ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡ್ಯ: ಅರಕೇಶ್ವರ ರಥೋತ್ಸವದಲ್ಲಿ ಭಕ್ತರು ಪುನೀತ

2 ವರ್ಷಗಳ ನಂತರ ಸಂಭ್ರಮ, ರಥಬೀದಿಯಲ್ಲಿ ಜಾನಪದ ಕಲಾತಂಡಗಳು ಭಾಗಿ
Last Updated 18 ಮಾರ್ಚ್ 2022, 13:59 IST
ಅಕ್ಷರ ಗಾತ್ರ

ಮಂಡ್ಯ: ಗುತ್ತಲು ಬಡಾವಣೆಯ ಇತಿಹಾಸ ಪ್ರಸಿದ್ಧ ಶ್ರೀ ಅರಕೇಶ್ವರ ಸ್ವಾಮಿಯ ರಥೋತ್ಸವಶುಕ್ರವಾರ ಅಪಾರ ಭಕ್ತರ ಸಮ್ಮುಖದಲ್ಲಿ, ವೇದಮಂತ್ರಘೋಷಣೆಯೊಂದಿಗೆ ವಿಜೃಂಭಣೆಯಿಂದ ನೆರವೇರಿತು.

ರಥೋತ್ಸವದ ಅಂಗವಾಗಿ ಬೆಳಿಗ್ಗೆಯಿಂದಲೇ ದೂರದ ಊರುಗಳಿಂದ ದೇವಾಲಯಕ್ಕೆ ಬರುತ್ತಿದ್ದರು. ದೇವರ ವಶಂಸ್ಥರು ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ರಥವನ್ನು ವಿವಿಧ ಹೂಗಳಿಂದ, ಬಾಳೆ ಗೊನೆ, ಮಾವಿನ ತೋರಣಗಳಿಂದ ಸಿಂಗರಿಸಲಾಗಿತ್ತು. ರಥೋತ್ಸವ ಆರಂಭವಾಗುತ್ತಿದಂತೆ ಭಕ್ತರು ಜಯಘೋಷ ಮೊಳಗಿಸಿದರು.

ರಥಬೀದಿಯುದ್ದಕ್ಕೂ ಭಕ್ತರು ಪೂಜೆ ಸಲ್ಲಿಸಿದರು. ಗುತ್ತಲು ಬಡಾವಣೆಯ ಪ್ರಮುಖ ಬೀದಿಗಳಲ್ಲಿ ರಥ ಸಂಚರಿಸಿತು. ರಥೋತ್ಸವದ ಸಂಭ್ರಮದಲ್ಲಿ ವೀರಭದ್ರೇಶ್ವರ ಕುಣಿತ, ಪಣಕುಣಿತ ಕಲಾವಿದರು ಮೆರಗು ನೀಡಿದರು. ಇದರ ನಡುವೆ ಭಕ್ತರ ಹರ್ಷೋದ್ಘಾರ ಮುಗಿಲು ಮುಟ್ಟಿತ್ತು.

ಉರಿ ಬಿಸಿಲನ್ನು ಲೆಕ್ಕಿಸದೇ ಭಕ್ತರು ರಥದ ಜೊತೆ ಹೆಜ್ಜೆ ಹಾಕಿ ಭಕ್ತಿ ಮೆರೆದರು. ಬೀದಿಯಲ್ಲಿ ಭಕ್ತರ ದಣಿವು ನಿವಾರಿಸಲೆಂದು ಸಿಹಿ ಪಾನಕ, ಮಜ್ಜಿಗೆ ನೀಡಲಾಯಿತು. ಹೊಸದಾಗಿ ಮದುವೆಯಾದ ಜೋಡಿ ರಥಕ್ಕೆ ಪೂಜೆ ಸಲ್ಲಿಸಿದರು. ಭಕ್ತರು ಹಣ್ಣು, ಜವನಾ ಎಸೆಯುವ ಮೂಲಕ ಹರಕೆ ತೀರಿಸಿದರು.

ಉಮ್ಮಡಹಳ್ಳಿ, ಚೆನ್ನಪ್ಪನದೊಡ್ಡಿ, ಶ್ರೀನಿವಾಸಪುರ, ಕಬ್ಬನಹಳ್ಳಿ, ಸೂನಗಹಳ್ಳಿ, ಯತ್ತಗದಹಳ್ಳಿ, ರಾಗಿಮುದ್ದನಹಳ್ಳಿ, ಕೋಲಕಾರನದೊಡ್ಡಿ, ಗುತ್ತಲು, ಚೀರನಹಳ್ಳಿ, ಹಳುವಾಡಿ, ತಗ್ಗಹಳ್ಳಿ ಸೇರಿದಂತೆ ಸಾವಿರಾರು ಭಕ್ತರು ಅರಕೇಶ್ವರ ರಥೋತ್ಸವದಲ್ಲಿ ಭಾಗವಹಿಸಿ ಪುನೀತರಾದರು.

‘ಕೋವಿಡ್‌ ಕಾರಣದಿಂದ ಕಳೆದ ಎರಡೂ ವರ್ಷಗಳಿಂದಲೂ ಅರಕೇಶ್ವರ ದೇವಾಲಯದ ರಥೋತ್ಸವ ನಡೆದಿರಲಿಲ್ಲ. ಈಗ ವಿಜೃಂಭಣೆಯಿಂದ ರಥೋತ್ಸವ ನಡೆದಿದೆ. ನಮ್ಮ ಸಂಭ್ರಮಕ್ಕೆ ಪಾರವೇ ಇಲ್ಲದಂತಾಗಿದೆ. ಮನೆಮಂದಿಯೆಲ್ಲಾ ದೇವರ ದರ್ಶನ ಮತ್ತು ರಥೋತ್ಸವದಲ್ಲಿ ಭಾಗಿಯಾಗಿದ್ದೇವೆ, ಜೊತೆಗೆ ನೆಂಟರಿಷ್ಟರು ಸಹ ಈ ಸಂಭ್ರಮದಲ್ಲಿ ಸಮಾಗಮ ಆಗುತ್ತಿರುವುದು ಸಂತೋಷ ತರಿಸಿದೆ’ ಎಂದು ಭಕ್ತರಾದ ಲೋಕೇಶ್, ಮಹೇಶ್, ಮಂಜುನಾಥ್‌, ಪರಮೇಶ್, ಎ.ಬಿ.ಸುರೇಶ್‌, ಸಂದೇಶ್ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT