ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಕಿಗೆ ಬಾಡಿದ ಗಿಡ ಚಿಗುರಿಸಲು ಭಗೀರಥ ಪ್ರಯತ್ನ!

ಪರಿಸರ ರಮೇಶ್ ನೇತೃತ್ವದ ಹಸಿರು ಪಡೆ ಸದಸ್ಯರಿಂದ ಗಿಡಗಳ ಪೋಷಣೆ
Last Updated 24 ಫೆಬ್ರುವರಿ 2021, 3:37 IST
ಅಕ್ಷರ ಗಾತ್ರ

ಶ್ರೀರಂಗಪಟ್ಟಣ: ಬೇಸಿಗೆ ಬಂತೆಂದರೆ ತಾಲ್ಲೂಕಿನ ಕರಿಘಟ್ಟ ಅರಣ್ಯಕ್ಕೆ ಬೆಂಕಿಯ ಶಾಪ ಮತ್ತು ತಾಪ ತಟ್ಟುತ್ತದೆ. ಈ ಬಾರಿ ಬೇಸಿಗೆ ಆರಂಭಕ್ಕೆ ಮುನ್ನವೇ ಕಾಡಿಗೆ ಬೆಂಕಿ ಬಿದ್ದಿದ್ದು ನೂರಾರು ಗಿಡಗಳು ಸುಟ್ಟಿದ್ದು, ಹಸಿರು ಘಟ್ಟ ಅಕ್ಷರಶಃ ‘ಕರಿ’ಘಟ್ಟವೇ ಆಗಿದೆ.

ಕರಿಘಟ್ಟ ಅರಣ್ಯಕ್ಕೆ ಬೆಂಕಿ ಬಿದ್ದು, ಗಿಡಗಳು ಸುಟ್ಟು ಹೋಗಿರುವುದು ಈ ತಾಣದಲ್ಲಿ ಏಳೆಂಟು ವರ್ಷಗಳಿಂದ ಗಿಡಗಳನ್ನು ನೆಟ್ಟು ಪೋಷಿಸುತ್ತಿರುವ ‘ಪರಿಸರ’ ರಮೇಶ್ ನೇತೃತ್ವದ ಹಸಿರು ಪಡೆಯ ಸದಸ್ಯರ ಒಡಲಿಗೂ ಬೆಂಕಿ ಬಿದ್ದಂತಾಗಿದೆ. ಗಿಡಗಳನ್ನು ಮಕ್ಕಳಂತೆ ಪೋಷಿಸುತ್ತಿರುವ ಈ ತಂಡದ ಸದಸ್ಯರು ಬೆಂಕಿ ಬಿದ್ದ ಮರು ದಿನದಿಂದಲೇ ಜಾಗೃತರಾಗಿದ್ದಾರೆ.

ಬೆಂಕಿಯ ಹವೆಗೆ ಸುಟ್ಟಿರುವ ಗಿಡಗಳ ಪೈಕಿ ಬೇರಿನಲ್ಲಿ ಅಲ್ಪಸ್ವಲ್ಪ ಹಸಿಯ ಪಸೆ ಇರುವ ಗಿಡಗಳನ್ನು ಉಳಿಸಿಕೊಳ್ಳಲು ಈ ತಂಡ ಟೊಂಕ ಕಟ್ಟಿ ಕೆಲಸ ಮಾಡುತ್ತಿದೆ. 20 ಲೀಟರ್‌ ನೀರು ತುಂಬುವ ಕ್ಯಾನ್‌ಗಳಲ್ಲಿ ನೀರು ಹೊತ್ತೊಯ್ದು ಗಿಡಗಳ ಬುಡವನ್ನು ತೇವಗೊಳಿಸುತ್ತಿದೆ; ಬಾಡಿದ ಗಿಡಗಳನ್ನು ಮತ್ತೆ ಚಿಗುರಿಸುವ ಭಗೀರಥ ಪ್ರಯತ್ನ ಮಾಡುತ್ತಿದೆ.

ಈ ವರ್ಷ ಕರಿಘಟ್ಟ ಅರಣ್ಯಕ್ಕೆ 15 ದಿನಗಳಲ್ಲಿ ಎರಡು ಬಾರಿ ಬೆಂಕಿ ಬಿದ್ದಿದೆ. ಆಲ, ಅರಳಿ, ಮಾವು, ಬೇವು, ಬಸರಿ, ಬಾಗೆ, ಹತ್ತಿ, ಹಲಸು– ಹೀಗೆ ಬಗೆ ಬಗೆಯ ಗಿಡಗಳು ಬೆಂಕಿಯ ಕೆನ್ನಾಲಿಗೆಗೆ ಸುಟ್ಟು ಹೋಗಿವೆ. ಈ ಪೈಕಿ ಶೇ.20ರಷ್ಟು ಗಿಡಗಳು ಸಂಪೂರ್ಣ ಕರಕಲಾಗಿವೆ. ಉಳಿದ ಗಿಡಗಳನ್ನು ಉಳಿಸಿಕೊಳ್ಳಲೇಬೇಕು ಎಂಬ ಹಿರಿಯಾಸೆಯಿಂದ ಹಸಿರು ಪಡೆ ಕಾರ್ಯಕರ್ತರು ನೀರು ಹಾಕುವ ಕೆಲಸವನ್ನು ವ್ರತದಂತೆ ಮಾಡುತ್ತಿದ್ದಾರೆ.

ಶಿಕ್ಷಕರು, ರೈತರು, ಆಟೊ ಚಾಲಕರು, ವ್ಯಾಪಾರಿಗಳನ್ನು ಒಳಗೊಂಡಿರುವ ಹಸಿರು ಪಡೆ ಕಾರ್ಯಕರ್ತರ ತಂಡ ವಾರದಲ್ಲಿ ಮೂರು ದಿನ ಬಾಡಿದ ಗಿಡಗಳಿಗೆ ನೀರುಣಿಸುತ್ತಿದ್ದು, ಇಂದೋ ನಾಳೆಯೋ ಚಿಗುರುತ್ತವೆ ಎಂಬ ಆಸೆಗಣ್ಣಿನಿಂದ ನೋಡುತ್ತಿದೆ.

ಕಲ್ಲು ಬುರುಜಗಳೇ ಹೆಚ್ಚಾಗಿರುವ ಕರಿಘಟ್ಟ ಅರಣ್ಯದಲ್ಲಿ ಬೆಂಕಿಯ ಕೆನ್ನಾಲಿಗೆಗೆ ಸುಟ್ಟಿರುವ ಗಿಡಗಳಿಗೆ ಹನಿ ನೀರಾವರಿ ವ್ಯವಸ್ಥೆ ಮಾಡಲಾಗಿದೆ. ನಿರುಪಯುಕ್ತ ಪ್ಲಾಸ್ಟಿಕ್‌ ಬಾಟಲಿಗಳಿಗೆ ನೀರು ತುಂಬಿ, ಅದಕ್ಕೆ ನಳಿಕೆ ಅಳವಡಿಸಿ, ಗಿಡದ ಬುಡಕ್ಕೆ ಕಟ್ಟಿ ನೀರು ತೊಟ್ಟಿಕ್ಕುವಂತೆ ಮಾಡಿದ್ದಾರೆ. ಒಂದು ತಂಡ ಸಮೀಪದ ಲೋಕಪಾವನಿ ನದಿಯಿಂದ ನೀರು ತಂದರೆ, ಇನ್ನೊಂದು ತಂಡ ಆ ನೀರನ್ನು ಗಿಡಗಳಿಗೆ ಹಂಚುವ ಕೆಲಸ ಮಾಡುತ್ತಿದೆ. ಹಸಿರು ಪಡೆ ಕಾರ್ಯಕರ್ತರ ಶ್ರಮಕ್ಕೆ ಮೋಸ ಮಾಡಬಾರದು ಎಂಬಂತೆ ಕೆಲವು ಗಿಡಗಳು ಚಿಗುರೊಡೆದು ನಗೆ ಬೀರುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT