ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮದ್ದೂರು: ಆಕರ್ಷಣೆಯ ತಾಣವಾದ ‘ಸುಧಾಮೂರ್ತಿ ಅಮ್ಮ ಟೀ ಸ್ಟಾಲ್‌’

ಸಚಿವ ಸುರೇಶ್‌ಕುಮಾರ್‌ ಫೇಸ್‌ಬುಕ್‌ ಸಂದೇಶ, ಮಾಲೀಕನಿಗೆ ಕರೆಮಾಡಿ ಶುಭಾಶಯ ತಿಳಿಸಿದ ಸುಧಾಮೂರ್ತಿ
Last Updated 17 ಸೆಪ್ಟೆಂಬರ್ 2020, 12:01 IST
ಅಕ್ಷರ ಗಾತ್ರ

ಮದ್ದೂರು: ಬೆಂಗಳೂರು–ಮೈಸೂರು ರಾಷ್ಟ್ರೀಯ ಹೆದ್ದಾರಿ ಬದಿ, ಪಟ್ಟಣದ ಕೊಲ್ಲಿ ಸರ್ಕಲ್‌ನಲ್ಲಿರುವ ‘ಸುಧಾಮೂರ್ತಿ ಅಮ್ಮ ಟೀ ಸ್ಟಾಲ್‌’ ಈಗ ಆಕರ್ಷಣೆಯ ಕೇಂದ್ರಬಿಂದುವಾಗಿದೆ. ತಾಲ್ಲೂಕಿನ ಗೆಜ್ಜಲಗೆರೆ ಗ್ರಾಮದ ಯುವಕ ಸುನೀಲ್‌ಕುಮಾರ್‌ ವರ್ಷದ ಹಿಂದೆ ಆರಂಭಿಸಿದ್ದ ಸ್ಟಾಲ್‌ ಈಗ ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆಯುತ್ತಿದೆ.

ಇದಕ್ಕೆಲ್ಲಾ ಕಾರಣ; ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್‌.ಸುರೇಶ್‌ ಕುಮಾರ್‌ ಅವರ ಒಂದು ಫೇಸ್‌ಬುಕ್‌ ಪ್ರಕಟಣೆ. ಹೆದ್ದಾರಿಯಲ್ಲಿ ಓಡಾಡುವಾಗ ಸುರೇಶ್‌ಕುಮಾರ್ ಅವರಿಗೆ ಈ ಕ್ಯಾಂಟೀನ್‌ ವಿಶೇಷ ಅನ್ನಿಸಿತ್ತು. ತಕ್ಷಣ ಸುನೀಲ್‌ ಕುಮಾರ್‌ ವಿವರ ಸಂಗ್ರಹ ಮಾಡಿದರು. ಸುನೀಲ್‌ಕುಮಾರ್ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಸುರೇಶ್‌ಕುಮಾರ್‌ ಅವರು ಟೀ ಸ್ಟಾಲ್‌ ಚಿತ್ರ, ಮಾಲೀಕನ ಮೊಬೈಲ್‌ ನಂಬರ್‌ ಸಮೇತ ತಮ್ಮ ಫೇಸ್‌ಬುಕ್‌ ಪುಟದಲ್ಲಿ ಸಂದೇಶ ಪ್ರಕಟಿಸಿದ್ದರು.

‘ಸುಧಾಮೂರ್ತಿ ಅವರನ್ನು ಭೇಟಿಯಾಗದಿದ್ದರೂ ಅವರ ಸರಳತೆ, ಸಮಾಜ ಸೇವೆಯಿಂದ ಪ್ರೇರಣೆಗೊಂಡು ಸುನೀಲ್‌ಕುಮಾರ್‌ ಸುಧಾಮೂರ್ತಿ ಹೆಸರಿನಲ್ಲಿ ಟೀ ಸ್ಟಾಲ್‌ ಮಾಡಿದ್ದಾರೆ’ ಎಂದು ಸಚಿವರು ತಮ್ಮ ಖಾತೆಯಲ್ಲಿ ಬರೆದುಕೊಂಡಿದ್ದರು. ಇದಾದ ನಂತರ ‘ಸುಧಾಮೂರ್ತಿ ಅಮ್ಮ ಟೀ ಸ್ಟಾಲ್‌’ ನೆಟ್ಟಿಗರ ಆಕರ್ಷಣೆಯ ತಾಣವಾಯಿತು. ಹೆದ್ದಾರಿಯಲ್ಲಿ ಓಡಾಡುವವರು ಟೀ ಸ್ಟಾಲ್‌ಗೆ ಭೇಟಿ ನೀಡಿ ತೆರಳುತ್ತಿದ್ದರು.

ಈ ಸಂದೇಶ ಸ್ವತಃ ಇನ್ಫೋಸಿಸ್‌ ಫೌಂಡೇಶನ್ ಅಧ್ಯಕ್ಷೆ ಸುಧಾಮೂರ್ತಿ ಅವರಿಗೂ ತಲುಪಿತು. ಸುನೀಲ್‌ಕುಮಾರ್‌ ಜನ್ಮದಿನದ ದಿನದಂದು ಸ್ವತಃ ಸುಧಾಮೂರ್ತಿ ಅವರೇ ಕರೆ ಮಾಡಿ ಸುನೀಲ್‌ಕುಮಾರ್‌ ಅವರನ್ನು ಅಭಿನಂದಿಸಿದರು.

ತಮ್ಮ ಸರಳತೆ ಹಾಗೂ ಸಮಾಜ ಸೇವೆಯ ಬಗ್ಗೆ ಅಪಾರ ಗೌರವವಿದೆ. ನೆರೆ ಸಂತ್ರಸ್ತರಿಗೆ ನೆರವು, ಕೋವಿಡ್–19 ಸಂದರ್ಭದಲ್ಲಿ ತಾವು ಸಮಾಜಕ್ಕೆ ನೀಡಿದ ಕಾಣಿಕೆಗಳನ್ನು ಗಮನಿಸಿ ನಿಮ್ಮ ಹೆಸರನ್ನು ಟೀ ಸ್ಟಾಲ್‌ಗೆ ಇಟ್ಟಿದ್ದೇನೆ ಎಂದು ಸುಧಾಮೂರ್ತಿ ಅವರಿಗೆ ಹೇಳಿರುವುದಾಗಿ ಸುನೀಲ್‌ಕುಮಾರ್ ಆನಂದದಿಂದ ಹೇಳಿಕೊಳ್ಳುತ್ತಾರೆ.

‘ಕೊರೊನಾ ಸೋಂಕು ಕಡಿಮೆಯಾದ ತಕ್ಷಣ ಟೀ ಸ್ಟಾಲ್ ಗೆ ಭೇಟಿ ನೀಡಿ ಟೀ ಕುಡಿಯುವುದಾಗಿ ಸುಧಾಮೂರ್ತಿ ಅಮ್ಮ ತಿಳಿಸಿದ್ದಾರೆ. ಅವರ ಬರುವಿಕೆಗಾಗಿ ಕಾಯುತ್ತಿದ್ದೇನೆ’ ಎಂದು ಸುನೀಲ್‌ಕುಮಾರ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT