ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಲಿತರ ಮನೆಗೆ ನುಗ್ಗಿ ಹಲ್ಲೆ, ವಸ್ತು ಧ್ವಂಸ

Last Updated 27 ಡಿಸೆಂಬರ್ 2020, 20:47 IST
ಅಕ್ಷರ ಗಾತ್ರ

ಮಂಡ್ಯ: ಪಾಂಡವಪುರ ತಾಲ್ಲೂಕು ಚಿಕ್ಕಬ್ಯಾಡರಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಗಟಹಳ್ಳಿಯಿಂದ ಸ್ಪರ್ಧಿಸಿದ್ದ ಜೆಡಿಎಸ್‌ ಬೆಂಬಲಿತ ಅಭ್ಯರ್ಥಿ ಹಾಗೂ ಆತನ ಬೆಂಬಲಿಗರು, ಭಾನುವಾರ ಸಂಜೆ ದಲಿತರ ಎರಡು ಮನೆಗಳಿಗೆ ನುಗ್ಗಿ ವಸ್ತುಗಳನ್ನು ಧ್ವಂಸಗೊಳಿಸಿದ್ದಾರೆ.

ಗ್ರಾಮದಿಂದ ಸ್ಪರ್ಧಿಸಿದ್ದ ರವಿ, ಭಾನುವಾರ ಬೆಳಿಗ್ಗೆ ಗ್ರಾಮದ ಚಿಕ್ಕತಾಯಮ್ಮ ಎಂಬವವರ ಮನೆಗೆ ಹಣ ನೀಡುವುದಾಗಿ ಬಂದಿದ್ದಾರೆ. ಮನೆಯಲ್ಲಿದ್ದ ಚಿಕ್ಕತಾಯಮ್ಮ ಸಂಬಂಧಿ ನಿಂಗಯ್ಯ, ‘ಮನೆಯೊಳಗೆ ಬರಬೇಡ, 9 ತಿಂಗಳ ಮಗು ಇದೆ’ ಎಂದಿದ್ದಾರೆ. ಇದರಿಂದ ಸಿಟ್ಟಿಗೆದ್ದ ರವಿ, ನಿಂಗಯ್ಯ ಅವರ ಕೆನ್ನೆಗೆ ಬಾರಿಸಿದ್ದರಿಂದ ನಿಂಗಯ್ಯ ಕುಸಿದು ಬಿದ್ದಿದ್ದಾರೆ.

ಈ ಘಟನೆ ನಂತರ ಅಸ್ವಸ್ಥ ಗೊಂಡಿದ್ದ ನಿಂಗಯ್ಯ ಅವರನ್ನು ಅವರ ಪತ್ನಿ ಮೈಸೂರಿನ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಮತದಾನ ನಡೆಯುತ್ತಿದ್ದ ಕಾರಣ ಎಲ್ಲವೂ ಅಲ್ಲಿಗೇ ತಣ್ಣಗಾಗಿದೆ. ಮತದಾನ ಮುಗಿದ ನಂತರ ಅಭ್ಯರ್ಥಿ ರವಿ ಹಾಗೂ ಆತನ ಬೆಂಬಲಿಗರು ನಿಂಗಯ್ಯ ಹಾಗೂ ಅವರ ಸಂಬಂಧಿಯ ಇನ್ನೊಂದು ಮನೆಗೆ ನುಗ್ಗಿ ವಸ್ತುಗಳನ್ನು ಧ್ವಂಸಗೊಳಿಸಿದ್ದಾರೆ.

ಮನೆಯ ಟಿವಿ, ಪೆಟ್ಟಿಗೆ, ಬೀರು, ದವಸ–ಧಾನ್ಯಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಘಟನೆಯ ನಂತರ ಗ್ರಾಮದಲ್ಲಿ ಬಿಗುವಿನ ವಾತಾವರಣವಿದ್ದು ಪೊಲೀಸರು ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ.

‘ನಾವು ದಲಿತರು ಎಂಬ ಕಾರಣಕ್ಕೆ ಎಲ್ಲರೂ ಒಟ್ಟಾಗಿ ಬಂದು ಮನೆಯ ವಸ್ತುಗಳನ್ನು ಧ್ವಂಸ ಮಾಡಿದ್ದಾರೆ. ಬೆಳಿಗ್ಗೆ ನನ್ನ ತಂದೆಗೆ ಹಲ್ಲೆ ಮಾಡಿದ ನಂತರ ಅವರಿಗೆ ಆರೋಗ್ಯ ಸಮಸ್ಯೆ ಕಾಣಿಸಿಕೊಂಡು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆಗೆ ನುಗ್ಗಿ ವಸ್ತುಗಳನ್ನು ಹಾಳು ಮಾಡಿದ್ದಾರೆ’ ಎಂದು ನಿಂಗಯ್ಯ ಅವರ ಪುತ್ರಿ ಸವಿತಾ ತಿಳಿಸಿದರು.

‘ಘಟನೆ ಸಂಬಂಧ ಮೂವರನ್ನು ಬಂಧಿಸಿದ್ದೇವೆ. ಅಭ್ಯರ್ಥಿ ರವಿ ಆಸ್ಪತ್ರೆಗೆ ದಾಖಲಾಗಿದ್ದು ಆತನ ಮೇಲೂ ನಿಗಾ ವಹಿಸಲಾಗಿದೆ. ದಲಿತರ ಮೇಲಿನ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲು ಮಾಡಲಾಗಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಪರಶುರಾಮ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT