ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೆ.ಪಿ.ಚಿಂತನೆ ಸರ್ವವ್ಯಾಪಿಯಾಗಲಿ: ಆತ್ಮಾನಂದ

Last Updated 11 ಅಕ್ಟೋಬರ್ 2019, 12:22 IST
ಅಕ್ಷರ ಗಾತ್ರ

ಮಂಡ್ಯ: ‘ರಾಜಕಾರಣದಲ್ಲಿ ಮೌಲ್ಯಗಳು ಕಳೆದು ಹೋಗುತ್ತಿರುವ ಸಂದರ್ಭದಲ್ಲಿ ಲೋಕನಾಯಕ ಜಯಪ್ರಕಾಶ ನಾರಾಯಣ ಅವರ ಚಿಂತನೆಗಳು ಸರ್ವವ್ಯಾಪಿಯಾಗಬೇಕಾದ ಅನಿವಾರ್ಯತೆ ಇದೆ’ ಎಂದು ಕಾಂಗ್ರೆಸ್‌ ಮುಖಂಡ ಎಂ.ಎಸ್‌.ಆತ್ಮಾನಂದ ಹೇಳಿದರು.

ಜೆ.ಪಿ.ಸ್ಮಾರಕ ವಿದ್ಯಾಸಂಸ್ಥೆ ವತಿಯಿಂದ ಶುಕ್ರವಾರ ನಡೆದ ತರಗತಿ ಕೊಠಡಿಗಳ ಶಂಕುಸ್ಥಾಪನೆ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

‘ಜೆ.ಪಿ.ಚಳವಳಿಯ ಭಾಗವಾಗಿ ಎಪ್ಪತ್ತರ ದಶಕದಲ್ಲಿ ಪರ್ಯಾಯ ರಾಜಕಾರಣ ಕನಸಿನಿಂದ ಹಲವು ಪಕ್ಷಗಳು ಒಂದುಗೂಡಿ ಜನತಾ ಸರ್ಕಾರ ರಚನೆ ಮಾಡಲಾಯಿತು. ಆಗ ಪಕ್ಷದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಹಿರಿಯರು, ಬುದ್ಧಿವಂತರು ಇದ್ದರು. ಪರ್ಯಾಯ ರಾಜಕಾರಣಕ್ಕೆ ನಾಂದಿಯಾಗುತ್ತದೆ ಎಂದೇ ಬಣ್ಣಿಸಲಾಗಿತ್ತು. ಆದರೆ ನಾಯಕರ ಭಿನ್ನ ಅಭಿಪ್ರಾಯಗಳು, ಜಿಜ್ಞಾಸೆಯಿಂದ ಜನತಾ ಸರ್ಕಾರ ಬಿದ್ದು ಹೋಯಿತು’ ಎಂದು ವಿಷಾದಿಸಿದರು.

‘ಈಗ ರಾಜಕಾರಣದಲ್ಲಿ ಜನರ ಮನೋಧರ್ಮ ಬದಲಾಗಿದೆ. ಮೌಲ್ಯಗಳ ಪಾಲನೆಗೆ ಪ್ರಮುಖ ಆದ್ಯತೆ ದೊರೆಯುತ್ತಿಲ್ಲ. ಇಂತಹ ಸಂದರ್ಭದಲ್ಲಿ ಜೆ.ಪಿ ಅವರ ಚಿಂತನೆಗಳು ಮುನ್ನೆಲೆಗೆ ಬರಬೇಕು. ಜಯಪ್ರಕಾಶ ನಾರಾಯಣರಲ್ಲಿ ಧೀಶಕ್ತಿ ಇತ್ತು. ಸಮಾಜದ ಅಭಿವೃದ್ಧಿಯ ಮುನ್ನೋಟದ ಚಿಂತನೆಗಳು ಇದ್ದವು. ಪ್ರಸ್ತುತ ಸಮಾಜದಲ್ಲಿ ಅವರ ಚಿಂತನೆಗಳು ಪಾಲನೆಯಾಗಬೇಕಾದ ಅವಶ್ಯಕತೆ ಇದೆ’ ಎಂದರು.

‘ಜೆ.ಪಿ ಅವರ ಸ್ಮಾರಕವಾಗಿ ಶೈಕ್ಷಣಿಕ ಸಂಸ್ಥೆ ರೂಪಿತವಾಗುತ್ತಿರುವುದು ಉತ್ತಮ ಬೆಳವಣಿಗೆ. ಯುವಜನರ ಮನಸ್ಸುಗಳಲ್ಲಿ ಅವರ ಚಿಂತನೆಗಳನ್ನು ತುಂಬಲು ಇದೊಂದು ಅವಕಾಶವಾಗಿದೆ. ಮೊದಲು ನಾವೆಲ್ಲ ಸಣ್ಣವರಿದ್ದಾಗ ಮುನ್ಸಿಪಲ್‌ ಹೈಸ್ಕೂಲ್‌, ಶುಗರ್‌ ಟೌನ್‌ ಶಾಲೆಯಷ್ಟೇ ಇದ್ದವು. ಆದರೆ ಈಗ ವಿದ್ಯಾಸಕ್ತರ ಸಂಖ್ಯೆ ಹೆಚ್ಚಾಗಿದೆ. ನೂರಾರು ಶಿಕ್ಷಣ ಸಂಸ್ಥೆಗಳು ಬಂದಿವೆ. ಕೌಡ್ಲೆ ಚನ್ನಪ್ಪ ಅವರ ನೇತೃತ್ವದಲ್ಲಿ ಜೆ.ಪಿ ಸ್ಮಾರಕ ಶಿಕ್ಷಣ ಸಂಸ್ಥೆ ಮತ್ತಷ್ಟು ಎತ್ತರಕ್ಕೆ ಬೆಳೆಯಲಿ’ ಎಂದು ಹೇಳಿದರು.

ಸಮಾರಂಭದಲ್ಲಿ ವಿದ್ಯಾಸಂಸ್ಥೆಯ ಗೌರವ ಕಾರ್ಯದರ್ಶಿ ಕೌಡ್ಲೆ ಚನ್ನಪ್ಪ, ಅಧ್ಯಕ್ಷ ಎಚ್‌.ಎ.ನಾರಾಯಣ, ನಗರಸಭಾ ಸದಸ್ಯ ಅರುಣ್‌ಕುಮಾರ್‌, ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಸಿ.ಡಿ.ಗಂಗಾಧರ್‌, ಸಿದ್ದರಾಮೇಗೌಡ, ಕೃಷ್ಣ ಕೀಲಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT