ಶನಿವಾರ, ಜುಲೈ 31, 2021
25 °C

ಮಂಡ್ಯ: ‘ಎಲ್ಲಾ ವರ್ಗಕ್ಕೂ ಆತ್ಮ ನಿರ್ಭರ ಯೋಜನೆಯ ಲಾಭ’: ಡಾ.ಸಿದ್ದರಾಮಯ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಡ್ಯ: ‘ಆತ್ಮ ನಿರ್ಭರ ಯೋಜನೆಯಡಿ ₹ 20 ಲಕ್ಷ ಕೋಟಿ ನೀಡುವ ಮೂಲಕ ಕೇಂದ್ರ ಸರ್ಕಾರ ದೇಶದ ಸಕಲ ವರ್ಗಗಳ ಪ್ರಜೆಗಳ ಸಂಕಷ್ಟಕ್ಕೆ ನೆರವಾಗಿದೆ. ರಾಜಕೀಯ ಪಕ್ಕಕ್ಕಿಟ್ಟು ಜನಪ್ರತಿನಿಧಿಗಳು ಸಮಾಜ ಕೊನೆಯ ವ್ಯಕ್ತಿಗೂ ಯೋಜನೆಯ ಲಾಭ ತಲುಪುವಂತೆ ಮಾಡಬೇಕು’ ಎಂದು ಬಿಜೆಪಿ ಮುಖಂಡ ಡಾ.ಸಿದ್ದರಾಮಯ್ಯ ಹೇಳಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ‘ಸಂಕಷ್ಟದಲ್ಲಿರುವ ಜನಸಾಮಾನ್ಯರಿಗೆ ಸಹಾಯವಾಗುವ ನಿಟ್ಟಿನಲ್ಲಿ ಸಾಕಷ್ಟು ಯೋಜನೆ ಜಾರಿಗೆ ತರಲಾಗಿದ್ದು, ಅದನ್ನು ಪಕ್ಷಾತೀತವಾಗಿ ಗ್ರಾಪಂ, ಜಿಪಂ, ಪುರಸಭೆ, ನಗರಸಭೆ, ಮಹಾನಗರ ಪಾಲಿಕೆ ಸದಸ್ಯರು, ಶಾಸಕರು,  ಸಂಸದರು ಜನರಿಗೆ ಮುಟ್ಟಿಸುವ ಕೆಲಸ ಮಾಡಬೇಕು. ಅಸಂಘಟಿತ ವಲಯ ಕಾರ್ಮಿಕರಿಗೆ, ನಿರ್ಗತಿಕರು ಸೇರಿದಂತೆ ಸುಮಾರು 80 ಕೋಟಿ ಜನರಿಗೆ ನವೆಂಬರ್‌ವರೆಗೆ ಉಚಿತವಾಗಿ ಅಕ್ಕಿ, ಬೇಳೆ ನೀಡಲಾಗುತ್ತಿದೆ’ ಎಂದರು.

‘ಕಾರ್ಮಿಕರ ಪುನಶ್ಚೇತನ, ಸಣ್ಣ ಹಣಕಾಸು ಸಂಸ್ಥೆಗಳಿಗೆ ನೆರವು, ರಕ್ಷಣಾ ಕ್ಷೇತ್ರದ ಉಪಕರಣ ಉತ್ಪಾದನೆ ಪ್ರಮಾಣವನ್ನು ಶೇ 49 ರಿಂದ 74ಕ್ಕೆ ಏರಿಸಲಾಗಿದೆ. 90 ಸಾವಿರ ಕೋಟಿಯನ್ನು ವಿದ್ಯುತ್‌ ಉತ್ಪಾದನಾ ಕಂಪನಿಗಳಿಗೆ ನೀಡಲಾಗಿದೆ. 2023 ಕ್ಕೆ ವಿದ್ಯುತ್‌ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸಲಿದೆ. 6 ವಿಮಾನ ನಿಲ್ದಾಣವನ್ನು ಖಾಸಗೀಕರಣ ಮಾಡಲಾಗುತ್ತಿದೆ. ಕಿಸಾನ್‌ ಕ್ರೆಡಿಟ್‌ ಕಾರ್ಡ್‌ ಮೂಲಕ 2.5 ಕೋಟಿ ರೈತರಿಗೆ 2 ಲಕ್ಷ ಕೋಟಿ ಸಾಲ ನೀಡಲಾಗುತ್ತಿದೆ’ ಎಂದರು.

‘ಕೊರೊನಾ ಎದುರಿಸಲು ನಮ್ಮ ರಾಜ್ಯಕ್ಕೆ ₹6100 ಕೋಟಿ ನೀಡಲಾಗಿದೆ. ಸೋಂಕು ಸಂಬಂಧಿಸಿದಂತೆ ಬೆಂಗಳೂರು ಅಂತರರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದ ಆವರಣದಲ್ಲಿ 10 ಸಾವಿರ ಹಾಸಿಗೆಯುಳ್ಳ ಅತ್ಯಾಧುನಿಕ ಕೇಂದ್ರವನ್ನು ತೆರೆಯಲಾಗುತ್ತಿದೆ’ ಎಂದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ವಿಜಯ್‌ಕುಮಾರ್‌ ಮಾತನಾಡಿ ‘ಜಿಲ್ಲೆಯ  1794 ಬೂತ್‌ಗಳಲ್ಲಿ ಬಿಜೆಪಿ ವತಿಯಿಂದ ಕೊರೊನಾ ಸಂಕಷ್ಟದ ಕಾಲದಲ್ಲಿ ಸೇವಾ ಕಾರ್ಯ ಮಾಡಲಾಗಿದ್ದು, ಇಲ್ಲಿಯವರೆಗೆ ಅಗತ್ಯ ಇರುವ 1,27,460 ಮಂದಿಗೆ ಆಹಾರ ಕಿಟ್‌, 9700 ರೇಷನ್‌ ಕಿಟ್‌, 65420 ಸ್ಯಾನಿಟೈಸರ್‌, 1.6ಲಕ್ಷ ಮಾಸ್ಕ್‌ಗಳನ್ನು ವಿತರಿಸಲಾಗಿದೆ. ಕೊರೊನಾ ವಿರುದ್ಧ ಹೋರಾಡಲು ಜಿಲ್ಲೆಯ ಬಿಜೆಪಿ ಕಾರ್ಯಕರ್ತರು ಪಿಎಂ ಕೇರ್ಸ್‌ಗೆ ₹6.5ಕೋಟಿ ನೀಡಿದ್ದಾರೆ’ ಎಂದರು. ನಗರಸಭೆ ಸದಸ್ಯ ಎಂ.ಪಿ.ಅರುಣ್‌ಕುಮಾರ್‌ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು