತ್ತು.

ಜೆಡಿಎಸ್‌ ಅಭ್ಯರ್ಥಿಯಾಗಿ ತೆಕ್ಕಲಕೋಟೆಯ ಎಚ್‌.ಮಾರುತಿ ಅವರು ಕೊನೆ ಗಳಿಗೆಯಲ್ಲಿ ನಾಮಪತ್ರ ಸಲ್ಲಿಸಿದರು. ಪಕ್ಷದ ವತಿಯಿಂದ ಹೊಸಪೇಟೆಯ ಬಿ.ಕೆ.ಹನುಮಂತಪ್ಪ ಅವರಿಗೆ ಟಿಕೆಟ್‌ ಘೋಷಿಸಲಾಗಿತ್ತು, ಈ ಮೊದಲು ಕಾಂಗ್ರೆಸ್‌ ಪಕ್ಷದಲ್ಲಿದ್ದ ಯುವ ಮುಖಂಡ ಮಾರುತಿಯವರನ್ನು ಜೆಡಿಎಸ್‌ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿರುವುದು ಕುತೂಲಹ ಕೆರಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT