ಬುಧವಾರ, ನವೆಂಬರ್ 25, 2020
20 °C
ಪಾಂಡವಪುರ ತಾಲ್ಲೂಕು ಬೇಬಿ ಬೆಟ್ಟದಲ್ಲಿ ಯಂತ್ರಗಳ ವಶ, ಪ್ರಕರಣ ದಾಖಲು

ಅಕ್ರಮ ಗಣಿಗಾರಿಕೆ ಮೇಲೆ ದಾಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಪಾಂಡವಪುರ: ತಾಲ್ಲೂಕಿನ ನಿಷೇಧಿತ ಪ್ರದೇಶದಲ್ಲಿ ನಡೆಯುತ್ತಿದ್ದ ಅಕ್ರಮ ಕಲ್ಲು ಗಣಿಗಾರಿಕೆಯ ಮೇಲೆ ಶುಕ್ರವಾರ ದಾಳಿ ನಡೆಸಿದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಎರಡು ಇಟಾಚಿ, ಒಂದು ರಾಕ್ ಬ್ರೇಕರ್ ಹಾಗೂ ಲಾರಿಯನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕಲ್ಲು ಗಣಿಗಾರಿಕೆ ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಹಿರಿಯ ಅಧಿಕಾರಿ ಟಿ.ವಿ.ಪುಷ್ಪಾ ಅವರ ನೇತೃತ್ವದಲ್ಲಿ ದಾಳಿ ನಡೆಸಿದಾಗ ಅಕ್ರಮ ಕಲ್ಲು ಗಣಿಗಾರಿಕೆ ನಡೆಸುತ್ತಿದ್ದವರು ಯಂತ್ರಗಳನ್ನು ಬಿಟ್ಟು ಪರಾರಿಯಾದರು.

ಅಕ್ರಮ ಗಣಿಗಾರಿಕೆಯನ್ನು ತಡೆಗಟ್ಟಲು ಜಿಲ್ಲಾ ಟಾಸ್ಕ್‌ ಫೋರ್ಸ್‌ ಮತ್ತು ಜಿಲ್ಲಾಡಳಿತದ ಸೂಚನೆ ಮೇರೆಗೆ ಗಣಿ ಅಧಿಕಾರಿ ಟಿ.ವಿ.ಪುಷ್ಪಾ ಅವರು ಕಟ್ಟುನಿಟ್ಟಿನ ಕ್ರಮ ವಹಿಸಿದ್ದರು.

ಗಣಿಗಾರಿಕೆ ಪ್ರದೇಶಗಳ ಸುತ್ತ ಗುಂಡಿ ತೋಡಿಸಿ ಗಣಿ ಚಟುವಟಿಕೆ ನಡೆಯದಂತೆ ಕ್ರಮ ಕೈಗೊಂಡಿದ್ದರು. ಜತೆಗೆ ಸಾಗಾಣಿಕೆ ಮೇಲೆ ಕಣ್ಣಿಡಲು ಚೆಕ್‌ಪೋಸ್ಟ್‌ ನಿರ್ಮಿಸಿ, ಸಿ.ಸಿ ಟಿವಿ ಕ್ಯಾಮೆರಾಗಳನ್ನು ಅಳವಡಿಸಿದ್ದರು. ಗಣಿಗಾರಿಕೆ ಹಾಗೂ ಕಲ್ಲು ಸಾಗಾಣಿಕೆ ಮೇಲೆ ನಿಗಾ ವಹಿಸಲು ಕಂದಾಯ, ಪೊಲೀಸ್ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳನ್ನು ನೇಮಿಸಿದ್ದರು. ಆದರೂ ಎಲ್ಲರ ಕಣ್ತಪ್ಪಿಸಿ ಅಕ್ರಮ ಗಣಿಗಾರಿಕೆ ಮಾಡಲಾಗುತ್ತಿತ್ತು.

‘ನಿಷೇಧಿತ ಬೇಬಿ ಬೆಟ್ಟದಲ್ಲಿ ಯಾವುದೇ ರೀತಿಯ ಗಣಿಗಾರಿಕೆ ನಡೆಸಿದರೆ ಅವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವುದು. ಗಣಿಗಾರಿಕೆ ಪ್ರದೇಶದಲ್ಲಿ ಶೀಘ್ರವೇ ಡ್ರೋಣ್‌ ಸಹ ಬಳಕೆ ಮಾಡಿಕೊಂಡು ಅಕ್ರಮ ಕಲ್ಲು ಗಣಿಗಾರಿಕೆ ಚಟುವಟಿಕೆಗಳನ್ನು ಪೂರ್ಣ ಸ್ಥಗಿತಗೊಳಿಸಲಾಗುವುದು’ ಎಂದು ಹಿರಿಯ ಗಣಿ ಅಧಿಕಾರಿ ಟಿ.ವಿ.ಪುಷ್ಪಾ ತಿಳಿಸಿದರು.

ಗಣಿ ಅಧಿಕಾರಿಗಳಾದ ಪ್ರಸನ್ನ, ವಿನಯ್‌ ಹಾಗೂ ಪೊಲೀಸ್ ಇಲಾಖೆ ಅಧಿಕಾರಿ, ಸಿಬ್ಬಂದಿ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು