ಭಾನುವಾರ, ಆಗಸ್ಟ್ 1, 2021
21 °C
ಪ್ರಜಾಪ್ರಭುತ್ವ ದುರ್ಬಲಗೊಂಡು, ಮೇಳೈಸುತ್ತಿರುವ ಧಾರ್ಮಿಕತೆ; ಸಂಗೀತ ನಿರ್ದೇಶಕ ಹಂಸಲೇಖ

ಮಾದೇಗೌಡ ಪ್ರತಿಷ್ಠಾನ: ಪ್ರಶಸ್ತಿ ಪ್ರದಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಭಾರತೀನಗರ: ಪ್ರಸ್ತುತ ಪ್ರಜಾಪ್ರಭುತ್ವ ವ್ಯವಸ್ಥೆ ದುರ್ಬಲಗೊಂಡು, ಧಾರ್ಮಿಕ ವ್ಯವಸ್ಥೆ ಮೇಳೈಸುತ್ತಿದೆ ಎಂದು ಸಂಗೀತ ನಿರ್ದೇಶಕ ಹಂಸಲೇಖ ಅಭಿಪ್ರಾಯಪಟ್ಟರು.

ಪಟ್ಟಣದ ಭಾರತೀ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಡಾ.ಜಿ.ಮಾದೇಗೌಡ ಪ್ರತಿಷ್ಠಾನ ಶನಿವಾರ ಆಯೋಜಿಸಿದ್ದ ಸಮಾಜ ಸೇವಾ ಹಾಗೂ ಸಾವಯವ ಕೃಷಿಕ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.

ದೇಶವನ್ನು ಆಳುವ ರಾಜಕೀಯ ನಾಯಕರು ಕೃಷಿ ವಲಯವನ್ನು ನಿರ್ಲಕ್ಷಿಸುತ್ತಿದ್ದಾರೆ. ಇದರಿಂದ ಕೃಷಿಕರಿಗೆ ಅನ್ಯಾಯವಾಗುತ್ತಿದೆ. ಕೃಷಿ ವ್ಯವಸ್ಥೆ ಅನುತ್ಪಾದಕ ವಲಯವಾಗಿ ಮಾರ್ಪಟ್ಟಿದೆ. ಭಾರತವೆಂದರೆ ರೈತ. ಆದರೆ ರೈತನ ಬದುಕು ಬೀದಿಗೆ ಬಿದ್ದಿದೆ ಎಂದರು.

ನಮ್ಮ ಮುಂದಿನ ಪೀಳಿಗೆಗೆ ತೋರಿಸಲು ಆದರ್ಶ ವ್ಯಕ್ತಿಗಳು ಎಂದು ಯಾರೂ ಇರುವುದಿಲ್ಲ. ನಮ್ಮ ಮಕ್ಕಳಲ್ಲಿ ನೈತಿಕ ಪ್ರಜ್ಞೆ ಕುಸಿಯುತ್ತಿದೆ. ಶಿಕ್ಷಣದ ಮೂಲಕ ನೈತಿಕತೆಯನ್ನು ಮೇಲೆತ್ತಬೇಕಿದೆ ಎಂದರು.

ಸಾವಯವ ಕೃಷಿಕ ಪ್ರಶಸ್ತಿ ಸ್ವೀಕರಿಸಿದ ಶಿವಳ್ಳಿ ಬೋರೇಗೌಡ, ನಮ್ಮ ಆಹಾರ ಬೆಳೆಗಳಲ್ಲಿ ನಾಟಿ ತಳಿಗಳು ಮಾಯವಾಗಿ, ಹೈಬ್ರಿಡ್‌ ತಳಿಗಳು ಬಂದಿವೆ. ರಾಸಾಯನಿಕ ಸಿಂಪಡಣೆ ಮಾಡಿ, ಭೂಮಿಯನ್ನು ವಿಷವನ್ನಾಗಿ ಮಾರ್ಪಡಿಸುತ್ತಿದ್ದೇವೆ. ಆಹಾರಕ್ಕೂ ಆರೋಗ್ಯಕ್ಕೂ ನೇರ ಸಂಬಂಧವಿದೆ. ಸತ್ವವಿಲ್ಲದ ಆಹಾರ ತಿಂದು ಮಾನವ ಕಾಯಿಲೆಗೆ ತುತ್ತಾಗುತ್ತಿದ್ದಾನೆ ಎಂದರು.

ನಾವೆಲ್ಲಾ ರೈತನ ಋಣದಲ್ಲಿ ಅನ್ನ ತಿನ್ನುತ್ತಿದ್ದೇವೆ. ಕೃಷಿ ಅನುತ್ಪಾದಕ ವಲಯವಾಗಿರುವುದರಿಂದ ಬ್ಯಾಂಕ್‌ಗಳಲ್ಲಿ ಸಾಲ ಸಿಗುತ್ತಿಲ್ಲ. ಇದರಿಂದ ರೈತ ವ್ಯವಸಾಯವನ್ನೇ ಮರೆಯುತ್ತಿದ್ದಾನೆ. ರೈತನ ಕೆಲಸವನ್ನು ಯಾರೂ ಗುರುತಿಸುತ್ತಿಲ್ಲ. ನಮ್ಮ ಬೆನ್ನು ನಾವೇ ತಟ್ಟಿಕೊಳ್ಳಬೇಕಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕಸ್ತೂರಬಾ ಗಾಂಧಿ ಸ್ಮಾರಕ ಟ್ರಸ್ಟ್‌ನ ಪ್ರೊ.ಜಿ.ಬಿ.ಶಿವರಾಜು ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.

ಬಿಇಟಿ ಅಧ್ಯಕ್ಷ ಮಧು ಜಿ.ಮಾದೇಗೌಡ, ಪ್ರತಿಷ್ಠಾನದ ಅಧ್ಯಕ್ಷ ಬಿ.ಬಸವರಾಜು, ಡಾ.ಜಿ.ಎಂ.ಪ್ರಕಾಶ್‌, ಬಿ.ಎಂ. ನಂಜೇಗೌಡ, ಗುರುದೇವರಹಳ್ಳಿ ಸಿದ್ದೇಗೌಡ, ಚಂದೂಪುರ ಪಾಪಣ್ಣ, ಕಾರ್ಕಹಳ್ಳಿ ಬಸವೇಗೌಡ, ಬಿ.ಎಸ್. ಬೋರೇಗೌಡ, ಮ.ರಾಮಕೃಷ್ಣ, ಪುಟ್ಟಸ್ವಾಮೀಗೌಡ, ಕರಡಕೆರೆ ಶಿವಲಿಂಗೇಗೌಡ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು